ಕರ್ತಾರ್‌ಪುರ್‌ಕ್ಕೆ ತೆರಳೋ ಭಾರತೀಯರಿಗೆ ಪಾಕಿಸ್ತಾನ ಬಸ್ ಚಾಲಕನ ಸಂದೇಶ!
ಗುರು ನಾನಕ್ ಜಯಂತಿ ಹಿನ್ನಲೆಯಲ್ಲಿ ಪಾಕಿಸ್ತಾನದ ಕರ್ತಾರ್ಪುರ್ನಲ್ಲಿರುವ ಗುರುದ್ವಾರಕ್ಕೆ ಹಲವು ಭಾರತೀಯ ಸಿಖ್ ಬಾಂಧವರು ಭೇಟಿ ನೀಡಿದ್ದಾರೆ. ಭಾರತೀಯರ ಭೇಟಿ ವೇಳೆ ಪಾಕಿಸ್ತಾನ ಬಸ್ ಚಾಲಕ ಸಂದೇಶ ರವಾನಿಸಿದ್ದಾನೆ.
ಕರ್ತಾರ್‌ಪುರ್(ನ.12): ನನ್ನ ಕೈಗಳು ನಿಮ್ಮನ್ನು ಸ್ವಾಗತಿಸಲು ಸದಾ ಕಾಯುತ್ತಿರುತ್ತವೆ. ಪವಿತ್ರ ಸ್ಥಳಕ್ಕೆ ನಿಮ್ಮನ್ನು ಕೊಂಡೊಯ್ಯಲು ನನಗೆ ಸಿಕ್ಕದ ಸೌಭಾಗ್ಯ. ಇದು ಪಾಕಿಸ್ತಾನ ಬಸ್ ಚಾಲಕ ಸದಾಮ್ ಹಸನ್, ಕರ್ತಾರ್‌ಪುರ್ ಗುರುದ್ವಾರಕ್ಕೆ ತೆರಳಿದ ಭಾರತೀಯ ಸಿಖ್ ಬಾಂಧವರಲ್ಲಿ ಹೇಳಿದ ಮಾತುಗಳು.
ಇದನ್ನೂ ಓದಿ: ಸಮಾನತೆ, ಭ್ರಾತೃತ್ವದ ಸಂಕೇತ ಗುರು ನಾನಕ್ ಜೀ ಜಯಂತಿ
ಕರ್ತಾರ್‌ಪುರ್ ಕಾರಿಡಾರ್ ಯೋಜನೆಯಿಂದ ಭಾರತೀಯ ಸಿಖ್ ಬಾಂಧವರು ಪಾಕಿಸ್ತಾನದ ಕರ್ತಾರ್ಪುರ್ನಲ್ಲಿರುವ ಗುರುದ್ವಾರಕ್ಕೆ ವೀಸಾ ಇಲ್ಲದೆ ತೆರಳಬಹುದು. ಗುರುನಾನಕ್ ಜಯಂತಿ ದಿನ ಭಾರತದಿಂದ ಹಲವು ಸಿಖ್ ಬಾಂಧಧವರು ಕರ್ತಾರ್‌ಪುರ್ ತೆರಳಿದ್ದಾರೆ. ಈ ವೇಳೆ ಭಾರತ ಗಡಿಯಿಂದ ಕರ್ತಾರ್‌ಪುರ್‌ಗೆ ಪಾಕಿಸ್ತಾನ ಬಸ್ ವ್ಯವಸ್ಥೆ ಮಾಡಲಾಗಿದೆ. ಈ ಬಸ್ ಚಾಲಕ ಸದಾಮ್ ಹಸನ್, ಭಾರತೀಯರನ್ನು ಪ್ರೀತಿಯಿಂದ ಗುರುದ್ವಾರಕ್ಕೆ ಕರೆದೊಯ್ಯುವ ಕೆಲಸ ಮಾಡುತ್ತಿದ್ದಾರೆ.
ಇದನ್ನೂ ಓದಿ: ಸಿಖ್ಖರ ಬಹುಕಾಲದ ಬೇಡಿಕೆ ಸಾಕಾರ; ಇಂಡೋ-ಪಾಕ್‌ನ ಸಂಬಂಧ ಸೇತುವಾಗುತ್ತಾ ಕಾರಿಡಾರ್?
ನನಗೆ ಅತೀವ ಸಂತಸವಿದೆ. ನೀವು ನಿಮ್ಮ ಮನೆಗೆ ಬಂದಿದ್ದೀರಿ. ನಾವು ಹಜ್ ಯಾತ್ರೆ ಕೈಗೊಂಡ ರೀತಿ. ಕರ್ತಾಪುರ್ ಗುರುನಾನಕ್ ಕೃಪೆಯಿಂದ ಪಂಜಾಬ್ ಮತ್ತೆ ಒಂದಾಗುತ್ತಿದೆ. ಇದಕ್ಕಿಂತ ಖುಷಿಯ ವಿಚಾರ ಮತ್ತೊಂದಿಲ್ಲ. ನಾನು ಅಲ್ಲಾ ಬಳಿ ಪ್ರಾರ್ಥನೆ ಮಾಡುತ್ತೇನೆ. ನೀವೆಲ್ಲಾ ಮತ್ತೆ ಮತ್ಕೆ ಕರ್ತಾರ್‌ಪುರಕ್ಕೆ ಭೇಟಿ ನೀಡಿ, ನಾನು ಪ್ರೀತಿಯಿಂದ ಸ್ವಾಗತಿಸಲು ಸದಾ ಸಿದ್ದ ಎಂದು ಚಾಲಕ ಹೇಳಿದ್ದಾನೆ.
ಕರ್ತಾರ್‌ಪುರ್ ಕಾರಿಡಾರ್ ಯೋಜನೆ ನವೆಂಬರ್ 9ಕ್ಕೆ ಉದ್ಘಾಟನೆಯಾಗಿದೆ. ನ.12 ರಂದುಗುರು ನಾನಕರ 550ನೇ ಜಯಂತಿಗೆ ಹಿನ್ನಲೆಯಲ್ಲಿ ಹಲವು ಭಾರತೀಯರು ಈಗಾಗಲೇ ಕರ್ತಾರ್‌ಪುರ್ ಗುರುದ್ವಾರಕ್ಕೆ ಭೇಟಿ ನೀಡಿದ್ದಾರೆ. ದೇರಾ ಬಾಬ್ ನಾನಕ್ ಅಂತಾರಾಷ್ಟ್ರೀಯ ಗಡಿ ಮೂಲಕ ಭಾರತೀಯರು ಪಾಕಿಸ್ತಾನದ ಕರ್ತಾರ್‌ಪುರ್‌ಗೆ ತೆರಳಿದ್ದಾರೆ. ಗುರು ನಾನಕ್ ತಮ್ಮ ಅಂತಿಮ 18 ವರ್ಷ ಕಾಲ ಇದೇ ಕರ್ತಾರ್‌ಪುರ್‌ದಲ್ಲಿ ಕಳೆದಿದ್ದರು.