ರಾಜ್ಯ ಸರ್ಕಾರವು 2018-19ನೇ ಸಾಲಿನಿಂದ ಕನ್ನಡವನ್ನು ಪ್ರಥಮ ಅಥವಾ ದ್ವಿತೀಯ ಭಾಷೆಯಾಗಿ 1ರಿಂದ 10ನೇ ತರಗತಿವರೆಗೂ ಬೋಧನೆ ಮಾಡಬೇಕೆಂಬ ಕಟ್ಟುನಿಟ್ಟಿನ ಕಾನೂನು ಮಾಡಿದೆ. ಆದರೆ, ರಾಜ್ಯಾದ್ಯಂತ 47 ಖಾಸಗಿ ಶಾಲೆಗಳು ರಾಜ್ಯ ಸರ್ಕಾರಕ್ಕೆ ಸಡ್ಡು ಹೊಡೆದಿದ್ದು, ಕನ್ನಡಕ್ಕೆ ಕ್ಯಾರೆ ಎನ್ನುತ್ತಿಲ್ಲ.
ಬೆಂಗಳೂರು : ಇಂದು ಕನ್ನಡ ರಾಜ್ಯೋತ್ಸವ. ಕನ್ನಡ ಕಲಿಕೆ ರಾಜ್ಯದಲ್ಲಿ ಪ್ರಧಾನವಾಗಬೇಕು ಎಂದು ರಾಜ್ಯ ಸರ್ಕಾರವು 2018-19ನೇ ಸಾಲಿನಿಂದ ಕನ್ನಡವನ್ನು ಪ್ರಥಮ ಅಥವಾ ದ್ವಿತೀಯ ಭಾಷೆಯಾಗಿ 1ರಿಂದ 10ನೇ ತರಗತಿವರೆಗೂ ಬೋಧನೆ ಮಾಡಬೇಕೆಂಬ ಕಟ್ಟುನಿಟ್ಟಿನ ಕಾನೂನು ಮಾಡಿದೆ. ಆದರೆ, ರಾಜ್ಯಾದ್ಯಂತ 47 ಖಾಸಗಿ ಶಾಲೆಗಳು ರಾಜ್ಯ ಸರ್ಕಾರಕ್ಕೆ ಸಡ್ಡು ಹೊಡೆದಿದ್ದು, ಕನ್ನಡಕ್ಕೆ ಕ್ಯಾರೆ ಎನ್ನುತ್ತಿಲ್ಲ.
ಹೀಗೆಂದು ಖುದ್ದು ಶಿಕ್ಷಣ ಇಲಾಖೆಯೇ ಹೇಳುತ್ತಿದೆ. ಸರ್ಕಾರದ ನೀತಿಯನ್ನು ಪಾಲಿಸದ 47 ಶಾಲೆಗಳ ಪಟ್ಟಿಯನ್ನು ಶಿಕ್ಷಣ ಇಲಾಖೆ ಸಿದ್ಧಪಡಿಸಿದೆ. ರಾಜ್ಯ ಪಠ್ಯಕ್ರಮ, ಸಿಬಿಎಸ್‌ಇ ಹಾಗೂ ಐಸಿಎಸ್‌ಇ ಪಠ್ಯಕ್ರಮದಲ್ಲಿ ಬೋಧನೆ ಮಾಡುತ್ತಿರುವ ಈ 47 ಖಾಸಗಿ ಶಾಲೆಗಳು ಕನ್ನಡ ಕಲಿಸಬೇಕು ಎಂಬ ನಿಯಮವನ್ನು ಪಾಲಿಸುತ್ತಿಲ್ಲ.
ಕುತೂಹಲಕಾರಿ ಸಂಗತಿಯೆಂದರೆ, ಈ 47 ಶಾಲೆಗಳ ಪೈಕಿ 31 ಶಾಲೆಗಳು ರಾಜಧಾನಿ ಬೆಂಗಳೂರಿನಲ್ಲೇ ಇವೆ. ಈ ಶಾಲೆಗಳು ಸರ್ಕಾರದ ಹೊಸ ನೀತಿಗೆ ಕವಡೆ ಕಾಸಿನ ಕಿಮ್ಮತ್ತು ನೀಡಿಲ್ಲ ಎಂಬ ಮಾಹಿತಿಯು ಶಿಕ್ಷಣ ಇಲಾಖೆಯಿಂದಲೇ ಲಭ್ಯವಾಗಿದೆ. ಆದರೂ, ಈ ಶಾಲೆಗಳ ಮೇಲೆ ಇನ್ನೂ ಯಾವುದೇ ಕ್ರಮ ಜರುಗಿಸಲಾಗಿಲ್ಲ.
