ಇಂಡೋನೇಷ್ಯಾಗೆ ಭೇಟಿ ನೀಡಿದ್ದ ಮೋದಿಗೆ, ಅಲ್ಲಿನ ಅಧ್ಯಕ್ಷ ತಮ್ಮ ಮೊಮ್ಮಗನಿಗೂ 'ಶ್ರೀ ನರೇಂದ್ರ' ಎಂದು ಹೆಲರಿಟ್ಟಿದ್ದಾಗಿ ಹೇಳಿದ್ದರು. ಇದೀಗ ಪ್ರಧಾನಿ ಸಿಂಗಾಪುರ ಭೇಟಿಯಲ್ಲಿದ್ದು, ಅಲ್ಲಿನ ಆರ್ಕಿಡ್‌ವೊಂದಕ್ಕೆ ಮೋದಿ ಹೆಸರಿಟ್ಟು ಗೌರವಿಸಲಾಗಿದೆ.
ಸಿಂಗಾಪುರ: ಮೂರು ದಿನಗಳ ಸಿಂಗಾಪುರ ಭೇಟಿಯಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅಲ್ಲಿನ ರಾಷ್ಟ್ರೀಯ ಆರ್ಕಿಡ್ ಗಾರ್ಡನ್‌ಗೆ ಭೇಟಿ ನೀಡಿದ್ದರು. ಇದರ ಸ್ಮರಣಾರ್ಥ ಅಲ್ಲಿನ ಆರ್ಕಿಡ್‌ವೊಂದಕ್ಕೆ ನರೇಂದ್ರ ಮೋದಿ ಹೆಸರಿಡಲಾಗಿದೆ.
'ಡೆಂಡ್ರೋಬ್ರಿಯಂ ನರೇಂದ್ರ ಮೋದಿ' ಎಂದು ಆರ್ಕಿಡ್‌ವೊಂದಕ್ಕೆ ಹೆಸರಿಡಲಾಗಿದೆ, ಎಂದು ವಿದೇಶಾಂಗ ವ್ಯವಹಾರ ವಕ್ತಾರ ರವೀಶ್ ಕುಮಾರ್ ಟ್ವೀಟ್ ಮಾಡಿದ್ದಾರೆ. ನೇರವಾಗಿ ಬೆಳೆಯುವ ಈ ಗಿಡದ ಗೊಂಚಲೊಂದರಲ್ಲಿ 14-20 ಹೂವುಗಳಿರುತ್ತವೆ. ಉಷ್ಣವಲಯದಲ್ಲಿ ಬೆಳೆಯುವ ಸುಮಾರು 38 ಸೆಂ.ಮೀ ಉದ್ದದ ಈ ಸಸ್ಯ ಸಂಕುಲಕ್ಕೆ ನರೇಂದ್ರ ಮೋದಿ ಹೆಸರಿಡಲಾಗಿದೆ, ಎಂದು ಅವರು ಟ್ವೀಟ್ ಮಾಡಿದ್ದಾರೆ.
ನಂತರ ಮೋದಿ ಸಿಂಗಾಪುರದ ಪುರಾತನ ಭಾರತೀಯ ಶ್ರೀ ಮರಿಯಮ್ಮನ್ ಮಂದಿರಕ್ಕೂ ಭೇಟಿ ನೀಡಿದ್ದಾರೆ. 1827ರಲ್ಲಿ ದಕ್ಷಿಣ ಭಾರತೀಯ ವಲಸಿಗರಿಂದ ಈ ಮಂದಿರ ನಿರ್ಮಿತವಾಗಿದ್ದು, ಭಾರತದೊಂದಿಗೆ ಬಲಿಷ್ಠ ಬಾಂಧವ್ಯವವನ್ನು ಸೂಚಿಸುತ್ತದೆ, ಎಂದು ದೇವಸ್ಥಾನದ ಮಹತ್ವವನ್ನು ರವೀಸ್ ಕುಮಾರ್ ಹೇಳಿದ್ದಾರೆ.
