ಚಿದಂಬರಂ ಪ್ರತ್ಯಕ್ಷ: ಕೇಂದ್ರ ಆಟ ಆಡ್ತಿದೆಯಂತೆ ಪರೋಕ್ಷ!
ಐಎನ್‌ಎಕ್ಸ್ ಮೀಡಿಯಾ ಭ್ರಷ್ಟಾಚಾರ ಪ್ರಕರಣ| 27 ಗಂಟೆಗಳ ಬಳಿಕ ಪ್ರತ್ಯಕ್ಷರಾದ ಪಿ.ಚಿದಂಬರಂ| ಕಾಂಗ್ರೆಸ್ ಕೇಂದ್ರ ಕಚೇರಿಯಲ್ಲಿ ಪಿ.ಚಿದಂಬರಂ ಸುದ್ದಿಗೋಷ್ಠಿ| ಕೇಂದ್ರ ಸರ್ಕಾರದ ವಿರುದ್ಧ ಪರೋಕ್ಷವಾಗಿ ಹರಿಹಾಯ್ದ ಮಾಜಿ ಕೇಂದ್ರ ಸಚಿವ| ‘ಈ ನೆಲದ ಕಾನೂನಿನ ಮೇಲೆ ತಮಗೆ ಸಂಪೂರ್ಣ ನಂಬಿಕೆ ಇದೆ’| ‘ನಾನು ತಪ್ಪಿಸಿಕೊಂಡು ಹೋಗಿರುವುದಾಗಿ ಮಾಧ್ಯಮಗಳಿಂದ ಸುಳ್ಳು ಸುದ್ದಿ’|
ನವದೆಹಲಿ(ಆ.21): ಐಎನ್‌ಎಕ್ಸ್ ಮೀಡಿಯಾ ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ, ಮಾಜಿ ಕೇಂದ್ರ ಸಚಿವ ಪಿ.ಚಿದಂಬರಂ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯ ತುರ್ತು ವಿಚಾರಣೆಗೆ ಸುಪ್ರೀಂ ಕೋರ್ಟ್ ನಿರಾಕರಿಸಿದೆ.
ಈ ಮಧ್ಯೆ ನಿನ್ನೆ ಸಂಜೆಯಿಂದ ನಾಪತ್ತೆಯಾಗಿದ್ದ ಪಿ.ಚಿದಂಬರಂ ಇಂದು ಕಾಂಗ್ರೆಸ್ ಕೇಂದ್ರ ಕಚೇರಿಯಲ್ಲಿ ದಿಢೀರ್ ಪ್ರತ್ಯಕ್ಷರಾಗಿದ್ದು, ತುರ್ತು ಪತ್ರಿಕಾಗೋಷ್ಠಿ ನಡೆಸಿ ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದರು.
ಇದೇ ವೇಳೆ ತಾವು ಪರಾರಿಯಾಗಿರುವುದಾಗಿ ಮಾಧ್ಯಮಗಳು ಸುಳ್ಳು ಸುದ್ದಿ ಹಬ್ಬಿಸಿದ್ದು, ತಾವು ಕೇವಲ ನ್ಯಾಯಕ್ಕಾಗಿ ಆಗ್ರಹಿಸಿ ಸುಪ್ರೀಂಕೋರ್ಟ್ ಮೆಟ್ಟಿಲೇರಿರುವುದಾಗಿ ತಿಳಿಸಿದರು.
ಈ ನೆಲದ ಕಾನೂನಿನ ಮೇಲೆ ತಮಗೆ ಸಂಪೂರ್ಣ ನಂಬಿಕೆ ಇದ್ದು, ಯಾವುದೇ ಕಾರಣಕ್ಕೂ ತಪ್ಪಿಸಿಕೊಳ್ಳುವ ಪ್ರಶ್ನೆಯೇ ಇಲ್ಲ ಎಂದು ಪಿ.ಚಿದಂಬರಂ ಸ್ಪಷ್ಟಪಡಿಸಿದರು.
ಇನ್ನು ಪ್ರಕರಣದಲ್ಲಿ ತಮ್ಮನ್ನು ಸಿಕ್ಕಿ ಹಾಕಿಸುವ ಪ್ರಯತ್ನ ನಡೆದಿದೆ ಎಂದು ಆರೋಪಿಸಿದ ಚಿದಂಬರಂ, ಸ್ವಾತಂತ್ರ್ಯ ಮತ್ತು ಆತ್ಮ ಗೌರವದ ಮೇಲೆ ಉದ್ದೇಶಪೂರ್ವಕವಾಗಿ ದಾಳಿ ಮಾಡಲಾಗುತ್ತಿದೆ ಎಂದು ಕೇಂದ್ರ ಸರ್ಕಾರದ ವಿರುದ್ಧ ಪರೋಕ್ಷವಾಗಿ ಹರಿಹಾಯ್ದರು.