ನವದೆಹಲಿ[ಆ.21]: ಹಾರಾಡುವ ಶವಪೆಟ್ಟಿಗೆ ಎಂಬ ಕುಖ್ಯಾತಿ ಹೊಂದಿರುವ ರಷ್ಯಾ ನಿರ್ಮಿತ ಮಿಗ್‌ 21 ವಿಮಾನಗಳು ಇನ್ನೂ ಭಾರತೀಯ ವಾಯುಪಡೆಯ ಪ್ರಮುಖ ಅಸ್ತ್ರಗಳ ಪೈಕಿ ಒಂದು. ಸುಮಾರು 44 ವರ್ಷಗಳಷ್ಟುಹಳೆಯ ವಿಮಾನಗಳನ್ನೂ ಇನ್ನೂ ಭಾರತೀಯ ವಾಯುಪಡೆ ಬಳಸಬೇಕಾದ ಅನಿವಾರ್ಯತೆ ಬಗ್ಗೆ ಇದೀಗ ಸ್ವತಃ, ವಾಯುಪಡೆ ಮುಖ್ಯಸ್ಥ ಬಿ.ಎಸ್‌.ಧನೋವಾ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಭಾರತೀಯ ವಾಯುಸೇನೆಯ ಆಧುನೀಕರಣ ಮತ್ತು ದೇಶೀಕರಣ ಎಂಬ ವಿಚಾರಗೋಷ್ಠಿಯಲ್ಲಿ ಮಾತನಾಡಿದ ಧನೋವಾ, ಭಾರತೀಯ ವಾಯಪಡೆ ಬಳಸುತ್ತಿರುವ ಮಿಗ್‌ 21 ವಿಮಾನಗಳು ಸುಮಾರು 44 ವರ್ಷಗಳಷ್ಟುಹಳೆಯದ್ದು. ಇಷ್ಟುಹಳೆಯ ಕಾರುಗಳನ್ನೂ ಕೂಡಾ ಯಾರು ಬಳಸುವುದಿಲ್ಲ. ಈ ಸೆಪ್ಟೆಂಬರ್‌ನಲ್ಲಿ ಮಿಗ್‌-21 ಯುದ್ಧ ವಿಮಾನಗಳ ಬಳಕೆಯನ್ನು ಸ್ಥಗಿತಗೊಳಿಸಲಾಗುವುದು ಎಂದು ಹೇಳಿದ್ದಾರೆ. ವಿಶೇಷವೆಂದರೆ ರಕ್ಷಣಾ ಸಚಿವ ರಾಜ್‌ನಾಥ್‌ಸಿಂಗ್‌ ಉಪಸ್ಥಿತಿಯಲ್ಲೇ ಧನೋವಾ ಅವರು ಇಂಥದ್ದೊಂದು ಮಾತುಗಳನ್ನು ಹೇಳಿದ್ದಾರೆ.

ವಿಶೇಷವೆಂದರೆ ಮಿಗ್‌ 21 ವಿಮಾನದ ಮೂಲಕವೇ ಇತ್ತೀಚೆಗೆ ಭಾರತೀಯ ವಾಯುಪಡೆಯ ವಿಂಗ್‌ಕಮಾಂಡರ್‌ ಅಭಿನಂದನ್‌ ಅವರು, ಪಾಕಿಸ್ತಾನಕ್ಕೆ ಸೇರಿದ ಅಮೆರಿಕ ನಿರ್ಮಿತ ಅತ್ಯಾಧುನಿಕ ಎಫ್‌ 16 ವಿಮಾನ ಹೊಡೆದುರುಳಿಸಿದ್ದರು.