ಬಹುನಿರೀಕ್ಷಿತ ಕರ್ತಾರ್‌ಪುರ ಕಾರಿಡಾರ್‌ ಇಂದು ಉದ್ಘಾಟನೆಗೊಳ್ಳಲಿದೆ. ಈ ಮೂಲಕ ಸಿಖ್‌ ಜನಾಂಗದ ಎರಡು ದಶಕಗಳ ಭಾವನಾತ್ಮಕ ಬೇಡಿಕೆ ಕೊನೆಗೂ ಸಾಕಾರಗೊಳ್ಳಲಿದೆ. ಜೊತೆಗೆ ಎರಡೂ ದೇಶಗಳ ಸಂಬಂಧಕ್ಕೆ ಹೊಸ ಭಾಷ್ಯ ಬರೆಯುವ ಸಾಧ್ಯತೆ ಇದೆ.

ಅಷ್ಟಕ್ಕೂ ಎರಡೂ ದೇಶಗಳ ನಡುವೆ ಸಂಪರ್ಕ ಬೆಸೆಯುವ ಈ ಕಾರಿಡಾರ್‌ನ ವಿಶೇಷತೆ ಏನು? ಇದರ ಹಿನ್ನೆಲೆ ಏನು? ಉಭಯ ದೇಶಗಳ ನಡುವೆ ನಡೆದ ಈ ಒಪ್ಪಂದದ ಜೊತೆಗೆ ತಳುಕು ಹಾಕಿಕೊಂಡಿರುವ ವಿವಾದಗಳೇನು? ಈ ಎಲ್ಲಾ ವಿಚಾರಗಳ ವಿವರ ಇಲ್ಲಿದೆ.

ಅಯೋಧ್ಯೆ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಲ್ಲ: ಸುನ್ನಿ ವಕ್ಫ್ ಬೋರ್ಡ್ ಸ್ಪಷ್ಟನೆ!

ಏನಿದು ಕರ್ತಾರ್‌ಪುರ ಕಾರಿಡಾರ್‌?

ಭಾರತ ಹಾಗೂ ಪಾಕಿಸ್ತಾನದ ಗಡಿಯಲ್ಲಿ ನಿರ್ಮಾಣವಾಗುತ್ತಿರುವ ಕಾರಿಡಾರ್‌ ಇದಾಗಿದ್ದು, ಭಾರತ ಪಂಜಾಬ್‌ನ ಗುರುದಾಸ್‌ಪುರ ಜಿಲ್ಲೆಯ ಡೇರಾಬಾಬಾ ನಾಯಕ್‌ ಸಾಹೇಬ್‌ ದೇಗುಲದಿಂದ, ಪಾಕಿಸ್ತಾನದ ಪಂಜಾಬ್‌ ಪ್ರಾಂತ್ಯದ ನರ್ವಾಲ್‌ ಜಿಲ್ಲೆಯಲ್ಲಿರುವ ಗುರುದ್ವಾರ ದರ್ಬಾರ್‌ ಸಾಹಿಬ್‌ ದೇಗುಲಕ್ಕೆ ಸಂಪರ್ಕ ಕಲ್ಪಿಸುವ ಚತುಷ್ಪಥ ರಸ್ತೆ ಇದು. ಪಾಕಿಸ್ತಾನದಲ್ಲಿರುವ ಸಿಖ್ಖರ ಪವಿತ್ರ ಸ್ಥಳ ದರ್ಬಾರ್‌ ಸಾಹಿಬ್‌ಗೆ ವೀಸಾ ರಹಿತ ಪ್ರಯಾಣ ಕಲ್ಪಿಸುವ ಯೋಜನೆ ಇದಾಗಿದೆ.

