ನವದೆಹಲಿ(ಆ.21): ಐಎನ್‌ಎಕ್ಸ್ ಮೀಡಿಯಾ ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ, ಮಾಜಿ ಕೇಂದ್ರ ಸಚಿವ ಪಿ.ಚಿದಂಬರಂ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯ ತುರ್ತು ವಿಚಾರಣೆಗೆ ಸುಪ್ರೀಂ ಕೋರ್ಟ್ ನಿರಾಕರಿಸಿದೆ.

ಈ ಮಧ್ಯೆ ಬಂಧನ ಭೀತಿಯಲ್ಲಿರುವ ಚಿದಂಬರಂ ಬೆಂಬಲಕ್ಕೆ ದೌಡಾಯಿಸಿರುವ ಕಾಂಗ್ರೆಸ್ ಹಾಗೂ ಗಾಂಧಿ ಪರಿವಾರ, ಚಿದಂಬರಂ ಪ್ರಕರಣದಲ್ಲಿ ಕೇಂದ್ರ ಸರ್ಕಾರವನ್ನು ಎಳೆದು ತಂದಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ, ಪಕ್ಷ ಚಿದಂಬರಂ ಬೆಂಬಲಕ್ಕೆ ನಿಲ್ಲಲಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಅದೇನೇ ಪರಿಣಾಮಗಳು ಎದುರಾದರೂ ನಾವೆಲ್ಲರೂ ಚಿದಂಬರಂ ಬೆಂಬಲಕ್ಕೆ ಗಟ್ಟಿಯಾಗಿ ನಿಲ್ಲಲಿದ್ದೇವೆ ಎಂದು ಹೇಳಿದ್ದಾರೆ. ಅಲ್ಲದೇ ಚಿದಂಬರಂ ವಿರುದ್ಧ ಹುನ್ನಾರ ನಡೆದಿದೆ ಎಂಬರ್ಥದಲ್ಲಿ ಪ್ರಿಯಾಂಕಾ ಟ್ವೀಟ್ ಮಾಡಿದ್ದಾರೆ.

ಇನ್ನು ಚಿದಂಬರಂ ಬೆಂಬಲಕ್ಕೆ ಬಂದಿರುವ ರಾಹುಲ್ ಗಾಂಧಿ, ಕೇಂದ್ರ ಹಣಕಾಸು ಮತ್ತು ಗೃಹ ಸಚಿವರಾಗಿ ಚಿದಂಬರಂ ಉತ್ತಮ ಸೇವೆ ಸಲ್ಲಿಸಿದ್ದು, ಪ್ರಸಕ್ತ ಕೇಂದ್ರ ಸರ್ಕಾರದ ಆರ್ಥಿಕ ವೈಫಲ್ಯಗಳನ್ನು ಟೀಕಿಸುವಲ್ಲಿ ಮುಂಚೂಣಿಯಲ್ಲಿದ್ದರು ಎಂದು ಹೇಳಿದ್ದಾರೆ.

ಚಿದಂಬರಂ ಹೇಳುವ ಸತ್ಯಗಳು ಹೇಡಿಗಳಿಗೆ ಕಹಿಯಾಗಿದ್ದವು. ಹೀಗಾಗಿ ಅವರನ್ನು ಅವಮಾನಕರವಾಗಿ ಬಂಧಿಸುವ ಹುನ್ನಾರ ನಡೆಸಲಾಗಿದೆ ಎಂದು ಪರೋಕ್ಷವಾಗಿ ರಾಹುಲ್ ಕೇಂದ್ರ ಸರ್ಕಾರದ ವಿರುದ್ದ ಕಿಡಿಕಾರಿದ್ದಾರೆ.