ಬಿಜಿಂಗ್(ಆ.09): ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನದ ರದ್ದತಿ ಹಿನ್ನೆಲೆಯಲ್ಲಿ, ಕಾಶ್ಮೀರ ವಿವಾದವನ್ನೇ ಉಸಿರಾಡುತ್ತಿದ್ದ ಪಾಕಿಸ್ತಾನ ಝಂಗಾಬಲ ಉಡಗಿ ಹೋಗಿದೆ.

ಇಸ್ಲಾಮಾಬಾದ್’ನಲ್ಲಿ ಕುಳಿತು ಭಾರತದ ವಿರುದ್ಧ ಯುದ್ಧದ ಮಾತುಗಳನ್ನಾಡುತ್ತಿರುವ ಪಾಕಿಸ್ತಾನಿ ನಾಯಕರು, ಸದ್ದಿಲ್ಲದೇ ಚೀನಾಗೆ ಹೋಗಿ ಸಹಾಯಕ್ಕಾಗಿ ಅಂಗಲಾಚುತ್ತಿದ್ದಾರೆ.

ಹೌದು, ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ ರದ್ದುಗೊಳಿಸಿರುವ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ನಿರ್ಧಾರ ಪಾಕಿಸ್ತಾನವನ್ನು ಅಕ್ಷರಶಃ ನಡುಗಿಸಿದೆ. ಭಾರತದ ವಿರುದ್ಧ ನೇರ ಯುದ್ಧದಲ್ಲಿ ಗೆಲ್ಲುವುದು ಅಸಾಧ್ಯ ಎಂದರಿತಿರುವ ಪಾಕ್ ನಾಯಕರು, ಸಂಭವನೀಯ ಯುದ್ಧಕ್ಕಾಗಿ ಚೀನಾದ ಸಹಾಯ ಬೇಡುತ್ತಿದೆ.

ಇದಕ್ಕೆ ಪುಷ್ಠಿ ಎಂಬಂತೆ ಪಾಕ್ ವಿದೇಶಾಂಗ ಸಚಿವ ಶಾ ಮೊಹ್ಮದ್ ಖುರೇಷಿ ಚೀನಾಗೆ ದೌಡಾಯಿಸಿದ್ದು, ಭಾರತದ ನಿರ್ಧಾರದಿಂದ ಉದ್ಭವಿಸಿರುವ ಬಿಕ್ಕಟ್ಟಿಗೆ ಪರಿಹಾರಕ್ಕಾಗಿ ಅಂಗಲಾಚಿದ್ದಾರೆ.
 

ಅಸಾಂವಿಧಾನಿಕ ಕ್ರಮಗಳ ಮೂಲಕ ಪ್ರಾದೇಶಿಕ ಶಾಂತಿ ಕದಡಲು ಭಾರತ ಯತ್ನಿಸುತ್ತಿದ್ದು, ಬಿಕ್ಕಟ್ಟು ಪರಿಹಾರಕ್ಕೆ ಚೀನಾ ನಾಯಕತ್ವವನ್ನು ವಿಶ್ವಾಸಕ್ಕೆ  ತೆಗೆದುಕೊಳ್ಳುವುದಾಗಿ ಖುರೇಷಿ ಸ್ಪಷ್ಟಪಡಿಸಿದ್ದಾರೆ.