ಎರಡೂ ರಾಷ್ಟ್ರಗಳು ತಮ್ಮ ಗಡಿವರೆಗೆ ಕಾರಿಡಾರ್‌ ನಿರ್ಮಾಣ ಮಾಡಿದ್ದು, ಒಟ್ಟು 6 ಕಿ.ಮೀ ವಿಸ್ತೀರ್ಣ ಇದೆ. ಇದುವರೆಗೆ ಭಾರತೀಯರು ನೇರವಾಗಿ ಇಲ್ಲಿಗೆ ಹೋಗುವಂತಿರಲಿಲ್ಲ. ಬದಲಿಗೆ ಪಾಕ್‌ನ ವೀಸಾ ಪಡೆದು, ಲಾಹೋರ್‌ಗೆ ಹೋಗಿ ಅಲ್ಲಿಂದ 120 ಕಿ.ಮೀ ಬಸ್‌ನಲ್ಲಿ ಪ್ರಯಾಣಿಸಿ ಕರ್ತಾರ್‌ಪುರ ಸಾಹಿಬ್‌ ಕ್ಷೇತ್ರಕ್ಕೆ ತಲುಪಬೇಕಿತ್ತು.

ಸಿಖ್ಖರಿಗೇಕೆ ಕರ್ತಾರ್‌ಪುರ ಪವಿತ್ರ

ಕರ್ತಾರ್‌ಪುರ ಎಂದರೆ ದೇವರ ಸ್ಥಳ ಎಂದರ್ಥ. ಸಿಖ್ಖರ ಪರಮೋಚ್ಛ ಗುರು ಗರುನಾನಕ್‌ ಸಾಹೇಬ್‌ ಕ್ರಿ.ಶ 1504ರಲ್ಲಿ ರಾವಿ ನದಿಯ ಬಲ ದಂಡೆಯಲ್ಲಿ ಕರ್ತಾರ್‌ಪುರನ್ನು ಸ್ಥಾಪಿಸಿ, ತಮ್ಮ ಮರಣದವರೆಗೆ ಸುಮಾರು 20 ವರ್ಷ ಅಲ್ಲಿಯೇ ವಾಸ ಮಾಡುತ್ತಾರೆ. ಅಲ್ಲದೇ ಸಿಖ್‌ ಧರ್ಮದ ಪವಿತ್ರ ಗ್ರಂಥಗಳೂ ಕೂಡ ಇಲ್ಲೇ ಇರುವುದರಿಂದ ಸಿಖ್ಖರಿಗೆ ಅದು ಪವಿತ್ರ ಸ್ಥಳ. ಹಾಗಾಗಿ ತನ್ನ ಜೀವನದ 20 ವರ್ಷವನ್ನು ಕರ್ತಾರ್‌ಪುರದಲ್ಲೇ ಕಳೆದಿದ್ದ ಗುರುನಾನಾಕ್‌ ಹೆಸರಿನಲ್ಲಿ, 1925ರಲ್ಲಿ ಅಂದಿನ ಪಟಿಯಾಲದ ಮಹರಾಜ ಸರ್ದಾರ್‌ ಭೂಪಿಂದರ್‌ ಸಿಂಗ್‌ ಒಂದೂವರೆ ಲಕ್ಷ ರುಪಾಯಿ ವೆಚ್ಚದಲ್ಲಿ ದರ್ಬಾರ್‌ ಸಾಹಿಬ್‌ ಗುರುದ್ವಾರವನ್ನು ನಿರ್ಮಾಣ ಮಾಡುತ್ತಾನೆ. ಪ್ರತಿ ವರ್ಷ ನ.12ರಂದು ಸಿಖ್‌ ಧರ್ಮಗುರು ಬಾಬಾ ಗುರುನಾನಕ್‌ರ ಜಯಂತ್ಯುತ್ಸವ ವೇಳೆ ಇಲ್ಲಿಗೆ ಭೇಟಿ ನೀಡುವುದು ಸಿಖ್ಖರ ಸಂಪ್ರದಾಯ. ಈ ಬಾರಿ ಗುರುನಾನಕ್‌ರ 550ನೇ ಜಯಂತ್ಯುತ್ಸವ ಆಗಿದ್ದರಿಂದ ಮತ್ತಷ್ಟುಮಹತ್ವ ಪಡೆದುಕೊಂಡಿದೆ.

ಅಯೋಧ್ಯೆ ತೀರ್ಪಿಗೂ ಮುನ್ನ ಪುರಾತತ್ತ ಇಲಾಖೆ ಕಲೆ ಹಾಕಿದ್ದ ಈ 10 ಸಾಕ್ಷ್ಯಗಳು

ಭಾರತದಲ್ಲಿ ನಿಂತು ಬೈನಾಕ್ಯುಲರ್‌ ಮೂಲಕ ದರ್ಬಾರ್‌ ಸಾಹಿಬ್‌ ದರ್ಶನ!

