Asianet Suvarna News Asianet Suvarna News

ವಾಹನ ಕಳೆದೋದ್ರೆ ಆ್ಯಪ್‌ನಲ್ಲೇ ದೂರು ಕೊಡಿ!

ನಗರದಲ್ಲಿ ಪ್ರತಿದಿನ ಸರಾಸರಿಯಂತೆ 14 ವಾಹನಗಳು ಕಳವು
ಕಳವು ಆದ ವಾಹನಗಳ ಪತ್ತೆ ಪ್ರಮಾಣ ಶೇ.50ಕ್ಕಿಂತಲೂ ಕಡಿಮೆ
90 ದಿನದಲ್ಲಿ ವಾಹನ ಪತ್ತೆಯಾಗದಿದ್ದರೆ ‘ಬಿ' ರಿಪೋರ್ಟ್‌ ದಾಖಲು
ಕಳೆದ 6 ವರ್ಷದಲ್ಲಿ ಬೆಂಗಳೂರಲ್ಲಿ 33,652 ವಾಹನಗಳು ಕಳವು

Now report vehicle theft via app

ಬೆಂಗಳೂರು (ಮೇ.24): ನಿಮ್ಮ ವಾಹನ ಕಳ್ಳತನವಾಗಿದೆಯೇ? ಹಾಗಾದರೆ ಠಾಣೆಗೆ ಹೋಗಿ ದೂರು ನೀಡುವ ಅಗತ್ಯವಿಲ್ಲ. ಬದಲಿಗೆ ಕಳವು ಆಗಿರುವ ವಾಹನದ ಮಾಹಿತಿ ನೀಡಿ ಆ್ಯಪ್‌ ಮೂಲಕವೇ ‘ಎಫ್‌ಐಆರ್‌' ಪ್ರತಿ ಪಡೆಯಬಹುದು.
ಶೀಘ್ರದಲ್ಲೇ ಇಂತಹದೊಂದು ಆ್ಯಪ್‌ ತರಲು ನಗರ ಪೊಲೀಸರು ಸಿದ್ಧತೆ ನಡೆಸಿದ್ದಾರೆ.

ಕಳೆದ ವರ್ಷ ಕಳೆದು ಹೋದ ದಾಖಲೆ ಬಗ್ಗೆ ದೂರು ನೀಡಲು ಬೆಂಗಳೂರು ಪೊಲೀಸರು ‘ಇ-ಲಾಸ್ಟ್‌ ರಿಪೋರ್ಟ್‌' ಆ್ಯಪ್‌ ಅಭಿವೃದ್ಧಿಪಡಿಸಿದ್ದರು. ಇದೀಗ ಕಳವು ಆದ ವಾಹನಗಳ ದೂರು ನೀಡಲು ನೂತನ ಆ್ಯಪ್‌ಅನ್ನು ಅಭಿವೃದ್ಧಿಪಡಿ ಸುತ್ತಿರುವ ಬಗ್ಗೆ ನಗರ ಪೊಲೀಸ್‌ ಆಯುಕ್ತ ಪ್ರವೀಣ್‌ ಸೂದ್‌ ‘ಕನ್ನಡಪ್ರಭ'ಕ್ಕೆ ಮಾಹಿತಿ ನೀಡಿದ್ದಾರೆ.

ನಗರದಲ್ಲಿ ಕಳೆದ 6 ವರ್ಷಗಳಿಂದ ಪ್ರತಿ ದಿನ ಸರಾಸರಿಯಂತೆ 14 ವಾಹನಗಳು ಕಳವು ಆಗುತ್ತಿದೆ. ಆದರೆ, ಕಳವು ಆದ ವಾಹನಗಳ ಪತ್ತೆ ಪ್ರಮಾಣ ಶೇ.50ಕ್ಕಿಂತಲೂ ಕಡಿಮೆ. ವಾಹನ ಕಳೆದುಕೊಂಡವರು ದೂರು ನೀಡಲು ಠಾಣೆಗಳಿಗೆ ಅಲೆಯಬೇಕು. ವಾಹನದ ಮಾಲೀಕರು ತಮ್ಮ ಕೆಲಸ ಕಾರ್ಯ ಬಿಟ್ಟು, ವಾಹನ ಕಳವು ಆದ ಸ್ಥಳದಲ್ಲಿನ ಠಾಣಾ ವ್ಯಾಪ್ತಿಗೆ ಬರಬೇಕಾಗುತ್ತದೆ. 90 ದಿನದಲ್ಲಿ ವಾಹನ ಪತ್ತೆಯಾಗದಿದ್ದರೆ, ಪೊಲೀಸರು ಪ್ರಕರಣದ ‘ಬಿ' ರಿಪೋರ್ಟ್‌ ಹಾಕುತ್ತಾರೆ.

