ಕಾಂಗ್ರೆಸ್‌, ಬಿಜೆಪಿಯನ್ನು ನಂಬೋಕಾಗಲ್ಲ: ದೇವೇಗೌಡ

ಎರಡೂ ಪಕ್ಷಗಳು ಒಂದೇ ನಾಣ್ಯದ 2 ಮುಖಗಳು| ಉಪಚುನಾವಣೆಯಲ್ಲಿ ಯಾರ ಜತೆಗೂ ಮೈತ್ರಿ ಇಲ್ಲ|ಉಪ ಚುನಾವಣೆಯಲ್ಲಿ ಜೆಡಿಎಸ್‌ ಏಕಾಂಗಿಯಾಗಿ ಸ್ಪರ್ಧೆ| ಕಾಂಗ್ರೆಸ್‌ ಜೊತೆಗಿನ ಮೈತ್ರಿಗೆ ತಮಗೂ ಮನಸ್ಸಿರಲಿಲ್ಲ|

Not Believe Congres, BJP Parties

ನವದೆಹಲಿ(ಅ.30): ದೇಶದ ಎರಡು ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್‌ ಮತ್ತು ಬಿಜೆಪಿ ಒಂದೇ ನಾಣ್ಯದ ಎರಡು ಮುಖಗಳಾಗಿದ್ದು, ಮುಂಬರುವ ಉಪ ಚುನಾವಣೆಯಲ್ಲಿ ನಂಬಿಕೆಗೆ ಅರ್ಹವಲ್ಲದ ಆ ಎರಡೂ ಪಕ್ಷಗಳ ಜೊತೆ ಮೈತ್ರಿ ಮಾಡಿಕೊಳ್ಳುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ನಾವು ಏಕಾಂಗಿಯಾಗಿ ಸ್ಪರ್ಧೆ ಮಾಡುತ್ತೇವೆ ಎಂದು ಜೆಡಿಎಸ್‌ ರಾಷ್ಟ್ರೀಯ ಅಧ್ಯಕ್ಷ ಹಾಗೂ ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ ಅವರು ಗುಡುಗಿದ್ದಾರೆ.

ಮಂಗಳವಾರ ಪಿಟಿಐ ಸುದ್ದಿ ಸಂಸ್ಥೆಗೆ ಸಂದರ್ಶನ ನೀಡಿದ ಅವರು, ಕಾಂಗ್ರೆಸ್‌ ಮತ್ತು ಜೆಡಿಎಸ್‌ನ 17 ಶಾಸಕರ ಅನರ್ಹತೆಯಿಂದಾಗಿ ರಾಜ್ಯದಲ್ಲಿ ಡಿ.5ಕ್ಕೆ ನಿಗದಿಯಾಗಿರುವ 15 ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಜೆಡಿಎಸ್‌ ಏಕಾಂಗಿಯಾಗಿ ಸ್ಪರ್ಧೆ ಮಾಡಲಿದೆ ಎಂದು ಹೇಳಿದರು. ಈ ಮೂಲಕ ಬಿಜೆಪಿ ಮತ್ತು ಕಾಂಗ್ರೆಸ್‌ ಪಕ್ಷಗಳು ಜೆಡಿಎಸ್‌ಗೆ ಸಮಾನ ಶತ್ರುಗಳು ಎಂದು ಪ್ರತಿಪಾದಿಸಿದರು.