1947ರಲ್ಲಿ ಭಾರತ ಹಾಗೂ ಪಾಕಿಸ್ತಾನ ಇಬ್ಭಾಗವಾದಾಗ ಕರ್ತಾರ್‌ಪುರ ಪಾಕಿಸ್ತಾನದ ಭಾಗವಾಗುತ್ತದೆ. ಬಳಿಕ ರಾವಿ ನದಿಗೆ ಅಡ್ಡಲಾಗಿ ಕಟ್ಟಿದ್ದ ಸೇತುವೆ ಮೂಲಕ, ಸಿಖ್ಖರು ಕರ್ತಾರ್‌ಪುರಕ್ಕೆ ಭೇಟಿ ನೀಡುತ್ತಿದ್ದರು. 1965ರ ಇಂಡೋ-ಪಾಕ್‌ ಯುದ್ಧದಲ್ಲಿ ಸೇತುವೆ ಧ್ವಂಸವಾದ ಬಳಿಕ ಕರ್ತಾರ್‌ಪುರಕ್ಕೆ ಇದ್ದ ಸಂಪರ್ಕ ಕಡಿತವಾಯ್ತು. ಭಾರತದ ಗಡಿಯಲ್ಲಿ ನಿಂತರೆ ದರ್ಬಾರ್‌ ಸಾಹಿಬ್‌ ಸ್ಪಷ್ಟವಾಗಿ ಕಾಣಿಸುತ್ತದೆ.

ಹಾಗಾಗಿ ಡೇರಾಬಾಬಾ ನಾಯಕ್‌ ಗುರುದ್ವಾರದಿಂದ ಕರ್ತಾರ್‌ಪುರ ದೇಗುಲ ದರ್ಶನಕ್ಕೆ ಬೈನಾಕ್ಯುಲರ್‌ಗಳನ್ನು ಅಳವಡಿಸಲಾಗಿತ್ತು. ಅತ್ತ ಪಾಕಿಸ್ತಾನ ಸೇನೆ ದರ್ಬಾರ್‌ ಸಾಹಿಬ್‌ ವೀಕ್ಷಣೆಗೆ ತೊಡಕಾಗುತ್ತಿದ್ದ ಆನೆ ಗಾತ್ರದ ಹುಲ್ಲುಗಳನ್ನು ಕತ್ತರಿಸುತ್ತಿತ್ತು. ಇದಕ್ಕಾಗಿಯೇ ದೇಶದ ಅಂತಾರಾಷ್ಟ್ರೀಯ ಗಡಿಯಲ್ಲಿ ಹೈಪವರ್‌ ಟೆಲಿಸ್ಕೋಪ್‌ಗಳನ್ನು, ಬೈನಾಕ್ಯುಲರ್‌ಗಳನ್ನು ಅಳವಡಿಸಲಾಗಿದೆ.

