ಪ್ರಕರಣದ ವಿಚಾರಣೆಗಳಿಗೆ ಸತತ ಗೈರಾಗುತ್ತಿರುವ ಬಿಡದಿ ಧ್ಯಾನಪೀಠದ ನಿತ್ಯಾನಂದ ಸ್ವಾಮೀಜಿಗೆ ಇದೀಗ ಸಂಕಷ್ಟ ಎದುರಾಗಿದೆ. ಈ ನಿಟ್ಟಿನಲ್ಲಿ ಇಲ್ಲಿನ 3ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜಾಮೀನು ರಹಿತ ವಾರೆಂಟ್‌ ಹೊರಡಿಸಿದೆ. 

ರಾಮನಗರ: ಪ್ರಕರಣದ ವಿಚಾರಣೆಗಳಿಗೆ ಸತತ ಗೈರಾಗುತ್ತಿರುವ ಬಿಡದಿ ಧ್ಯಾನಪೀಠದ ನಿತ್ಯಾನಂದ ಸ್ವಾಮೀಜಿಗೆ ಇಲ್ಲಿನ 3ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜಾಮೀನು ರಹಿತ ವಾರೆಂಟ್‌ ಹೊರಡಿಸಿದೆ. ನಿತ್ಯಾನಂದ ಮತ್ತು ಆತನ ಅನುಯಾಯಿಗಳು ಸೇರಿ ಆರು ಮಂದಿಯ ವಿರುದ್ಧದ ಆರೋಪಗಳ ಕುರಿತು 3ನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ. 

2018ರ ಜೂನ್‌ ತಿಂಗಳಿಂದ ಇಲ್ಲಿಯವರೆಗೆ ಪ್ರಮುಖ ಆರೋಪಿ ನಿತ್ಯಾನಂದ ಸ್ವಾಮಿ ಗೈರಾಗಿದ್ದನು. ಚಾತುರ್ಮಾಸ ಪರಿಕ್ರಮದ ಆಚರಣೆಯಲ್ಲಿ ಇರುವುದರಿಂದ ಆತ ನ್ಯಾಯಾಲಯದ ವಿಚಾರಣೆಗೆ ಆಗಮಿಸಲು ಸಾಧ್ಯವಾಗುತ್ತಿಲ್ಲ ಎಂದು ಸ್ವಾಮೀಜಿ ಪರ ವಕೀಲರು ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದರು.

ವಿಚಾರಣೆಯನ್ನು ಶೀಘ್ರವಾಗಿ ಮುಗಿಸುವಂತೆ ಮತ್ತು ಆರೋಪಿಗಳು ಸಹಕರಿಸಬೇಕು ಎಂದು ಸುಪ್ರೀಂ ಕೋರ್ಟಿನ ಆದೇಶವಿದೆ ಎಂದು ನ್ಯಾಯಾಲಯ ಕಳೆದ ಆಗಸ್ಟ್‌ 16ರಂದು ನಡೆದ ವಿಚಾರಣೆ ವೇಳೆ ಹೇಳಿತ್ತು. 

ಆದರೆ, ಗುರುವಾರ ವಿಚಾರಣೆಯಲ್ಲಿ ಪ್ರಥಮ ಆರೋಪಿ ನಿತ್ಯಾನಂದ ಸ್ವಾಮೀಜಿ ಮತ್ತೆ ಗೈರಾಗಿದ್ದರು. ಇದನ್ನು ನ್ಯಾಯಾಲಯ ಗಂಭೀರವಾಗಿ ಪರಿಗಣಿಸಿ, ಸ್ವಾಮೀಜಿ ಗೈರಿಗೆ ಅನುಮತಿ ಕೋರಿದ ಮನವಿಯನ್ನು ತಿರಸ್ಕರಿಸಿದೆ. ಅಲ್ಲದೆ, ನಿತ್ಯಾನಂದನ ವಿರುದ್ಧ ಜಾಮೀನು ರಹಿತ ವಾರೆಂಟ್‌ ಹೊರಡಿಸಿದೆ. ಜಾಮೀನಿಗೆ ನೀಡಿದ ಶ್ಯೂರಿಟಿಗೂ ನ್ಯಾಯಾಲಯ ನೋಟಿಸ್‌ ಜಾರಿ ಮಾಡಿದೆ. ವಿಚಾರಣೆಯನ್ನು ನ್ಯಾಯಾಲಯ ಸೆ.14ಕ್ಕೆ ಮುಂದೂಡಿದೆ.