ಸರ್ಕಾರಿ ಮದ್ಯದಂಗಡಿಗಳಿಂದ ಮದ್ಯ ಖರೀದಿಸುವ ಮಧ್ಯವರ್ತಿಗಳು ಗ್ರಾಮೀಣ ಪ್ರದೇಶಗಳಲ್ಲಿ ನಿಗದಿತ ದರಕ್ಕಿಂತ ಹೆಚ್ಚಿನ ಬೆಲೆಯಲ್ಲಿ ಮಾರಾಟ ಮಾಡುತ್ತಿದ್ದು, ಇದನ್ನು ತಪ್ಪಿಸಲು ಈ ಕ್ರಮ
ಬೆಳಗಾವಿ(ಡಿ.1): ಇನ್ನು ಗ್ರಾಮೀಣ ಭಾಗದಲ್ಲೂ ಮದ್ಯದಂಗಡಿ ತೆರಯಲಾಗುತ್ತದೆ. ನೂತನ ಅಂಗಡಿ ತೆರೆಯಲು ಸರ್ಕಾರದಿಂದ ಅನುಮತಿ ನೀಡುತ್ತಿರುವುದಾಗಿ ಅಬಕಾರಿ ಸಚಿವ ಎಚ್.ವೈ. ಮೇಟಿ ಹೇಳಿದ್ದಾರೆ.
ವಿಧಾನ ಪರಿಷತ್ತಿನಲ್ಲಿ ಎಸ್.ನಾಗರಾಜ್ ಅವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಸರ್ಕಾರಿ ಮದ್ಯದಂಗಡಿಗಳಿಂದ ಮದ್ಯ ಖರೀದಿಸುವ ಮಧ್ಯವರ್ತಿಗಳು ಗ್ರಾಮೀಣ ಪ್ರದೇಶಗಳಲ್ಲಿ ನಿಗದಿತ ದರಕ್ಕಿಂತ ಹೆಚ್ಚಿನ ಬೆಲೆಯಲ್ಲಿ ಮಾರಾಟ ಮಾಡುತ್ತಿದ್ದು, ಇದನ್ನು ತಪ್ಪಿಸಲು ಈ ಕ್ರಮ ತೆಗೆದುಕೊಳ್ಳುತ್ತಿರುವುದಾಗಿ ಹೇಳಿದ್ದಾರೆ. ಅಲ್ಲದೆ, ಕಳೆದ ಒಂದು ವರ್ಷದಲ್ಲಿ ಅಕ್ರಮ ಕಲಬೆರಕೆ ಮದ್ಯ ಸೇವಿಸಿ ಸಾವಿಗೀಡಾದ ಯಾವುದೇ ಘಟನೆ ಸಂಭವಿಸಿಲ್ಲ. ಹುಣಸೂರು ಸಮೀಪದ ಕೊಟ್ಟಿಗೆ ಕಾವಲ್ ಹಾಡಿಯಲ್ಲಿ ವಯಸ್ಸಾಗಿ ಹಾಗೂ ವಿಭಿನ್ನ ರೋಗದಿಂದ ಅಸುನೀಗಿದ್ದಾರೆ ಹೊರತು ಮದ್ಯ ಸೇವನೆಯಿಂದ ಸಾವು ಸಂಭವಿಸಿಲ್ಲ ಎಂದು ತಿಳಿಸಿದ್ದಾರೆ. ಮೈಸೂರು ಜಿಲ್ಲೆಯಲ್ಲಿ ಸೆಪ್ಟೆಂಬರ್ 2015ರಿಂದ ಈವರೆಗೆ ಅಕ್ರಮ ಮದ್ಯ ಮಾರಾಟದ ಒಂಬತ್ತು ಪ್ರಕರಣಗಳನ್ನು ಪತ್ತೆ ಹಚ್ಚಲಾಗಿದೆ. ಚಾಮರಾಜನಗರ ಜಿಲ್ಲೆಯಲ್ಲಿ ಕಳೆದ ಜುಲೈನಿಂದ ಇಲ್ಲಿಯವರೆಗೆ 23 ಪ್ರಕರಣಗಳನ್ನು ಪತ್ತೆ ಹಚ್ಚಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.
