ಧಾರವಾಡ :  ಆಂಗ್ಲ ಮಾಧ್ಯಮದಲ್ಲಿ 1000 ಸರ್ಕಾರಿ ಶಾಲೆಗಳನ್ನು ಆರಂಭಿಸುವ ರಾಜ್ಯ ಸರ್ಕಾರದ ನಿರ್ಧಾರಕ್ಕೆ 84 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ಸರ್ಕಾರ ಈ ನಿರ್ಧಾರದಿಂದ ಹಿಂದೆ ಸರಿಯಬೇಕೆಂದು ಒತ್ತಾಯಿಸಿ ನಿರ್ಣಯ ಕೈಗೊಳ್ಳಲಾಯಿತು. ಇದರ ಜತೆಗೆ ಎಲ್‌ಕೆಜಿ, ಯುಕೆಜಿ ಸಮೇತ 7 ನೇ ತರಗತಿ ವರೆಗಿನ ಪ್ರಾಥಮಿಕ ಶಿಕ್ಷಣವನ್ನು ರಾಷ್ಟ್ರೀಕರಣ ಗೊಳಿಸಬೇಕು, ಕುವೆಂಪು ವಿರಚಿತ ನಾಡಗೀತೆ ಹಾಡುವ ಅವಧಿಯನ್ನು 2 ನಿಮಿಷ 30  ಸೆಕೆಂಡ್ ಗೆ ನಿಗದಿಪಡಿಸಬೇಕು, ಕೇಂದ್ರ ಸರ್ಕಾರ ನಡೆ ಸುವ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಕನ್ನಡ ದಲ್ಲೂ ಬರೆಯಲು ಅವಕಾಶ ನೀಡಬೇಕು ಎಂಬ ಇನ್ನೂ ಮೂರು ನಿರ್ಣಯ ಕೈಗೊಂಡು
ಸರ್ಕಾರಗಳನ್ನು ಆಗ್ರಹಿಸಲಾಯಿತು.

ಧಾರವಾಡದಲ್ಲಿ ನಡೆದ ಮೂರು ದಿನಗಳ ಸಾಹಿತ್ಯ ಸಮ್ಮೇಳನದ ಕೊನೇ ದಿನವಾದ ಭಾನುವಾರ ಸಂಜೆ ಈ ಕುರಿತಂತೆ ಸರ್ವಾನುಮತದ ನಿರ್ಣಯ ಕೈಕೊಳ್ಳಲಾಯಿತು. ಮುಂಬರುವ ಶೈಕ್ಷಣಿಕ ವರ್ಷದಿಂದ ಆಂಗ್ಲ ಮಾಧ್ಯಮ ಶಾಲೆ ಆರಂಭಿಸುವ ಸರ್ಕಾರದ ನಿರ್ಧಾರ ಸಮ್ಮೇಳನ ಉದ್ಘಾಟನೆ ಸಂದರ್ಭ ದಲ್ಲೂ ಪ್ರಸ್ತಾಪವಾಗಿತ್ತು. ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಉಪಸ್ಥಿತಿಯಲ್ಲೇ ನಿಕಟಪೂರ್ವ ಸಮ್ಮೇಳನಾಧ್ಯಕ್ಷ ಪ್ರೊ.ಚಂದ್ರ ಶೇಖರ ಪಾಟೀಲ್ ಅವರು ತುಸು ಖಾರವಾಗಿಯೇ ಸರ್ಕಾರದ ನಿರ್ಧಾರವನ್ನು ತರಾಟೆಗೆ ತೆಗೆದುಕೊಂಡಿದ್ದರು. ಆಗ ಅದಕ್ಕೆ ಪ್ರತಿಕ್ರಿಯಿಸಿ ದ್ದ ಮುಖ್ಯಮಂತ್ರಿಗಳು ಇಷ್ಟರಲ್ಲೇ ಡಾ. ಚಂದ್ರಶೇಖರ ಕಂಬಾರ, ಪ್ರೊ.ಚಂಪಾ, ಡಾ. ಮನು ಬಳಿಗಾರ ಸೇರಿದಂತೆ ಹಲವರ ಸಭೆ ಕರೆದು ಚರ್ಚಿಸಿ ನಿರ್ಧಾರ ಕೈಕೊಳ್ಳುವುದಾಗಿ ಬಹಿರಂಗ ಭರವಸೆ ನೀಡಿದ್ದರು. 

ಈಗ  ಸಮ್ಮೇಳನದಲ್ಲಿ ಈ ಕುರಿತು ನಿರ್ಣಯ ಕೈಗೊಂಡಿದ್ದರಿಂದ ಸರ್ಕಾರಕ್ಕೆ ಸಭೆ ಕರೆಯುವುದು ಅನಿವಾರ್ಯವಾಗಿದೆ. ಇನ್ನು ಪ್ರಾಥಮಿಕ ಶಿಕ್ಷಣವನ್ನು ರಾಷ್ಟ್ರೀಕರಣ ಗೊಳಿಸಬೇಕು ಎನ್ನುವ ವಿಚಾರವನ್ನು ಆರಂಭದ ದಿನವೇ ಸಮ್ಮೇಳನಾಧ್ಯಕ್ಷ ಡಾ.ಚಂದ್ರಶೇಖರ ಕಂಬಾರ ತಮ್ಮ ಭಾಷಣದಲ್ಲೂ ಪ್ರಸ್ತಾಪಿಸಿದ್ದರು. 