ಕಾರಿಡಾರ್‌ಗೆ ಶ್ರೀಕಾರ ಹಾಕಿದ್ದು ಅಟಲ್‌

ಕರ್ತಾರ್‌ಪುರ ಕಾರಿಡಾರ್‌ ನಿರ್ಮಾಣಕ್ಕೆ ಬಹಳ ಹಿಂದಿನಿಂದ ಬೇಡಿಕೆ ಇತ್ತಾದರೂ ಅಧಿಕೃತ ಬೇಡಿಕೆ ಇಟ್ಟಿದ್ದು ಅಟಲ್‌ ಬಿಹಾರಿ ವಾಜಪೇಯಿ. 1999ರಲ್ಲಿ ಭಾರತ ಹಾಗೂ ಪಾಕಿಸ್ತಾನ ನಡುವೆ ಶಾಂತಿ ಒಪ್ಪಂದ ನಡೆಯುವ ವೇಳೆ ಕರ್ತಾರ್‌ಪುರ ಕಾರಿಡಾರ್‌ ನಿರ್ಮಾಣದ ಬಗ್ಗೆ ವಾಜಪೇಯಿ ಹಾಗೂ ನವಾಜ್‌ ಶರೀಫ್‌ ಮಧ್ಯೆ ಮಾತುಕತೆ ನಡೆದಿತ್ತು. ಆದರೆ ಕಾರಣಗಳಿಂದ ಅದು ನೆನೆಗುದಿಗೆ ಬಿದ್ದಿತ್ತು. ಈ ಹಳೆಯ ಬೇಡಿಕೆ 2018ರಲ್ಲಿ ಮತ್ತೊಮ್ಮೆ ಪ್ರಸ್ತಾಪವಾಗಿ ಅದೇ ವರ್ಷ ನವೆಂಬರ್‌ 22ರಂದು ಉಭಯ ರಾಷ್ಟ್ರಗಳು ಕಾರಿಡಾರ್‌ ನಿರ್ಮಾಣಕ್ಕೆ ತೀರ್ಮಾನಿಸಿದವು.

ಡೇರಾ ಬಾಬಾ ನಾನಕ್‌ನಿಂದ ಅಂತಾರಾಷ್ಟ್ರೀಯ ಗಡಿಯವರೆಗೆ ನಾವು ಕಾರಿಡಾರ್‌ ಅಭಿವೃದ್ಧಿಪಡಿಸುತ್ತೇವೆ, ಗಡಿಯಾಚೆಯಿಂದ ಕರ್ತಾರ್‌ಪುರದ ವರೆಗೆ ನೀವು ಅಭಿವೃದ್ಧಿಪಡಿಸಿ ಎಂದು ಭಾರತ ಪಾಕಿಸ್ತಾನಕ್ಕೆ ಸಲಹೆ ನೀಡಿತ್ತು. ಅದರಂತೆ ನ.26ರಂದು ಭಾರತದಲ್ಲಿ ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಕಾರಿಡಾರ್‌ಗೆ ಚಾಲನೆ ನೀಡಿದ್ದರು. ಅತ್ತ ನ.28ರಂದು ಪಾಕ್‌ ಪ್ರಧಾನಿ ಇಮ್ರಾನ್‌ ಖಾನ್‌ ಶಂಕುಸ್ಥಾಪನೆ ನೆರವೇರಿಸಿದ್ದರು.

ಹೇಗಿದೆ ಕಾರಿಡಾರ್‌?

ಎರಡೂ ರಾಷ್ಟ್ರಗಳು ಅಂತಾರಾಷ್ಟ್ರೀಯ ಗುಣಮಟ್ಟದ ಕಾರಿಡಾರ್‌ ನಿರ್ಮಾಣ ಮಾಡಿವೆ. ಭಾರತ 2019ರ ಏಪ್ರಿಲ್‌ನಲ್ಲಿ ಕಾರಿಡಾರ್‌ ನಿರ್ಮಾಣ ಆರಂಭಿಸಿದ್ದು, ಈಗಾಗಲೇ ಪೂರ್ತಿಯಾಗಿದೆ. ಭಾರತ ಡೇರಾ ಬಾಬಾ ನಾನಕ್‌ನಿಂದ ಅಂದಾಜು 2 ಕಿ.ಮೀ ಉದ್ದದ ಚತುಷ್ಪಥ ಹೆದ್ದಾರಿ ಹಾಗೂ 100 ಮೀಟರ್‌ ಉದ್ದದ ಸೇತುವೆ ನಿರ್ಮಾಣ ಮಾಡಿದೆ.

ಜತೆಗೆ ಚೆಕ್‌ಪೋಸ್ಟ್‌, ಅಂತಾರಾಷ್ಟ್ರೀಯ ಗುಣ ಮಟ್ಟದ ಹೋಟೆಲ್‌, ಕಾರ್‌ ಪಾರ್ಕಿಂಗ್‌ ವ್ಯವಸ್ಥೆ, ಪವರ್‌ ಸ್ಟೇಷನ್‌ ಹಾಗೂ ಪ್ರವಾಸಿ ಮಾಹಿತಿ ಕೇಂದ್ರ ಇದೆ. ಪಾಕಿಸ್ತಾನ ರಾವಿ ನದಿಗೆ ಅಡ್ಡಲಾಗಿ 800 ಮೀ. ಉದ್ದದ ಸೇತುವೆ ಹಾಗೂ 4 ಕಿ.ಮೀ ಹೆದ್ದಾರಿಯನ್ನು ನಿರ್ಮಾಣ ಮಾಡಿದೆ. ಗಡಿ ಸಮೀಪ ಇಮಿಗ್ರೇಶನ್‌ ಕಚೇರಿ ಕೂಡ ಸ್ಥಾಪಿಸಲಾಗಿದೆ.

