ಇಸ್ಲಾಮಾಬಾದ್(ಆ.01): ಪಾಕಿಸ್ತಾನದಲ್ಲಿ ಬಂಧಿತನಾಗಿರುವ ಭಾರತೀಯ ಮಾಜಿ ನೌಕಾಪಡೆ ಅಧಿಕಾರಿ ಕುಲಭೂಷಣ್ ಜಾಧವ್ ಅವರನ್ನು ಭೇಟಿಯಾಗಲು ಭಾರತೀಯ ರಾಯಭಾರಿ ಕಚೇರಿ ಅಧಿಕಾರಿಗಳಿಗೆ ಪಾಕ್ ಸರ್ಕಾರ ಅನುಮತಿ ನೀಡಿದೆ.

ಜಾಧವ್’ಗೆ ಗೆ ಅಗತ್ಯ ರಾಜತಾಂತ್ರಿಕ ನೆರವು ನಿಡಲು ಸಮ್ಮತಿಸಿರುವ ಪಾಕ್, ಅದರ ಭಾಗವಾಗಿ ಭಾರತೀಯ ದೂತಾವಾಸ ಕಚೇರಿಯ ಅಧಿಕಾರಿಗಳ ಭೇಟಿಗೆ ಅನುವು ಮಾಡಿಕೊಟ್ಟಿದೆ.

ಕುಲಭೂಷಣ್ ಜಾಧವ್ ಕುರಿತ ಅಂತಾರಾಷ್ಟ್ರೀಯ ನ್ಯಾಯಾಲಯದ ತೀರ್ಪಿನ ಹಿನ್ನೆಲೆಯಲ್ಲಿ, ಪಾಕಿಸ್ತಾನ ಜಾಧವ್ ಭೇಟಿಗೆ ಭಾರತೀಯ ದೂತಾವಾಸ ಕಚೇರಿಗೆ ಅವಕಾಶ ನೀಡಿದ್ದು, ನಾಳೆ ಭಾರತೀಯ ಅಧಿಕಾರಿಗಳು ಜಾಧವ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಲಿದ್ದಾರೆ.

ಈ ಮಧ್ಯೆ ಕುಲಭೂಷಣ್ ಜಾಧವ್’ಗೆ ರಾಜತಾಂತ್ರಿಕ ನೆರವು ನೀಡುತ್ತಿರುವುದರ ಕುರಿತು ಪಾಕ್ ಸರ್ಕಾರ ಇದುವರೆಗೂ ಯಾವುದೇ ಹೇಳಿಕೆ ನೀಡಿಲ್ಲವಾದ್ದರಿಂದ, ನಾವು ಈ ಕುರಿತು ಭಾರತೀಯ ದೂತಾವಾಸ ಕಚೇರಿಯೊಂದಿಗೆ ನಿರಂತರ ಸಂಪರ್ಕದಲ್ಲಿರುವುದಾಗಿ ವಿದೇಶಾಂಗ ಸಚಿವಾಲಯದ ವಕ್ತಾರ ರವೀಶ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.