ಜತೆಗೆ ಕನ್ನಡ ಭಾಷೆ ಅಭಿವೃದ್ಧಿಗೆ ಒಂದಷ್ಟು ಸಲಹೆಗಳನ್ನೂ ನೀಡಿದ್ದರು. ಆಗ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು, ಸಾಹಿತಿಗಳು, ಶಿಕ್ಷಣ ತಜ್ಞರು, ಹೋರಾಟ ಗಾರರು ಸೇರಿ ನಾಡಿನ ಜನತೆ ಒಪ್ಪುವುದಾದರೆ ಪ್ರಾಥಮಿಕ ಶಿಕ್ಷಣವನ್ನು ರಾಷ್ಟ್ರೀಕರಣ ಮಾಡಲು ಸಮ್ಮಿಶ್ರ ಸರ್ಕಾರ ಬದ್ಧವಿದೆ ಎಂದು ಭರವಸೆ ನೀಡಿದ್ದರು. 

ಇದೀಗ ಸಮ್ಮೇಳನದಲ್ಲಿ ಈ ಕುರಿತು ಸರ್ವಾನುಮತದ ನಿರ್ಣಯ ಕೈಕೊಂಡಿದ್ದರಿಂದ ರಾಜ್ಯದಲ್ಲಿ  ಪ್ರಾಥಮಿಕ ಶಿಕ್ಷಣ ರಾಷ್ಟ್ರೀಕರಣದ ಕೂಗು ಮತ್ತಷ್ಟು ಬಲವಾಗಿ ಕೇಳುವ ಸಾಧ್ಯತೆಯಿದೆ. ಇನ್ನು ಕುವೆಂಪು ವಿರಚಿತ ‘ಜಯ ಭಾರತ ಜನನಿಯೆ ತನುಜಾತೆ’ ನಾಡಗೀತೆ ಹಾಡುವ  ವಧಿಯನ್ನು 2.30  ನಿಮಿಷಗಳಿಗೆ ನಿಗದಿ ಮಾಡುವಂತೆಯೂ ಸಮ್ಮೇಳನ ಒತ್ತಾಯಿಸಿದೆ. ಲಯ, ರಾಗಗಳಲ್ಲಿನ ವ್ಯತ್ಯಾಸದಿಂದಾಗಿ ಒಬ್ಬೊಬ್ಬರು ಒಂದೊಂದು ಅವಧಿ ಹಾಡುತ್ತಿದ್ದರು. ಅದಕ್ಕೊಂದು ಸಮಯದ ಶಿಸ್ತು ತರಬೇಕೆನ್ನುವ ಆಗ್ರಹ ಸಮ್ಮೇಳನದಲ್ಲಿ ಬಲವಾಗಿ ಕೇಳಿಬಂತು.

ಕನ್ನಡದಲ್ಲೇ ಪರೀಕ್ಷೆ: ಕೇಂದ್ರ ಸರ್ಕಾರ ನಡೆಸುವ ಐಎಎಸ್, ಐಪಿಎಸ್ ಸೇರಿ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಕನ್ನಡದಲ್ಲಿ ಬರೆಯುವ ಅವಕಾಶ ಕಲ್ಪಿಸುವಂತೆ ಈ ಸಾಹಿತ್ಯ ಸಮ್ಮೇಳನದಲ್ಲಿ ಗಟ್ಟಿಧ್ವನಿಯ ಆಗ್ರಹ ಕೇಳಿಬಂದಿದೆ. ೩ ದಿನಗಳುದ್ದಕ್ಕೂ ನಡೆದ ವಿವಿಧ ಘೋಷ್ಠಿಗಳಲ್ಲಿ  ಇಂಗ್ಲಿಷ್ ಭಾಷೆಯಿಂದಾಗಿಯೇ ಕೇಂದ್ರ ಸರ್ಕಾರ ನಡೆಸುವ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕನ್ನಡಿಗರು ಹಿಂದುಳಿ ಯುತ್ತಿದ್ದಾರೆ ಎನ್ನುವ ಅಭಿಪ್ರಾಯದ ಹಿನ್ನಲೆಯಲ್ಲಿ ಸಮ್ಮೇಳನವು ಕೇಂದ್ರ ಸರ್ಕಾರದ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಕನ್ನಡದಲ್ಲೂ ಬರೆಯಲು ಅವಕಾಶ ಮಾಡಿಕೊಡಬೇಕು ಎಂದು ಒತ್ತಾಯಿಸುವನಿರ್ಣಯವನ್ನು ಒಕ್ಕೊರಲಿನಿಂದ ಕೈಕೊಂಡಿದೆ. ಡಾ.ಚಂದ್ರಶೇಖರ ಕಂಬಾರ, ವಿ.ಸಿ.ಚನ್ನೇಗೌಡ, ನೀಲಾವರ ಸುರೇಂದ್ರ ಅಡಿಗ, ಡಾ.ಮನು ಬಳಿಗಾರ ಈ ನಿರ್ಣಯಗಳನ್ನು ಸೂಚಿಸಿದರೆ, ಡಾ.ಎಚ್.ಎಸ್.ಶಿವಪ್ರಕಾಶ್, ನಾಗಾನಂದ ಕೆಂಪರಾಜ್, ನಾಯಕನಹಳ್ಳಿ ಮಂಜೇಗೌಡ, ಡಾ. ವೈ.ಡಿ.ರಾಜಣ್ಣ ಅನುಮೋದಿಸಿದರು. ವೇದಿಕೆಯಲ್ಲಿದ್ದ ಕಸಾಪ ಕಾರ್ಯಕಾರಿ ಸಮಿತಿ ಸದಸ್ಯರು, ಗಡಿನಾಡ ಸಮಿತಿ ಸದಸ್ಯರು ಈ ನಾಲ್ಕೂ ನಿರ್ಣಯಗಳಿಗೆ ಕೈ ಎತ್ತಿ ಸಮ್ಮತಿ ಸೂಚಿಸಿತು.