ವಿಮಾ ಹಣ ಕ್ಲೆಮು ಮಾಡಲು ದೂರದಾರರು ‘ಬಿ' ರಿಪೋರ್ಟ್‌ ಪಡೆಯಲು ಇನ್ನಿತರ ಕಾರಣಗಳಿಗೆ ಠಾಣೆಗೆ ಪದೇಪದೇ ತೆರಳಬೇಕು. ಇದು ದೂರುದಾರಿಗೆ ಸಮಸ್ಯೆಯಾಗಿದೆ. ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡುವ ದೃಷ್ಟಿಯಿಂದ ಕಳವು ಆದ ವಾಹನಗಳ ಬಗ್ಗೆ ದೂರು ನೀಡಲು ಹೊಸ ಆ್ಯಪ್‌ ತರಲು ಚಿಂತನೆ ನಡೆದಿದೆ ಎಂದು ನಗರ ಪೊಲೀಸ್‌ ಆಯುಕ್ತರು ‘ಕನ್ನಡಪ್ರಭ'ಕ್ಕೆ ತಿಳಿಸಿದ್ದಾರೆ.

Now report vehicle theft via app

ದೂರು ಕೊಡುವುದು ಹೇಗೆ?: ನೂತನ ಆ್ಯಪ್‌ನಲ್ಲಿ ಕಳವಾದ ವಾಹನದ ಹೆಸರು, ವಾಹನದ ಸಂಖ್ಯೆ, ವಾಹನ ಚಾಸ್ಸಿ ನಂಬರ್‌, ಆರ್‌.ಸಿ. ಕಾರ್ಡ್‌, ವಾಹನ ಕಳವು ಆಗಿರುವ ಸ್ಥಳ ಇನ್ನಿತರ ದಾಖಲೆ, ಮಾಹಿತಿಯನ್ನು ಅಪ್‌ಲೋಡ್‌ ಮಾಡಬೇಕು. ಕಳವು ಆದ ವಾಹನದ ಎಲ್ಲಾ ದಾಖಲೆಗಳನ್ನು ನಮೂದಿಸಿದ ಕೂಡಲೇ ಆ್ಯಪ್‌ನಿಂದ ‘ಎಫ್‌ಐಆರ್‌' ಪ್ರತಿ ಲಭ್ಯವಾಗುತ್ತದೆ.

90 ದಿನದಲ್ಲಿ ಕಳವು ಆಗಿರುವ ವಾಹನ ಪತ್ತೆಯಾಗದಿದ್ದಲ್ಲಿ ಪೊಲೀಸರು ‘ಬಿ' ರಿಪೋರ್ಟ್‌ ಸಲ್ಲಿಸುತ್ತಾರೆ. 90 ದಿನದ ಬಳಿಕ ಆ್ಯಪ್‌ನಲ್ಲೆ ಸುಲಭವಾಗಿ ‘ಬಿ' ರಿಪೋರ್ಟ್‌ ಪ್ರತಿ ಲಭ್ಯವಾಗುತ್ತದೆ. ಇದರಿಂದ ದೂರುದಾರರು ಸುಲಭವಾಗಿ ವಿಮಾ ಹಣ ಕ್ಲೆಮು ಮಾಡಬಹುದು. ಇದರಿಂದ ಸಮಯ ಉಳಿಯುತ್ತದೆ ಎಂದು ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ಕಳೆದ 6 ವರ್ಷದಲ್ಲಿ ದ್ವಿಚಕ್ರ, ತ್ರಿಚಕ್ರ, ನಾಲ್ಕು ಚಕ್ರ ವಾಹನಗಳು ಸೇರಿದಂತೆ 33,652 ವಾಹನಗಳು ಕಳುವಾಗಿವೆ. ಇವುಗಳ ಪತ್ತೆ ಪ್ರಮಾಣ ಶೇ.50ಕ್ಕಿಂತಲೂ ಕಡಿಮೆ ಇದೆ. ಕಳೆದ ವರ್ಷ 5,380 ದ್ವಿಚಕ್ರ ವಾಹನಗಳು ನಾಪತ್ತೆಯಾಗಿದ್ದು, 360 ನಾಲ್ಕು ಚಕ್ರ ವಾಹನಗಳ ಕಳವು ಆಗಿದೆ ಎಂದು ನಗರ ಅಪರಾಧ ದಾಖಲಾತಿ ಘಟಕ ಮಾಹಿತಿ ನೀಡಿದೆ. ಇದರ ಅನ್ವಯ ನಗರದಲ್ಲಿ ಪ್ರತಿ ದಿನ ಸರಾಸರಿಯಂತೆ 14 ವಾಹನಗಳು ಕಳವು ಆಗುತ್ತಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

Follow Us:
Download App:
  • android
  • ios