ಭಾರತವನ್ನು ಅಚ್ಚರಿಯ ಅಭಿವೃದ್ಧಿಯತ್ತ ಕೊಂಡೊಯ್ಯುತ್ತಿರುವ ‘ಮೇಕ್ ಇನ್ ಇಂಡಿಯಾ’, ‘ಸ್ಟಾರ್ಟಪ್ ಇಂಡಿಯಾ’, ‘ಡಿಜಿಟಲ್ ಇಂಡಿಯಾ’ ಹಾಗೂ ‘ಕ್ಲೀನ್ ಇಂಡಿಯಾ’ ಅಭಿಯಾನದಲ್ಲಿ ವಿಶ್ವದೆಲ್ಲೆಡೆ ನೆಲೆಸಿರುವ ಅನಿವಾಸಿ ಭಾರತೀಯರು ಮುಕ್ತವಾಗಿ ಪಾಲ್ಗೊಳ್ಳಬೇಕು ಎಂದು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಕರೆ ನೀಡಿದರು.
ಬೆಂಗಳೂರು (ಜ.09): ಭಾರತವನ್ನು ಅಚ್ಚರಿಯ ಅಭಿವೃದ್ಧಿಯತ್ತ ಕೊಂಡೊಯ್ಯುತ್ತಿರುವ ‘ಮೇಕ್ ಇನ್ ಇಂಡಿಯಾ’, ‘ಸ್ಟಾರ್ಟಪ್ ಇಂಡಿಯಾ’, ‘ಡಿಜಿಟಲ್ ಇಂಡಿಯಾ’ ಹಾಗೂ ‘ಕ್ಲೀನ್ ಇಂಡಿಯಾ’ ಅಭಿಯಾನದಲ್ಲಿ ವಿಶ್ವದೆಲ್ಲೆಡೆ ನೆಲೆಸಿರುವ ಅನಿವಾಸಿ ಭಾರತೀಯರು ಮುಕ್ತವಾಗಿ ಪಾಲ್ಗೊಳ್ಳಬೇಕು ಎಂದು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಕರೆ ನೀಡಿದರು.
ಮೂರು ದಿನಗಳ ಪ್ರವಾಸಿ ಭಾರತೀಯ ದಿವಸ್ ಸಮ್ಮೇಳನದ ಸಮಾರೋಪದಲ್ಲಿ ನೂರಾರು ಅನಿವಾಸಿ ಭಾರತೀಯರು, ಉದ್ಯಮಿಗಳು ಹಾಗೂ ಗಣ್ಯರನ್ನುದ್ದೇಶಿಸಿ ಸೋಮವಾರ ಮಾತನಾಡಿದ ಅವರು, ಭಾರತದ ಅಭಿವೃದ್ಧಿಯ ಪಥ ಹೊಸ ದಿಕ್ಕಿನತ್ತ ಸಾಗುತ್ತಿದೆ. ಅನಿವಾಸಿ ಭಾರತೀಯರು ಕೂಡ ತಾವು ನೆಲೆಸಿರುವ ರಾಷ್ಟ್ರದ ಹಿತಾಸಕ್ತಿಯನ್ನು ಕಾಯ್ದುಕೊಂಡೇ ತಾಯ್ನಾಡಿನ ಪ್ರಗತಿಯಲ್ಲಿ ಸಹಭಾಗಿತ್ವ ನೀಡಬೇಕು ಎಂದು ಹೇಳಿದರು.
ಪ್ರಧಾನಿ ಕಾರ್ಯಕ್ಕೆ ಶ್ಲಾಘನೆ: ಕಳೆದ ಎರಡೂವರೆ ವರ್ಷಗಳಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅಂತಾರಾಷ್ಟ್ರೀಯ ಸಂಬಂಧ ವೃದ್ಧಿ, ವಿವಾದಗಳ ಇತ್ಯರ್ಥ, ಶಾಂತಿ ಸ್ಥಾಪನೆ ಹಾಗೂ ಜಾಗತಿಕ ಪರಿಸರ ರಕ್ಷಣೆಯ ಕುರಿತಂತೆ ತಾಳಿರುವ ಅಂತಾರಾಷ್ಟ್ರೀಯ ನೀತಿಗಳನ್ನು ಮುಕ್ತ ಕಂಠದಿಂದ ಪ್ರಶಂಸಿಸಿದ ರಾಷ್ಟ್ರಪತಿ ಮುಖರ್ಜಿ, ಭಾರತದ ಹೊರಗೆ ಮತ್ತು ಒಳಗೆ ನೆಲೆಸಿರುವ ಭಾರತೀಯರ ಮನೋಧರ್ಮಗಳನ್ನು ಸಾಕಷ್ಟು ಬದಲಿಸುವ ನಿಟ್ಟಿನಲ್ಲಿ ದೇಶ ಬದಲಾಗುತ್ತಿದೆ. ಭಾರತದ ಹೊರಗಿನ ತಜ್ಞರು, ವಿಜ್ಞಾನಿಗಳು, ತಂತ್ರಜ್ಞಾನಿಗಳು ಈ ಬದಲಾವಣೆಯಲ್ಲಿ ಮುಕ್ತವಾಗಿ ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿದರು.
