ನವದೆಹಲಿ(ಏ.10): ರಫೆಲ್ ಹಗರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ತೀರ್ಪನ್ನು ಕಾಂಗ್ರೆಸ್ ಸೇರಿದಂತೆ ಹಲವು ಪ್ರತಿಪಕ್ಷಗಳು ಸ್ವಾಗತಿಸಿವೆ.

ರಫೆಲ್ ಕುರಿತು ಈ ಹಿಂದೆ ನೀಡಿರುವ ತೀರ್ಪನ್ನು ಮರುಪರಿಶೀಲಿಸುವ ವಿಶೇಷ ಹಕ್ಕನ್ನು ನೀಡಬಾರದು ಎಂಬ ಕೇಂದ್ರ ಸರ್ಕಾದ ಆಕ್ಷೇಪವನ್ನು ಸುಪ್ರೀಂ ಕೋರ್ಟ್ ತಳ್ಳಿಹಾಕಿದೆ.

ಕೋರ್ಟ್ ತೀರ್ಪನ್ನು ಸ್ವಾಗತಿಸಿರುವ ಕಾಂಗ್ರೆಸ್, ಇದು ದೇಶಕ್ಕೆ ಸಂದ ಜಯ ಎಂದು ಪ್ರತಿಕ್ರಿಯೆ ನೀಡಿದೆ. ಈ ಕುರಿತು ಟ್ವೀಟ್ ಮಾಡಿರುವ ಕಾಂಗ್ರೆಸ್ ವಕ್ತಾರ ರಣದೀಪ್ ಸಿಂಗ್ ಸುರ್ಜೆವಾಲಾ, ಪ್ರಧಾನಿ ಮೋದಿ ಸುಳ್ಳು ಹೇಳಿ ತಪ್ಪಿಸಿಕೊಳ್ಳಲು ಎಷ್ಟೇ ಪ್ರಯತ್ನಿಸಿದರೂ ಸತ್ಯ ಒಂದಿಲ್ಲ ಒಂದು ದಿನ ಹೊರ ಬರಲಿದೆ ಎಂದು ವ್ಯಂಗ್ಯವಾಡಿದ್ದಾರೆ.


ರಫೆಲ್ ಹಗರಣದೊಳಗಿನ ಅಸ್ಥಿಪಂಜರ ಒಂದೊಂದಾಗಿ ಹೊರ ಬೀಳಲಿವೆ ಎಂದಿರುವ ಸುರ್ಜೆವಾಲಾ, ಮುಚ್ಚಿಡಲು ಪ್ರಧಾನಿ ಮೋದಿ ಬಳಿ ಇನ್ಯಾವುದೇ ಸುಳ್ಳು ಉಳಿದಿಲ್ಲ ಎಂದು ಕುಹುಕವಾಡಿದ್ದಾರೆ.

ಇನ್ನು ಸುಪ್ರೀಂ ತೀರ್ಪಿನ ಕುರಿತು ಪ್ರತಿಕ್ರಿಯೆ ನೀಡಿರುವ ಆಮ್ ಆದ್ಮಿ ಪಕ್ಷ, ರಫೆಲ್ ಯುದ್ಧ ವಿಮಾನ ಒಪ್ಪಂದದ ತೀರ್ಪಿನ ಪುನರ್ ಪರಿಶೀಲನೆಗೆ ನ್ಯಾಯಾಲಯ ಅನುಮತಿ ನೀಡಿದೆ. ದೇಶದ ಚೌಕಿದಾರನನ್ನು ಗಮನಿಸಲಾಗುತ್ತಿದೆ ಎಂದು ಟ್ವೀಟ್ ಮಾಡಿದೆ.

ಅದರಂತೆ ಬಿಎಸ್ಪಿ ನಾಯಕಿ ಮಾಯಾವತಿ ಕೂಡ ಪ್ರತಿಕ್ರಿಯೆ ನೀಡಿ, ದೇಶದಲ್ಲಿ ಸಾಮೂಹಿಕ ಸಮಸ್ಯೆ ಮತ್ತು ಭ್ರಷ್ಟಾಚಾರವನ್ನು ರಫೆಲ್ ಹಗರಣದೊಳಗೆ ಮುಚ್ಚಿಹಾಕಲು ಪ್ರಧಾನಿ ಮೋದಿ ನಡೆಸುತ್ತಿರುವ ಪ್ರಯತ್ನ ವಿಫಲವಾಗಿದೆ ಎಂದು ಹರಿಹಾಯ್ದಿದ್ದಾರೆ. 

ಸಿಪಿಎಂ ಟ್ವೀಟ್ ಮಾಡಿ, ಸುಪ್ರೀಂ ಕೋರ್ಟ್ನ ಇಂದಿನ ತೀರ್ಪು ದೇಶದ ಅತೀ ದೊಡ್ಡ ಹಗರಣವನ್ನು ಬಯಲಿಗೆಳೆಯಲು ಸಹಾಯಕಾರಿ ಎಂದು ಅಭಿಪ್ರಾಯ ವ್ಯಕ್ತಪಡಿಸಿದೆ.

ಅರುಣ್ ಶೌರಿ ಕೂಡ ಸುಪ್ರೀಂ ತೀರ್ಪು ಸ್ವಾಗತಿಸಿದ್ದು, ನ್ಯಾಯಕ್ಕಾಗಿ ಕಾಯುತ್ತಿರುವ ದೇಶಕ್ಕೆ ಇಂದಿನ ತೀರ್ಪು ಹೊಸ ಭರವಸೆ ನೀಡಿದೆ ಎಂದು ಪ್ರತಿಕ್ರಿಯಿಸಿದ್ದಾರೆ.