ಕುಟುಂಬಕ್ಕೆ ಹಣಕಾಸು ಭದ್ರತೆ ಒದಗಿಸುವ ನಿಟ್ಟಿನಲ್ಲಿ ಸರ್ಕಾರ ಇದೀಗ ಹೊಸ ಪ್ಲಾನ್ ಒಂದನ್ನು ಮಾಡಿಕೊಂಡಿದೆ. 

ಗ್ಯಾಂಗ್‌ಟಕ್‌: ಜನರಿಗೆ ಹಣಕಾಸು ಭದ್ರತೆ ಒದಗಿಸುವ ನಿಟ್ಟಿನಿಂದ ಒಂದು ಕುಟುಂಬಕ್ಕೆ ಒಂದು ಸರ್ಕಾರಿ ಉದ್ಯೋಗ ನೀಡುವ ಯೋಜನೆಯನ್ನು ಜಾರಿಗೊಳಿಸಲು ಸಿಕ್ಕಿಂ ಮುಖ್ಯಮಂತ್ರಿ ಪವನ್‌ ಕುಮಾರ್‌ ಚಾಮ್ಲಿಂಗ್‌ ಮುಂದಾಗಿದ್ದಾರೆ. 2018ರ ಡಿಸೆಂಬರ್‌ನಲ್ಲಿ ಈ ಸಂಬಂಧ ಅಧಿಸೂಚನೆ ಹೊರಡಿಸಲಾಗುವುದು. 2019ರ ಜ.2ರಿಂದ ಮೊದಲ ಸುತ್ತಿನ ಫಲಾನುಭವಿಗಳು ಕರ್ತವ್ಯಕ್ಕೆ ಹಾಜರಾಗಲಿದ್ದಾರೆ ಎಂದು ಚಾಮ್ಲಿಂಗ್‌ ಹೇಳಿದ್ದಾರೆ.

ಆರ್ಥಿಕವಾಗಿ ಹಿಂದುಳಿದ ಬಡ ಕುಟುಂಬಗಳಿಗೆ ಸ್ಥಿರ ಆದಾಯ ದೊರಕಿಸಿಕೊಡಲು ಒಂದು ಕುಟುಂಬಕ್ಕೆ ಒಂದು ಉದ್ಯೋಗ ಎಂಬ ಐತಿಹಾಸಿಕ ನಿರ್ಧಾರವನ್ನು ನಾವು ಕೈಗೊಂಡಿದ್ದೇವೆ. ಸರ್ಕಾರ ಫಲಾನುಭವಿಗಳನ್ನು ಗುರುತಿಸಲು ಸಹಕರಿಸುವಂತೆ ಜನರಲ್ಲಿ ಮನವಿ ಮಾಡುತ್ತೇನೆ. ಇದರಿಂದ ಅರ್ಹ ಕುಟುಂಬ ಫಲಾನುಭವ ಪಡೆಯಲು ಸಾಧ್ಯವಾಗಲಿದೆ ಎಂದು ಫೇಸ್‌ಬುಕ್‌ ಪೋಸ್ಟ್‌ವೊಂದರಲ್ಲಿ ಚಾಮ್ಲಿಂಗ್‌ ಬರೆದು ಕೊಂಡಿದ್ದಾರೆ. ಒಂದು ವೇಳೆ ಯೋಜನೆ ಅನುಷ್ಠಾನಗೊಳಿಸುವಲ್ಲಿ ಯಾವುದೇ ತಾರತಮ್ಯ ಆಗಿರುವುದು ಕಂಡು ಬಂದರೆ ಅಥವಾ ಹಣದ ಬೇಡಿಕೆ ಇಟ್ಟರೆ ನೇರವಾಗಿ ತಮ್ಮ ಕಚೇರಿಗೆ ಮಾಹಿತಿ ನೀಡಬಹುದು ಎಂದು ಹೇಳಿದ್ದಾರೆ.

6 ಲಕ್ಷ ಜನ ಸಂಖ್ಯೆ ಹೊಂದಿರುವ ಸಿಕ್ಕಿಂನಲ್ಲಿ ಹಾಲಿ 37196 ಕಾಯಂ ಸರ್ಕಾರಿ ಅಧಿಕಾರಿಗಳು ಇದ್ದಾರೆ. ಇದನ್ನು ಹೊರತುಪಡಿಸಿ, ಹಂಗಾಮಿಯಾಗಿ ಸೇವೆ ಸಲ್ಲಿಸುತ್ತಿರುವವರು, ಹೋಮ್‌ಗಾರ್ಡ್‌, ಗೌರವ ಹುದ್ದೆಯಲ್ಲಿ ಇರುವವರು, ಸಾರ್ವಜನಿಕ ವಲಯದ ಉದ್ಯಮಗಳಲ್ಲಿನ ಸಿಬ್ಬಂದಿಯೂ ಸೇರಿದರೆ ಒಟ್ಟಾರೆ 70000 ಉದ್ಯೋಗಿಗಳು ಇದ್ದಾರೆ.