ಕನ್ನಡ ಅಭಿವೃದ್ಧಿ ಪ್ರಾಧಿಕಾರವು ‘ಕನ್ನಡ ಭಾಷಾ ಕಲಿಕಾ ಅಧಿನಿಯಮ-2015’ರ ಪ್ರಕಾರ ರಾಜ್ಯದ ಪ್ರತಿ ಶಾಲೆಗಳು ಕನ್ನಡ ಕಲಿಸಬೇಕು ಎಂದು ರಾಜ್ಯ ಸರ್ಕಾರಕ್ಕೆ ಶಿಫಾರಸು ಮಾಡಿತ್ತು. ಇದರ ಆಧಾರದ ಮೇಲೆ ರಾಜ್ಯ ಸರ್ಕಾರವು ಕನ್ನಡವನ್ನು ಪ್ರಥಮ ಅಥವಾ ದ್ವಿತೀಯ ಭಾಷೆಯಾಗಿ ಕಲಿಸಬೇಕು ಎಂಬ ನೀತಿಯನ್ನು ರಾಜ್ಯದಲ್ಲಿ ಕಡ್ಡಾಯವಾಗಿ ಜಾರಿಗೆ ತಂದಿದೆ. ಈ ನೀತಿಯನ್ನು ರಾಜ್ಯದಲ್ಲಿರುವ ಸುಮಾರು 25 ಸಾವಿರ ಖಾಸಗಿ ಕಾಲೇಜುಗಳು ಪಾಲಿಸಲು ಮುಂದಾಗಿವೆ. ಆದರೆ, ಈ 47 ಖಾಸಗಿ ಶಾಲೆಗಳು ಮಾತ್ರ ಜಪ್ಪಯ್ಯ ಎನ್ನುತ್ತಿಲ್ಲ. ಕುತೂಹಲಕಾರಿ ಸಂಗತಿಯೆಂದರೆ, ಸರ್ಕಾರದ ನೀತಿಗೆ ಕ್ಯಾರೆ ಎನ್ನದ ಈ ಶಾಲೆಗಳ ಪೈಕಿ ಹೆಚ್ಚಿನವು ಅಂತಾರಾಷ್ಟ್ರೀಯ ಶಾಲೆಗಳು!
ನಿಯಮ ಪಾಲಿಸದ ಶಾಲೆಗಳು: ಬೆಂಗಳೂರಿನ ಸಂಜಯನಗರದ ಶಿಕ್ಷಾನಗರ ಸಾಗರ ಶಾಲೆ, ಕಾವಲ್ ಬೈರಸಂದ್ರದ ಪೂರ್ಣಸ್ಮೃತಿ ಶಾಲೆ, ಸುಂಕದಕಟ್ಟೆಯ ಗಂಗೋತ್ರಿ ಅಂತಾರಾಷ್ಟ್ರೀಯ ಶಾಲೆ, ಇಂಡಿಯನ್ ಪಬ್ಲಿಕ್ ಶಾಲೆ, ಪ್ರಗತಿ ದಿ ಸ್ಕೂಲ್, ಸಂಹಿತಾ ಅಕಾಡೆಮಿ, ರವೀಂದ್ರ ಭಾರತಿ, ಏರ್ ಇನ್ನೋವೇಟಿವ್, ಎಸ್‌ಎಸ್‌ಎಂ ಪಬ್ಲಿಕ್ ಸ್ಕೂಲ್, ಆರ್‌ಎಂಎಸ್ ಐಕ್ಯ ಸ್ಕೂಲ್, ಈಸ್ಟ್ ವೆಸ್ಟ್ ಅಕಾಡೆಮಿ ಸೇರಿದಂತೆ ಬೆಂಗಳೂರಿನ 31 ಶಾಲೆಗಳು ಹಾಗೂ ರಾಜ್ಯದ ಇತರೆಡೆಯ 16 ಶಾಲೆಗಳು.
