ನವದೆಹಲಿ[ಜೂ.08]: ಮಾಜಿ ಕೇಂದ್ರ ಸಚಿವ ಹಾಗೂ ಹಾಕಿ ಒಲಂಪಿಯನ್ ಅಸ್ಮಲ್ ಶೇರ್ ಖಾನ್ ಮುಂದಿನ ಎರಡು ವರ್ಷ ಕಾಂಗ್ರೆಸ್ ಅಧ್ಯಕ್ಷನಾಗುವ ಇಚ್ಛೆ ವ್ಯಕ್ತಪಡಿಸಿದ್ದಾರೆ. 

ಹೌದು ಈ ಕುರಿತಾಗಿ ANI ಸುದ್ದಿ ಸಂಸ್ಥೆಗೆ ಪ್ರತಿಕ್ರಿಯಿಸಿರುವ ಅಸ್ಮಲ್ 'ರಾಹುಲ್ ಗಾಂಧಿ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಸಂದರ್ಭದಲ್ಲಿ ನಾನೊಂದು ಪತ್ರ ಬರೆದು, ನೆಹರೂ- ಗಾಂಧೀ ಕುಟುಂಬ ಸದಸ್ಯರನ್ನು ಹೊರತುಪಡಿಸಿ ಇತರರಿಗೆ ಈ ಜವಾಬ್ದಾರಿ ನೀಡಬೇಕೆಂದು ಆಗ್ರಹಿಸಿದ್ದೆ. ಒಂದು ವೇಳೆ ರಾಹುಲ್ ಗಾಂಧಿ ಈ ಸ್ಥಾನದಲ್ಲಿ ಮುಂದುವರೆದರೆ ಅದು ಒಳ್ಳೆಯ ವಿಚಾರ. ಆದರೆ ಅವರು ಈ ಸ್ಥಾನಕ್ಕೆ ರಾಜೀನಾಮೆ ನೀಡುವುದು ಖಚಿತವಾದರೆ ಮುಂದಿನ 2 ವರ್ಷಗಳವರೆಗೆ ಈ ಜವಾಬ್ದಾರಿ ನಾನು ಈ ಜವಾಬ್ದಾರಿ ನಿರ್ವಹಿಸುವುದಾಗಿ ತಿಳಿಸಿದ್ದೆ' ಎಂದಿದ್ದಾರೆ.

ಅಸ್ಮಲ್ ಶೇರ್ ಖಾನ್ ಕಾಂಗ್ರೆಸ್ ಕಾರ್ಯಕಾರಿ ಸಭೆ ಬಳಿಕವೂ ರಾಹುಲ್ ಗಾಂಧಿ ಅಧ್ಯಕ್ಷ ಸ್ಥಾನದಲ್ಲಿ ಮುಂದುವರೆಯಲು ಒಪ್ಪದ ಬಳಿಕ, ಇಂತಹ ಪ್ರಸ್ತಾಪವೊಂದನ್ನು ಮುಂದಿಟ್ಟ ಮೊದಲ ಕೈ ನಾಯಕರಾಗಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲನುಭವಿಸಿದ ಬಳಿಕ ಮೇ 25ರಂದು CWC ಸಭೆ ನಡೆದಿತ್ತು. ಈ ಸಭೆಯಲ್ಲಿ ರಾಹುಲ್ ಗಾಂಧಿ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವ ಇಚ್ಛೆ ವ್ಯಕ್ತಪಡಿಸಿದ್ದರು. ಆದರೆ ಸಮಿತಿ ಮಾತ್ರ ಅವರ ರಾಜೀನಾಮೆಯನ್ನು ತಳ್ಳಿ ಹಾಕಿತ್ತು. 

ಇದೀಗ ಈ ಎಲ್ಲಾ ಬೆಳವಣಿಗೆಗಳ ಬೆನ್ನಲ್ಲೇ ಅಸ್ಮಲ್ ಬರೆದಿರುವ ಪತ್ರ ಭಾರೀ ಸದ್ದು ಮಾಡುತ್ತಿದೆ. ಹೀಗಿದ್ದರೂ ಈ ಕುರಿತಾಗಿ ಸ್ಪಷ್ಟನೆ ನಿಡಿರುವ ಅವರು 'ಇದನ್ನು ನಾನು ಸ್ವಾರ್ಥಕ್ಕಾಗಿ ಮಾಡಿಲ್ಲ. ಬದಲಾಗಿ ಕಾಂಗ್ರೆಸ್ ನಲ್ಲಿ ಬದಲಾವಣೆಯ ಅಗತ್ಯವಿದೆ ಎಂದು ನನಗನಿಸುತ್ತದೆ. ಹೀಗಾಗಿ ನಾನು ಈ ಜವಾಬ್ದಾರಿ ವಹಿಸಿಕೊಳ್ಳಲು ತಯಾರಿದ್ದೇನೆ' ಎಂದಿದ್ದಾರೆ.

ಇನ್ನು ರಾಹುಲ್ ಗಾಂಧಿಯೇ ಈ ಸೋಲಿಗೆ ಕಾರಣವೇ ಎಂಬ ಪ್ರಶ್ನೆಗೂ ಉತ್ತರಿಸಿರುವ ಮಾಜಿ ಸಚಿವ 'ಕಾಂಗ್ರೆಸ್ ಸೋಲಿಗೆ ರಾಹುಲ್ ಗಾಂಧಿ ಕಾರಣವಲ್ಲ. ಅವರು ಈ ಚುನಾವಣೆಯಲ್ಲಿ ಗೆಲುವು ಪಡೆಯಲು ಎಲ್ಲಾ ರೀತಿಯ ಪ್ರಯತ್ನ ನಡೆಸಿದ್ದಾರೆ. ಆದರೆ ಪಕ್ಷ ಜನರನ್ನು ತಲುಪಲು ಸಾಧ್ಯವಾಗಲಿಲ್ಲ. ಒಂದು ವೇಳೆ ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ನನಗಿಂತ ಉತ್ತಮ ಅಭ್ಯರ್ಥಿ ಸಿಕ್ಕರೆ ಅವರನ್ನೇ ಆಯ್ಕೆ ಮಾಡಲಿ. ನನಗೆ ಯಾವುದೇ ಅಭ್ಯಂತರ ಇಲ್ಲ' ಎಂದಿದ್ದಾರೆ.