ನೀವಿನ್ನು ಡಾರ್ಕ್ ಗ್ರೆ ಪಟ್ಟಿಗೆ: FATF ಗುದ್ದಿತು ಪಾಕಿಸ್ತಾನದ ಮುಸುಡಿಗೆ!
ಪಾಕ್ ಮುಸುಡಿಗೆ ಗುದ್ದಿದ್ದ ಅಂತಾರಾಷ್ಟ್ರೀಯ ಹಣಕಾಸು ಕ್ರೀಯಾಪಡೆ| ಭಯೋತ್ಪಾದನೆ ನಿಗ್ರಹಿಸುವಲ್ಲಿ ಪಾಕಿಸ್ತಾನ ಸಂಪೂರ್ಣ ವಿಫಲ| ಡಾರ್ಕ್ ಗ್ರೆ ಪಟ್ಟಿಗೆ ಸೇರಿಸುವುದಾಗಿ FATF ಸಂಘಟನೆ ಎಚ್ಚರಿಕೆ| ಭಯೋತ್ಪಾದಕ ಸಂಘಟನೆಗಳ ವಿರುದ್ಧ ಶೀಘ್ರ ಕ್ರಮ ಕೈಗೊಳ್ಳುವಂತೆ ಪಾಕಿಸ್ತಾನಕ್ಕೆ ಅಂತಿಮ ಎಚ್ಚರಿಕೆ ನೀಡಿದ FATF| 27 ವಿಷಯಗಳ ಪೈಕಿ ಪಾಕಿಸ್ತಾನ ಕೇವಲ 6 ವಿಷಯ ನಿರ್ವಹಿಸುವಲ್ಲಿ ಪಾಕಿಸ್ತಾನ ಯಶಸ್ವಿ| ಪಾಕಿಸ್ತಾನವನ್ನು ಕಡು ಬೂದಿ ಪಟ್ಟಿಗೆ ಸೇರಿಸುವುದಾಗಿ ಎಚ್ಚರಿಕೆ ನೀಡಿದ FATF|
ಪ್ಯಾರಿಸ್(ಅ.15): ಭಯೋತ್ಪಾದನೆ ತಡೆಯಲಾಗದ ಪಾಕಿಸ್ತಾನಕ್ಕೆ ಅದೆಷ್ಟು ಉಗಿದರೂ ಬುದ್ಧಿ ಬರಲ್ಲ. ಈ ಸತ್ಯ ಅರಿತಿರುವ ಅಂತಾರಾಷ್ಟ್ರೀಯ ಹಣಕಾಸು ಕ್ರೀಯಾಪಡೆ(FATF), ಪಾಕಿಸ್ತಾನವನ್ನು ಡಾರ್ಕ್ ಗ್ರೆ ಪಟ್ಟಿಗೆ ಸೇರಿಸಲು ಸಜ್ಜಾಗಿದೆ.
ಭಯೋತ್ಪಾದನೆಯನ್ನು ಮಟ್ಟ ಹಾಕುವಂತೆ ಅಂತಿಮ ಎಚ್ಚರಿಕೆ ನೀಡಿರುವ FATF, ಪರಿಸ್ಥಿತಿಯಲ್ಲಿ ಯಾವುದೇ ಸುಧಾರಣೆ ಕಂಡು ಬರದಿದ್ದರೆ ಪಾಕಿಸ್ತಾನವನ್ನು ಡಾರ್ಕ್ ಗ್ರೆ(ಕಡು ಬೂದಿ) ಪಟ್ಟಿಗೆ ಸೇರಿಸುವುದಾಗಿ ಸ್ಪಷ್ಟಪಡಿಸಿದೆ.
FATF ಸಮಗ್ರ ಸಭೆಯಲ್ಲಿ ಪಾಕಿಸ್ತಾನವನ್ನು ಇತರ ಸದಸ್ಯ ರಾಷ್ಟ್ರಗಳಿಂದ ಪ್ರತ್ಯೇಕವಾಗಿಡುವ ಅಭಿಪ್ರಾಯ ಕೇಳಿ ಬಂದಿದ್ದು, ಭಯೋತ್ಪಾದನೆ ಮಟ್ಟ ಹಾಕದಿದ್ದರೆ ಡಾರ್ಕ್ ಗ್ರೆ ಪಟ್ಟಿಗೆ ಸೇರಿಸುವ ಸಂದೇಶ ರವಾನಿಸಲಾಯಿತು.
FATF ನಿಯಮಾವಳಿಯ 27 ವಿಷಯಗಳ ಪೈಕಿ ಪಾಕಿಸ್ತಾನ ಕೇವಲ 6 ವಿಷಯಗಳನ್ನು ನಿರ್ವಹಿಸುವಲ್ಲಿ ಯಶಸ್ವಿಯಾಗಿದ್ದು, ಇದೆ ಅ.18ಕ್ಕೆ ಪಾಕಿಸ್ತಾನದ ಭವಿಷ್ಯವನ್ನು ಸಂಘಟನೆ ನಿರ್ಧರಿಸಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
FATF ನಿಯಮ ಪ್ರಕಾರ ಗ್ರೆ ಲಿಸ್ಟ್(ಬೂದು ಪಟ್ಟಿ), ಬ್ಲ್ಯಾಕ್ ಲಿಸ್ಟ್ (ಕಪ್ಪು ಪಟ್ಟಿ) ಪಟ್ಟಿ ನಡುವೆ ಡಾರ್ಕ್ ಗ್ರೆ(ಕಡು ಬೂದಿ) ಹಂತವಿದ್ದು, ಬಲವಾದ ಎಚ್ಚರಿಕೆ ಸಂದೇಶವನ್ನು ನೀಡಲು ಇದನ್ನು ಬಳಸಲಾಗುತ್ತದೆ. ಇದೀಗ ಎಫ್ಎಟಿಎಫ್ ಕೊನೆಯ ಎಚ್ಚರಿಕೆ ಸಂದೇಶವನ್ನು ಪಾಕಿಸ್ತಾನಕ್ಕೆ ನೀಡಿದ್ದು, ಪಾಕಿಸ್ತಾನ ಭಯೋತ್ಪಾದನೆ ವಿರುದ್ಧ ಏನು ಕ್ರಮ ಕೈಗೊಳ್ಳಲಿದೆ ಎಂಬುದನ್ನು ಕಾದು ನೋಡಬೇಕಿದೆ.
ಅಕ್ರಮ ಹಣ ವರ್ಗಾವಣೆ, ಭಯೋತ್ಪಾದಕ ಸಂಘಟನೆಗಳಿಗೆ ಹಣಕಾಸು ನೆರವು ಇವುಗಳ ಮೇಲೆ ನಿಗಾ ಇಡಲು 1989ರಲ್ಲಿ ಅಂತರ ಸರ್ಕಾರ ಸಂಸ್ಥೆ FATF ಸಂಸ್ಥೆಯನ್ನು ಸ್ಥಾಪಿಸಲಾಗಿದೆ.