ನವದೆಹಲಿ[ಏ.10]: ರಫೇಲ್ ವಿಮಾನ ಖರೀದಿ ಒಪ್ಪಂದಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ನಲ್ಲಿ ಕೇಂದ್ರಕ್ಕೆ ಭಾರೀ ಹಿನ್ನಡೆಯಾಗಿದೆ. ರಫೇಲ್ ಡೀಲ್ ಕುರಿತು ಮತ್ತೊಮ್ಮೆ ವಿಚಾರಣೆಗೆ ಸುಪ್ರೀಂ ಅಸ್ತು ಎಂದಿದ್ದು, ಪುನರ್ ಪರಿಶೀಲನಾ ಅರ್ಜಿಗಳ  ವಿಚಾರಣೆಗೆ ಒಪ್ಪಿಗೆ ಸೂಚಿಸಿದೆ.

ರಫೇಲ್ ಯುದ್ಧ ವಿಮಾನ ಖರೀದಿ ಒಪ್ಪಂದದ ಕುರಿತು ಸುಪ್ರೀಂಕೋರ್ಟ್ ಈ ಹಿಂದೆ ನೀಡಿದ್ದ ತೀರ್ಪು ಪ್ರಶ್ನಿಸಿ ಸಲ್ಲಿಸಿದ ಮೇಲ್ಮನವಿಯಲ್ಲಿ ಸೋರಿಕೆಯಾದ ದಾಖಲೆಗಳನ್ನು ಬಳಸಿಕೊಂಡಿರುವುದಕ್ಕೆ ಕೇಂದ್ರ ಸರ್ಕಾರದ ಆಕ್ಷೇಪ ವ್ಯಕ್ತಪಡಿಸಿತ್ತು. ಈ ಸಂಬಂಧ ಸುಪ್ರೀಂಕೋರ್ಟ್ ತನ್ನ ತೀರ್ಪು ಪ್ರಕಟಿಸಿದ್ದು, ಕೇಂದ್ರದ ಮನವಿಯನ್ನು ತಿರಸ್ಕರಿಸಿದೆ. ರಫೇಲ್ ಒಪ್ಪಂದದ ರಹಸ್ಯ ಕಡತಗಳ ಪರಿಶೀಲನೆ ನಡೆಸುವಂತೆ ಸುಪ್ರೀಂ ಆದೇಶ ಹೊರಡಿಸಿದೆ ಹಾಗೂ ಈ ದಾಖಲೆಗಳನ್ನು ಸಲ್ಲಿಸುವಂತೆ ಕೇಂದ್ರಕ್ಕೆ ಸೂಚಿಸಿದೆ..

ರಫೇಲ್ ವಿರುದ್ಧದ ಅರ್ಜಿ ತಿರಸ್ಕರಿಸಿ ಡಿ.14ರಂದು ಸುಪ್ರೀಕೋರ್ಟ್ ನೀಡಿದ್ದ ತೀರ್ಪು ಪ್ರಶ್ನಿಸಿ ಯಶವಂತ್ ಸಿನ್ಹಾ , ಅರುಣ್ ಶೌರಿ ಮೇಲ್ಮನವಿ ಸಲ್ಲಿಸಿದ್ದರು.