ಸಮಕಾಲೀನ ಭಾರತವನ್ನು ಅನಿವಾಸಿ ಯುವ ಭಾರತೀಯರು ಮರು ಸಂಶೋಧನೆ ಮಾಡಿಕೊಳ್ಳಬೇಕಿದೆ. ಯುವ ಸಮೂಹದ ಪಾಲ್ಗೊಳ್ಳುವಿಕೆಯಿಂದಲೇ ಜಗತ್ತಿನ ಯಾವುದೇ ರಾಷ್ಟ್ರ ಅಭಿವೃದ್ಧಿ ಹೊಂದಲು ಸಾಧ್ಯವಾಗಿದೆ. ಹೀಗಾಗಿ ಅನಿವಾಸಿ ಯುವ ಭಾರತೀಯರು ತಾಂತ್ರಿಕ, ಶೈಕ್ಷಣಿಕ ಹಾಗೂ ವಿಜ್ಞಾನ ಕ್ಷೇತ್ರದಲ್ಲಿ ಭಾರತ ಧಾವಿಸುತ್ತಿರುವ ಅಭಿವೃದ್ಧಿಯ ವೇಗಕ್ಕೆ ಕೈ ಜೋಡಿಸಬೇಕಾಗಿದೆ ಎಂದು ಹೇಳಿದರು.
ಅನಿವಾಸಿ ಭಾರತೀಯರು ತಮ್ಮ ಮೂಲ ನೆಲೆಯನ್ನು ಬಿಟ್ಟು ಹೋದರೂ ಅವರ ಆಗುಹೋಗುಗಳಿಗೆ ಭಾರತ ಸರ್ಕಾರ ಸದಾ ಸ್ಪಂದಿಸುತ್ತಿದೆ. ನಾನಾ ರಾಷ್ಟ್ರಗಳಲ್ಲಿರುವ ಭಾರತೀಯ ದೂತವಾಸ ಕಚೇರಿಗಳು, ರಾಯಭಾರಿಗಳು ನಿರಂತರ ಸಂಪರ್ಕ ಸಾಧಿಸಿ, ಅವರ ಸಮಸ್ಯೆಗಳಿಗೆ ಸಕಾಲಿಕವಾಗಿ ಸ್ಪಂದಿಸುತ್ತಿದ್ದಾರೆ. ಕೇವಲ ಸಾಧನೆ ಮತ್ತು ಯಶಸ್ಸಿನಲ್ಲಿ ಮಾತ್ರ ಪಾಲುದಾರಿಕೆ ನಿರೀಕ್ಷಿಸದೇ ಸಂಕಷ್ಟದಲ್ಲಿರುವ ಭಾರತೀಯ ಮೂಲದ ನಾಗರಿಕರ ಕ್ಷೇಮ ರಕ್ಷಣೆಗೆ ಸರ್ಕಾರ ಬದ್ಧವಾಗಿದೆ. ವಿಶೇಷವಾಗಿ ತಾತ್ಕಾಲಿಕವಾಗಿ ವಲಸೆ ಹೋಗಿರುವ ಕೌಶಲ್ಯತೆ ಇಲ್ಲದ ಅಥವಾ ಕಡಿಮೆ ಕೌಶಲ್ಯವುಳ್ಳ ವೃತ್ತಿಯಲ್ಲಿರುವ ನಾಗರಿಕರು ಸಂಕಷ್ಟದಲ್ಲಿ ಸಿಲುಕಿದಾಗ ಅವರನ್ನು ವಾಪಸ್ ಕರೆ ತರುವಲ್ಲಿ ಭಾರತದ ವಿದೇಶಾಂಗ ಇಲಾಖೆ ಗಮನಾರ್ಹ ಕೆಲಸ ಮಾಡುತ್ತಿದೆ ಎಂದು ಪ್ರಶಂಸಿಸಿದರು.