ವಿವಾದದ ನಡುವೇ ಆರಂಭ

ಎರಡೂ ರಾಷ್ಟ್ರಗಳ ನಡುವೆ ಸಂಬಂಧ ಬೆಸೆಯಲಿದೆ ಎಂದು ಹೇಳಲಾದ ಈ ಕಾರಿಡಾರ್‌ ವಿವಾದಗಳಿಂದಲೇ ಹೆಚ್ಚು ಸುದ್ದಿ ಮಾಡಿದೆ. ಕಾರಿಡಾರ್‌ ಉದ್ಘಾಟನೆಗೆ ಪ್ರಧಾನಿ ನರೇಂದ್ರ ಮೋದಿಗೆ ಬದಾಲಾಗಿ ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌ ಅವರನ್ನು ಆಮಂತ್ರಿಸುವ ಮೂಲಕ ಪಾಕ್‌ ಉದ್ಧಟತದನ ಮೆರೆದಿತ್ತು.

ಪ್ರಯಾಣ ದರ:

ಮೊದಲಿಗೆ ಉಚಿತ ಪ್ರಯಾಣ ಕಲ್ಪಿಸುವುದಾಗಿ ಹೇಳಿದ್ದ ಪಾಕಿಸ್ತಾನ, ಬಳಿಕ ಪ್ರತಿಯೊಬ್ಬರಿಗೆ 20 ಡಾಲರ್‌ (ಸುಮಾರ್‌ 1426 ರು.) ವಿಧಿಸಿತ್ತು. ಇದಾದ ಬಳಿಕ ಉದ್ಘಾಟನ ದಿನವಾದ ನ.9 ಹಾಗೂ ಗುರುನಾನಕ್‌ ಜಯಂತಿ ನ.12ರಂದು ಉಚಿತ ಪ್ರಯಾಣ ಕಲ್ಪಿಸುವುದಾಗಿ ಪಾಕ್‌ ಪ್ರಧಾನಿ ಇಮ್ರಾನ್‌ ಘೋಷಿಸಿದ್ದರು. ಆದರೆ ಈ ದಿನದಂದೂ ಪ್ರಯಾಣ ದರ ನೀಡಬೇಕು ಎಂದು ಹೇಳಲಾಗುತ್ತಿದೆ.

ಪಾಕ್‌ ವಿಡಿಯೋ ವಿವಾದ:

ಕಾರಿಡಾರ್‌ ಉದ್ಘಾಟನೆಗೂ ಮುನ್ನ ಪಾಕ್‌ ಬಿಡುಗಡೆ ಮಾಡಿದ ವಿಡಿಯೋದಲ್ಲಿ ಪ್ರತ್ಯೇಕ ಖಲಿಸ್ತಾನ್‌ ಪ್ರತ್ಯೇಕತಾವಾದಿ ಸಂಘಟನೆ ನಾಯಕ ಜರ್ನೈಲ್‌ ಸಿಂಗ್‌ ಭಿಂದ್ರನ್‌ವಾಲೆ , ಮೇ.ಜ. ಶಬೇಬ್‌ಸಿಂಗ್‌ ಮತ್ತು ಆಮ್ರಿಕ್ಸಿಂಗ್‌ ಖಲ್ಸಾ ಸೇರಿದಂತೆ ಹಲವು ಉಗ್ರರ ಪೋಸ್ಟರ್‌ಗಳು ಕಾಣಿಸಿಕೊಂಡಿತ್ತು.

