ಸಿಎಜಿ ವರದಿಯಲ್ಲಿ ಪ್ರಸ್ತಾಪಿಸವಾಗಿರುವ ಕೊರತೆಯ ಅಂಶ, ಯಾವುದೋ ಒಂದು ಸಮಯಕ್ಕೆ ಸೀಮಿತವಾಗಿದ್ದು, ಆದರೆ ಇದೀಗ ಆ ಪರಿಸ್ಥಿತಿ ಇಲ್ಲ. ಖರೀದಿ ಪ್ರಕ್ರಿಯೆಯನ್ನು ಸರಳೀಕೃತಗೊಳಿಸಲಾಗಿದ್ದು, ಅಗತ್ಯ ಶಸ್ತ್ರಾಸ್ತ್ರಗಳನ್ನು ಖರೀದಿಸಲಾಗಿದೆ. ಹೀಗಾಗಿ ಇದೀಗ ಸೇನೆಯ ಬಳಿ ಅಗತ್ಯ ಪ್ರಮಾಣದ ಶಸ್ತ್ರಾಸ್ತ್ರಗಳ ಸಂಗ್ರಹ ಇದೆ. ಆತಂಕ ಪಡಬೇಕಾದ ಅಗತ್ಯವಿಲ್ಲ ಎಂದು ಸಚಿವ ಅರುಣ್ ಜೇಟ್ಲಿ ಸದನಕ್ಕೆ ಭರವಸೆ ನೀಡಿದರು.
ನವದೆಹಲಿ: ಯುದ್ಧ ನಡೆದರೆ ಭಾರತದ ಸೇನೆಯಲ್ಲಿ ಪ್ರಮುಖ ಶಸ್ತ್ರಾಸ್ತ್ರಗಳು ಕೇವಲ 10 ದಿನದಲ್ಲಿ ಖಾಲಿಯಾಗಲಿವೆ ಎಂಬ ಇತ್ತೀಚಿನ ಮಹಾಲೇಖಪಾಲರ (ಸಿಎಜಿ) ವರದಿ ಬಗ್ಗೆ ಸ್ಪಷ್ಟನೆ ನೀಡಿರುವ ಕೇಂದ್ರ ಸರ್ಕಾರ, ಆತಂಕ ಬೇಡ. ಭಾರತೀಯ ಸೇನೆ ಬಳಿ ಸೂಕ್ತ ಪ್ರಮಾಣದ ಶಸ್ತ್ರಾಸ್ತ್ರಗಳ ಸಂಗ್ರಹ ಇದೆ ಎಂದು ಭರವಸೆ ನೀಡಿದೆ.
ಇತ್ತೀಚೆಗೆ ಸಂಸತ್ತಿನಲ್ಲಿ ಮಂಡಿಸಲಾದ ಸಿಎಜಿ ವರದಿಯಲ್ಲಿ, ಯಾವುದೇ ದೇಶ ಯುದ್ಧ ಸನ್ನದ್ಧ ಸ್ಥಿತಿಯಲ್ಲಿ ಇರಲು ಕನಿಷ್ಠ ೪೦ ದಿನಗಳಿಗೆ ಆಗುವಷ್ಟು ಶಸ್ತ್ರಾಸ್ತ್ರಗಳ ದಾಸ್ತಾನು ಹೊಂದಿರಬೇಕು. ಆದರೆ ಭಾರತೀಯ ಸೇನೆಗೆ ಅಗತ್ಯವಾದ ೧೫೨ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳ ಪೈಕಿ 61 ಶಸ್ತ್ರಾಸ್ತ್ರಗಳ ಪ್ರಮಾಣ ಕೇವಲ 10 ದಿನಕ್ಕೆ ಮಾತ್ರವೇ ಸಾಲುವಷ್ಟಿದೆ ಎಂದು ಪ್ರಸ್ತಾಪಿಸಿತ್ತು.
ನೆರೆಯ ಚೀನಾ ಡೋಕ್ಲಾಮ್ ವಿಷಯದ ಮುಂದಿಟ್ಟುಕೊಂಡು ಕಾಲು ಕೆರೆದು ಜಗಳ ಮಾಡುತ್ತಿರುವ ಹೊತ್ತಿನಲ್ಲೇ ಹೊರಬಿದ್ದಿದ್ದ ಸಿಎಜಿ ವರದಿ ಸಹಜವಾಗಿಯೇ ಆತಂಕಕ್ಕೆ ಕಾರಣವಾಗಿತ್ತು. ಈ ಬಗ್ಗೆ ವಿಪಕ್ಷಗಳ ಸದಸ್ಯರು, ರಾಜ್ಯಸಭೆಯಲ್ಲಿ ಸರ್ಕಾರ ಗಮನ ಸೆಳೆದಾಗ ಉತ್ತರಿಸಿದ ರಕ್ಷಣಾ ಖಾತೆ ಸಚಿವ ಅರುಣ್ ಜೇಟ್ಲಿ, ಸಿಎಜಿ ವರದಿಯಲ್ಲಿ ಪ್ರಸ್ತಾಪಿಸವಾಗಿರುವ ಕೊರತೆಯ ಅಂಶ, ಯಾವುದೋ ಒಂದು ಸಮಯಕ್ಕೆ ಸೀಮಿತವಾಗಿದ್ದು, ಆದರೆ ಇದೀಗ ಆ ಪರಿಸ್ಥಿತಿ ಇಲ್ಲ. ಖರೀದಿ ಪ್ರಕ್ರಿಯೆಯನ್ನು ಸರಳೀಕೃತಗೊಳಿಸಲಾಗಿದ್ದು, ಅಗತ್ಯ ಶಸ್ತ್ರಾಸ್ತ್ರಗಳನ್ನು ಖರೀದಿಸಲಾಗಿದೆ. ಹೀಗಾಗಿ ಇದೀಗ ಸೇನೆಯ ಬಳಿ ಅಗತ್ಯ ಪ್ರಮಾಣದ ಶಸ್ತ್ರಾಸ್ತ್ರಗಳ ಸಂಗ್ರಹ ಇದೆ. ಆತಂಕ ಪಡಬೇಕಾದ ಅಗತ್ಯವಿಲ್ಲ ಎಂದು ಸದನಕ್ಕೆ ಭರವಸೆ ನೀಡಿದರು.
epaperkannadaprabha.com