ವಿದೇಶಗಳಲ್ಲಿರುವ ಅನಿವಾಸಿ ಭಾರತೀಯರ ಸಂಘಟನೆಗಳ ಜತೆ ನಿರಂತರ ಸಂಪರ್ಕ ಸಾಧಿಸಿ, ಉಭಯ ರಾಷ್ಟ್ರಗಳ ಸೌಹಾರ್ದ ಸಂಬಂಧ ವೃದ್ಧಿಯಲ್ಲಿ ವಿದೇಶಾಂಗ ಇಲಾಖೆ ಜತೆಗೆ ಸಂಘಟನೆಗಳೂ ಸಹಯೋಗ ನೀಡುತ್ತ ಬಂದಿವೆ. ಅನಿವಾಸಿ ಭಾರತೀಯರ ಜತೆ ಕೇಂದ್ರ ಮತ್ತು ಆಯಾ ರಾಜ್ಯಗಳು ಉತ್ತಮ ಸಂಬಂಧ ಹೊಂದಿರುವ ಕಾರಣಕ್ಕಾಗಿ ಕಳೆದ ೧೪ ವರ್ಷಗಳಿಂದ ಪ್ರವಾಸಿ ಭಾರತೀಯ ದಿವಸ್ ಒಂದು ಜಾಗತಿಕ ವೇದಿಕೆಯಾಗಿ ಪರಿವರ್ತನೆಗೊಂಡಿದೆ. ಇಂತಹ ಸಹಯೋಗದಿಂದಲೇ ಸಮಗ್ರ ಅಭಿವೃದ್ಧಿ ಸಾಧ್ಯ ಎಂದರು.
ಮೂಲ ಮರೆವುದು ಅಸಾಧ್ಯ:
ಯಾವುದೇ ದೇಶದ ಮೂಲವನ್ನು ಮರೆಯುವುದು ಮನುಷ್ಯನಿಗೆ ಸಾಧ್ಯವಿಲ್ಲ. ಅವರ ಸಂಸ್ಕೃತಿ, ಅವರ ನೆಲೆಗಳು, ರಕ್ತಸಂಬಂಧ ಅವರನ್ನು ಯಾವತ್ತಿಗೂ ತಾಯ್ನಾಡಿನತ್ತ ಸೆಳೆಯುತ್ತಲೇ ಇರುತ್ತದೆ. ಪೋರ್ಚುಗಲ್ ಪ್ರಧಾನಮಂತ್ರಿ ಡಾ.ಆಂಟೊನಿಯೋ ಕೊಸ್ಟಾ ಹಾಗೂ ಸುರಿನಾಮ್ ದೇಶದ ಉಪಾಧ್ಯಕ್ಷ ಮೈಕೆಲ್ ಅಶ್ವಿನ್ ಅದಿನ್ ಅವರು ಕೂಡ ತಮ್ಮ ಮೂಲ ನೆಲೆಯಾದ ಭಾರತವನ್ನು ಇಂದಿಗೂ ಪ್ರೀತಿಯಿಂದ ಕಾಣುತ್ತಿರುವುದು ನನ್ನಲ್ಲಿ ಬೆರಗು ಹುಟ್ಟಿಸಿದೆ. ಸುರಿನಾಮ್ ದೇಶದಲ್ಲಿ ಅನೇಕ ಭಾರತೀಯರು ಆ ರಾಷ್ಟ್ರದ ಪ್ರಗತಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಇಂತಹ ಸಂಗತಿಗಳೇ ನಮ್ಮ ಬಾಂಧವ್ಯವನ್ನು ಗಟ್ಟಿಗೊಳುತ್ತವೆ ಎಂದು ಪ್ರಶಂಸಿಸಿದರು.
ನಾಗರಿಕ ಸೇವೆ, ಸಮುದಾಯ ಸೇವೆ, ಶೈಕ್ಷಣಿಕ ಮತ್ತು ಉದ್ಯಮ ರಂಗ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ೩೦ ಜನ ಅನಿವಾಸಿ ಭಾರತೀಯರಿಗೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಪ್ರವಾಸಿ ಭಾರತೀಯ ಪುರಸ್ಕಾರ ಪ್ರದಾನ ಮಾಡಿದರು.
ಪೋರ್ಚುಗಲ್ ಪ್ರಧಾನಮಂತ್ರಿ ಡಾ.ಆಂಟೊನಿಯೋ ಕೊಸ್ಟಾ, ಸುರಿನಾಮ್ ದೇಶದ ಉಪಾಧ್ಯಕ್ಷ ಮೈಕೆಲ್ ಅಶ್ವಿನ್ ಅದಿನ್, ರಾಜ್ಯಪಾಲ ವಜುಭಾಯಿ ವಾಲಾ, ಮುಖ್ಯಮಂತ್ರಿ ಸಿದ್ದರಾಮಯ್ಯ, ಕೇಂದ್ರ ಸಂಸದೀಯ ವ್ಯವಹಾರಗಳ ಖಾತೆ ಸಚಿವ ಅನಂತ್‌ಕುಮಾರ್, ಕೇಂದ್ರ ಯೋಜನಾ ಸಚಿವ ಡಿ.ವಿ.ಸದಾನಂದಗೌಡ, ವಿದೇಶಾಂಗ ಇಲಾಖೆ ರಾಜ್ಯ ಸಚಿವ ಜನರಲ್ ವಿ.ಕೆ.ಸಿಂಗ್, ರಾಜ್ಯದ ಕೈಗಾರಿಕೆ ಸಚಿವ ಆರ್.ವಿ.ದೇಶಪಾಂಡೆ ವೇದಿಕೆಯಲ್ಲಿದ್ದರು.