ಉಗ್ರರ ಕರಿನೆರಳು:

ಕಾರಿಡಾರ್‌ ಉದ್ಘಾಟನೆಗೆ ಕೆಲ ದಿನಗಳ ಹಿಂದೆಯೇ ಕರ್ತಾರ್‌ಪುರ ಇರುವ ನರ್ವಾಲ್‌ನಲ್ಲಿ ಉಗ್ರರಿಗೆ ತರಬೇತಿ ಶಿಬಿರಗಳು ನಡೆಯುತ್ತಿದೆ ಎಂದು ಗುಪ್ತಚರ ಮಾಹಿತಿ ಬಂದಿದೆ. ಇದು ಭಕ್ತರ ಆತಂಕಕ್ಕೂ ಕಾರಣವಾಗಿದೆ.

ವೀಸಾ ಬೇಡ ಆದರೆ ಪಾಸ್‌ಪೋರ್ಟ್‌ ಬಗ್ಗೆ ಗೊಂದಲ

ಕರ್ತಾರ್‌ಪುರ ಕಾರಿಡಾರ್‌ ಮೂಲಕ ಗುರುದ್ವಾರ ದರ್ಬಾರ್‌ ಸಾಹಿಬ್‌ಗೆ ವೀಸಾ ರಹಿತ ಪ್ರಯಾಣ ಇದ್ದರೂ, ಪಾಸ್‌ಪೋರ್ಟ್‌ ಬೇಕೋ ಬೇಡವೋ ಎಂಬ ಬಗ್ಗೆ ಗೊಂದಲಕ್ಕೆ ಇನ್ನೂ ಉತ್ತರ ಸಿಕ್ಕಿಲ್ಲ. ಪಾಸ್‌ಪೋರ್ಟ್‌ ಕಡ್ಡಾಯವಲ್ಲ, ಅಧಿಕೃತ ಗುರುತಿನ ಚೀಟಿ ಇದ್ದರೆ ಸಾಕು ಎಂದು ಇಮ್ರಾನ್‌ ಖಾನ್‌ ಹೇಳಿದ್ದರೂ, ಭದ್ರತಾ ದೃಷ್ಟಿಯಿಂದ ಪಾಸ್‌ಪೋರ್ಟ್‌ ಕಡ್ಡಾಯ ಎಂದು ಪಾಕ್‌ ಸೇನೆ ಹೇಳಿದೆ. ಮಾತ್ರವಲ್ಲ ಕರ್ತಾರ್‌ಪುರಕ್ಕೆ ಬರುವ ಸಿಖ್‌ ಭಕ್ತರಿಗೆ ಒಂದು ವರ್ಷದವರೆಗೆ ಪಾಸ್‌ಪೋರ್ಟ್‌ ಮುಕ್ತ ಭೇಟಿಗೆ ಅವಕಾಶ ನೀಡಲಾಗಿದೆ ಎಂದು ಪಾಕ್‌ ವಿದೇಶಾಂಗ ಸಚಿವಾಲಯ ಹೇಳಿದ್ದು ಮತ್ತಷ್ಟುಗೊಂದಲಕ್ಕೆ ಕಾರಣವಾಗಿದೆ.

ಪ್ರಯಾಣಕ್ಕಿರುವ ನಿಬಂಧನೆಗಳು

- ಆನ್‌ಲೈನ್‌ನಲ್ಲಿ ನೋಂದಣಿ ಮಾಡಿಕೊಳ್ಳಬೇಕು.

-ಒಂದು ದಿನ ಪ್ರಯಾಣ ಇದಾಗಿರಲಿದ್ದು, ಬೆಳಿಗ್ಗೆ ಹೊರಟು ಸಂಜೆಯೊಳಗೆ ಪ್ರಯಾಣ ಮುಗಿಸಬೇಕು.

- 11 ಸಾವಿರಕ್ಕಿಂತ ಹೆಚ್ಚು ಹಣ, 7 ಕೆಜಿಗಿಂತ ಹೆಚ್ಚಿನ ತೂಕ ತೆಗೆದುಕೊಂಡು ಹೋಗುವಂತಿಲ್ಲ.

- ಕರ್ತಾರ್‌ಪುರ ಬಿಟ್ಟು ಬೇರೆಡೆ ತೆರಳಲು ಅನುಮತಿ ಇಲ್ಲ.

