ಪಶ್ಚಿಮ ಬಂಗಾಳದ ಬರ್ದ್‌ಮಾನ್ ಜಿಲ್ಲೆಯಲ್ಲಿ ಒಂದು ಕಣ್ಣಿನ ಕರುವೊಂದಕ್ಕೆ ಜನರು ಪೂಜೆ ಮಾಡಲಾರಂಭಿಸಿದ್ದಾರೆ. ತಮ್ಮ ಊರಿನಲ್ಲಿ ಜನಿಸಿರುವ ಈ ಕರು, ದೇವರ ಪ್ರತಿರೂಪ ಎಂಬುವುದು ಇಲ್ಲಿನ ಜನರ ನಂಬಿಕೆಯಾಗಿದೆ. ಹೀಗಾಗಿ ಇದನ್ನು ಹಗಲಿರುಳೆನ್ನದೇ ಜನರು ಪೂಜಿಸುತ್ತಿದ್ದಾರೆ. ಈ ಗೋವಿಗೆ ಒಂದೇ ಕಣ್ಣು ಎನ್ನುವುದರೊಂದಿಗೆ, ಮುಖವೂ ವಿಚಿತ್ರವಾಗಿದ್ದು, ನಾಲಗೆ ಹೊರಗಿದೆ. 

ಇನ್ನು ನಮ್ಮ ಮನೆಯಲ್ಲಿ ಕರು ಜನಿಸಿದ ಮನೆಗೆ ಆಗಮಿಸುವವರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ. ಜನರು ಇದನ್ನು ದೇವರು ಎಂದು ನಂಬಿ ಪೂಜೆ ಮಾಡುತ್ತಿದ್ದಾರೆ ಎಂಬುವುದು ಮನೆ ಮಾಲೀಕನ ಮಾತಾಗಿದೆ. 

ವಿಜ್ಞಾನದ ಅನ್ವಯ ಈ ಕರುವಿಗೆ Cyclopia ಎಂಬ ಕಾಯಿಲೆ ಇದೆ ಎನ್ನಲಾಗಿದೆ. ಇದು ಕಾಯಿಲೆ ಪ್ರಾಣಿಗಳಲ್ಲಿ ಮಾತ್ರವಲ್ಲದೇ, ಮನುಷ್ಯರಲ್ಲೂ ಕಂಡು ಬರುತ್ತದೆ. ತಾಯಿಯ ಗರ್ಭದಲ್ಲಿರುವಾಗ ಮಗುವಿನ ಕಣ್ಣು ಹಾಗೂ ಮುಖದ ಕೆಲ ಭಾಗ ಸರಿಯಾಗಿ ಬೆಳವಣಿಗೆಯಾಗದಾಗ ಈ ಸಮಸ್ಯೆ ಕಂಡು ಬರುತ್ತದೆ. ಹೀಗೆ ಜನಿಸಿದ ಮಕ್ಕಳಲ್ಲಿ ಉಸಿರಾಟದ ತೊಂದರೆ ಹಾಗೂ ಮೆದುಳು ಬುದ್ಧಿಮಾಂದ್ಯತೆ ಸಾಮಾನ್ಯ. ಇಷ್ಟೇ ಅಲ್ಲದೇ, ಹೀಗೆ ಜನಿಸಿದ ಮಕ್ಕಳು ಹೆಚ್ಚು ಕಾಲ ಬದುಕುವುದೂ ಇಲ್ಲ. 

ಸದ್ಯ ಈ ಕರುವಿನ ಫೋಟೋ ಹಾಗೂ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲೂ ಬಹಳಷ್ಟು ವೈರಲ್ ಆಗುತ್ತಿವೆ.