ಏನು ಕ್ರಮ ಕೈಗೊಳ್ಳಬಹುದು?: ನಿಯಮಗಳ ಪ್ರಕಾರ, ರಾಜ್ಯ ಪಠ್ಯಕ್ರಮ ಬೋಧಿಸುವ ಶಾಲೆಗಳಿಗೆ ನೋಟಿಸ್ ನೀಡಿ ಕಾರಣ ಕೇಳಬೇಕು. ಸಮರ್ಪಕ ಉತ್ತರ ಬಾರದಿದ್ದಲ್ಲಿ, ಶಾಲೆಗಳ ಮಾನ್ಯತೆ ರದ್ದುಗೊಳಿಸಬೇಕು. ಇನ್ನು ಕೇಂದ್ರ ಪಠ್ಯಕ್ರಮದ ಶಾಲೆಗಳಿಗೆ ನೋಟಿಸ್ ನೀಡುವ ಜತೆಗೆ ಐಸಿಎಸ್‌ಇ ಮತ್ತು ಸಿಬಿಎಸ್‌ಇ ಮಂಡಳಿಗೆ ಶಾಲೆಗಳು ನಿಯಮ ಉಲ್ಲಂಘಿಸಿರುವ ಕುರಿತು ಸರ್ಕಾರ ಪತ್ರ ಬರೆಯಬೇಕು. ನಂತರ ಮಾನ್ಯತೆ ರದ್ದತಿಗೆ ಸೂಚಿಸಬೇಕು. ಅಲ್ಲದೆ, ಮೊದಲ ಬಾರಿಗೆ ಶಾಲೆಗಳಿಗೆ ನೋಟಿಸ್ ನೀಡಿ ಗಡುವು ನೀಡಬೇಕು. ಗಡುವು ಮುಗಿದ ಬಳಿಕವೂ ನಿಯಮ ಪಾಲಿಸದಿದ್ದರೆ ಪ್ರತಿ ದಿನ 100 ರು. ದಂಡ ವಿಧಿಸಬೇಕು.
ನಿಯಮ ಉಲ್ಲಂಘಿಸಿರುವ ಯಾವುದೇ ಶಾಲೆಗಳ ವಿರುದ್ಧ ಇಲಾಖೆಯು ಈವರೆಗೆ ಕ್ರಮ ಜರುಗಿಸಿರುವ ಉದಾಹರಣೆಗಳಿಲ್ಲ. ಇಲಾಖೆ ಕ್ರಮ ಕೈಗೊಳ್ಳದಿರುವುದೇ ಖಾಸಗಿ ಶಾಲೆಗಳಿಗೆ ವರವಾಗಿ ಪರಿಣಮಿಸಿದ್ದು, ಕನ್ನಡ ವಿರೋಧಿತನ ಪ್ರದರ್ಶಿಸುತ್ತಿವೆ.
ನಿಯಮ ಉಲ್ಲಂಘಿಸಿರುವ ಶಾಲೆಗಳಿಗೆ ನೋಟಿಸ್ ನೀಡುವಂತೆ ಮತ್ತು ಕಾನೂನು ಪ್ರಕಾರ ಕ್ರಮ ಜರುಗಿಸುವಂತೆ ಶಿಕ್ಷಣ ಇಲಾಖೆಯ ಎಲ್ಲಾ ಜಿಲ್ಲಾ ಉಪ ನಿರ್ದೇಶಕರಿಗೆ ಸೂಚನೆ ನೀಡಲಾಗಿದೆ.
- ಶಾಲಿನಿ ರಜನೀಶ್, ಪ್ರಧಾನ ಕಾರ್ಯದರ್ಶಿ, ಶಿಕ್ಷಣ ಇಲಾಖೆ
ರಾಜ್ಯದ ಖಾಸಗಿ ಶಾಲೆಗಳು ನಿಯಮ ಪಾಲಿಸದ ಶಾಲೆಗಳು
ರಾಜ್ಯ ಪಠ್ಯಕ್ರಮ 24,978 8
ಸಿಬಿಎಸ್‌ಇ 752 29
ಐಸಿಎಸ್‌ಇ 301 10
ಒಟ್ಟು 26,031 47
ಬೆಂಗಳೂರಿನ ಖಾಸಗಿ ಶಾಲೆಗಳು ನಿಯಮ ಪಾಲಿಸದ ಶಾಲೆಗಳು
ರಾಜ್ಯ ಪಠ್ಯಕ್ರಮ 3,153 8
ಸಿಬಿಎಸ್‌ಇ 273 14
ಐಸಿಎಸ್‌ಇ 213 9
ಒಟ್ಟು 3,639 31
ವರದಿ : ಎನ್.ಎಲ್. ಶಿವಮಾದು
Read Exclusive COVID-19 Coronavirus News updates, from Karnataka, India and World at Asianet News Kannada.
ವರ್ಚುಯಲ್ ಬೋಟ್ ರೇಸಿಂಗ್ ಗೇಮ್ ಆಡಿ ಮತ್ತು ನಿಮಗೆ ನೀವೇ ಸವಾಲು ಹಾಕಿಕೊಳ್ಳಿ ಈಗಲೇ ಆಡಲು ಕ್ಲಿಕ್ಕಿಸಿ
Last Updated Nov 1, 2018, 8:58 AM IST