-ಯಾತ್ರಾರ್ಥಿಗಳು ಬಯೋಮೆಟ್ರಿಕ್‌ ತಪಾಸಣೆಗೆ ಒಳಗಾಗಬೇಕು.

-ಮದ್ಯಪಾನ, ಧೂಮಪಾನ, ಫೋಟೋಗ್ರಫಿ ಹಾಗೂ ಸಂಗೀತಕ್ಕೆ ಅವಕಾಶ ಇಲ್ಲ.

ಉಭಯ ರಾಷ್ಟ್ರಗಳ ಸಂಬಂಧ ಸುಧಾರಣೆ ಸಾಧ್ಯವೇ?

ಸದಾ ಹಾವು ಮುಂಗುಸಿಗಳಂತೆ ಕಚ್ಚಾಡುತ್ತಿರುವ ಭಾರತ ಹಾಗೂ ಪಾಕಿಸ್ತಾನದ ನಡುವೆ, ಪುಲ್ವಾಮ ದಾಳಿ ಹಾಗೂ 370ನೇ ವಿಧಿ ರದ್ದತಿ ಭಾರೀ ದೊಡ್ಡ ಕಂದಕವನ್ನೇ ಸೃಜಿಸಿದೆ. ಎರಡೂ ರಾಷ್ಟ್ರಗಳ ನಡುವೆ ಶಾಂತಿಯ ಸಂಕೇತವಾಗಿ ಈ ಕಾರಿಡಾರ್‌ ನಿರ್ಮಾಣವಾಗಿದ್ದು, ಉಭಯ ದೇಶಗಳ ನಡುವೆ ಸಂಬಂಧ ಅಲ್ಪ ಮಟ್ಟಿಗೆ ಸುಧಾರಿಸುವ ಸಾಧ್ಯತೆ ಇದೆ ಎಂದು ವಿಶ್ಲೇಷಿಸಲಾಗುತ್ತದೆ. ಅದರ ಜೊತೆಗೆ ಪಾಕಿಸ್ತಾನ ಈ ಕಾರಿಡಾರ್‌ನಿಂದ ಪ್ರವಾಸೋದ್ಯಮ ಅಭಿವೃದ್ಧಿಯಾಗಬಹುದೆಂಬ ನಿರೀಕ್ಷೆಯಲ್ಲಿದೆ. ಹಾಗೆಯೇ ಇದರಿಂದ ಉದ್ಯೋಗ ಸೃಷ್ಟಿಯಾಗಲಿದೆ.

ಕರ್ತಾರ್‌ಪುರದಲ್ಲಿ ಒಂದೇ ಸಿಖ್‌ ಕುಟುಂಬ!

ಒಂದು ಕಾಲದಲ್ಲಿ ಸಿಖ್ಖರ ಪ್ರಮುಖ ಸ್ಥಳವಾದ ಕರ್ತಾರ್‌ಪುರದಲ್ಲಿ ಈಗ ಕೇವಲ ಒಂದೇ ಸಿಖ್‌ ಕುಟಂಬ ವಾಸ ಮಾಡುತ್ತಿದೆ. ದೇಶ ವಿಭಜನೆ ಬಳಿಕ ಹಲವು ಕುಟುಂಬಗಳು ಭಾರತಕ್ಕೆ ವಲಸೆ ಬಂದಿವೆ. ಮಾತ್ರವಲ್ಲ ತಮ್ಮ ಮೇಲೆ ದೌರ್ಜನ್ಯವಾದಾಗ ಹಲವು ಸಿಖ್‌ ಕುಟುಂಬಗಳು ಗುಳೆ ಹೋಗಿವೆ. ಸದ್ಯ ಕರ್ತಾರ್‌ಪುರ ಪ್ರದೇಶದಲ್ಲಿ ವಾಸವಾಗಿರುವ ಒಂದು ಸಿಖ್‌ ಕುಟುಂಬಕ್ಕೆ ಪಾಕಿಸ್ತಾನಿ ಅಡುಗೆ ಭಟನೊಬ್ಬ ಊಟ ತಯಾರಿಸುತ್ತಾನೆ.

- ಸಿನಾನ್ ಇಂದಬೆಟ್ಟು