ದಿಲ್ಲಿ ಗೆಸ್ಟ್‌ ಹೌಸ್‌ ತ್ಯಜಿಸಲು ದೇವೇಗೌಡಗೆ ಸೂಚನೆ

ಇನ್ನು ಮುಂಬರುವ 15 ಕ್ಷೇತ್ರಗಳ ಗೆಲುವಿಗೆ ಪಕ್ಷದ ಸಿದ್ಧತೆ ಬಗ್ಗೆ ಪ್ರತಿಕ್ರಿಯಿಸಿದ ದೇವೇಗೌಡ, ಕಾಂಗ್ರೆಸ್‌ ಮತ್ತು ಬಿಜೆಪಿಯಿಂದ ನಮಗೆ ಆಗಬೇಕಾದದ್ದು ಏನೂ ಇಲ್ಲ. ಆ ಎರಡೂ ಪಕ್ಷಗಳು ನಂಬಿಕೆಗೆ ಅರ್ಹವಲ್ಲ. ಆ ಎರಡೂ ಪಕ್ಷಗಳೂ ತಮಗೆ ಬೇಕಾದಾಗ ನಮ್ಮನ್ನು ಬಳಸಿಕೊಳ್ಳುತ್ತವೆ. ನಂತರ ನಮ್ಮನ್ನು ಹಾಳು ಮಾಡುತ್ತವೆ. ಹೀಗಾಗಿ, ಒಂದೇ ನಾಣ್ಯದ ಎರಡು ಮುಖಗಳಿಂತಿರುವ ರಾಷ್ಟ್ರೀಯ ಪಕ್ಷಗಳ ಜೊತೆ ಮೈತ್ರಿ ಮಾಡಿಕೊಳ್ಳುವುದಿಲ್ಲ. ನಾವು ಏಕಾಂಗಿಯಾಗಿ ಚುನಾವಣೆ ಎದುರಿಸುತ್ತೇವೆ ಎಂದು ಹೇಳಿದರು.

ಇನ್ನು, ಪ್ರಧಾನಿ ನರೇಂದ್ರ ಮೋದಿ ಮತ್ತು ನೀವು ಟ್ವೀಟರ್‌ನಲ್ಲಿ ಪರಸ್ಪರ ಮೆಚ್ಚುಗೆ ಮಾತುಗಳನ್ನಾಡುತ್ತಿದ್ದು, ಬಿಜೆಪಿ ಬಗ್ಗೆ ಮೃದು ಧೋರಣೆ ಹೊಂದಿದ್ದೀರಾ ಎಂಬ ಪ್ರಶ್ನೆಗೆ ಉತ್ತರಿಸಿ, ಅಂಥದ್ದೇನಿಲ್ಲ. ಪಕ್ಷಾಂತರ ನಿಷೇಧ ಕಾಯ್ದೆ ಪ್ರಕಾರ ಜೆಡಿಎಸ್‌ ಮತ್ತು ಕಾಂಗ್ರೆಸ್‌ನ 17 ಶಾಸಕರನ್ನು ಅನರ್ಹತೆಗೊಳಿಸಿದ್ದಕ್ಕಾಗಿ ಉಪ ಚುನಾವಣೆ ಏರ್ಪಟ್ಟಿದೆ ಎಂದು ಹೇಳಿದರು.

ಕಾಂಗ್ರೆಸ್‌ ಜತೆ ಮೈತ್ರಿ ಇಷ್ಟವಿರಲಿಲ್ಲ: ಗೌಡ

2018ರ ಕರ್ನಾಟಕದ ವಿಧಾನಸಭೆ ಚುನಾವಣೆಯಲ್ಲಿ ಯಾವೊಂದು ಪಕ್ಷಕ್ಕೂ ಬಹುಮತ ಬಾರದೇ ಇದ್ದಾಗ, ಕಾಂಗ್ರೆಸ್‌ ಜೊತೆಗಿನ ಮೈತ್ರಿಗೆ ತಮಗೂ ಮನಸ್ಸಿರಲಿಲ್ಲ. ಆದರೆ, ಕಾಂಗ್ರೆಸ್‌ನವರೇ ಮನೆ ಬಾಗಿಲಿಗೆ ಬಂದು ಜೆಡಿಎಸ್‌-ಕಾಂಗ್ರೆಸ್‌ ಮೈತ್ರಿ ಸರ್ಕಾರ ರಚನೆಯ ಅಹ್ವಾನ ನೀಡಿದರು. ಆದಾಗ್ಯೂ, ಕಾಂಗ್ರೆಸ್‌ನ ಈ ಪ್ರಸ್ತಾಪವನ್ನು ಮೊದಲಿಗೆ ನಾನು ತಿರಸ್ಕರಿಸಿದ್ದೆ. ಆದರೆ, ಕಾಂಗ್ರೆಸ್‌ನ ನಿರಂತರ ಒತ್ತಡದಿಂದಾಗಿ ಮೈತ್ರಿ ಸರ್ಕಾರ ಪ್ರಸ್ತಾಪವನ್ನು ಅನಿವಾರ್ಯವಾಗಿ ಒಪ್ಪಿಕೊಂಡೆ ಎಂದು ದೇವೇಗೌಡ ತಿಳಿಸಿದ್ದಾರೆ.

Latest Videos
Follow Us:
Download App:
  • android
  • ios