Sri Siddalinga Swamiji wishes 2026 ತುಮಕೂರಿನ ಸಿದ್ದಗಂಗಾ ಮಠದ ಶ್ರೀ ಸಿದ್ಧಲಿಂಗ ಸ್ವಾಮೀಜಿಯವರು 2026ರ ಹೊಸ ವರ್ಷಕ್ಕೆ ನಾಡಿನ ಜನತೆಗೆ ಶುಭ ಕೋರಿದ್ದಾರೆ. ಹಳೆಯ ಕಹಿ ಮರೆತು, ಪ್ರಕೃತಿ ಹಾಗೂ ಮಾನವೀಯತೆಯನ್ನು ಬೆಸೆಯುವ ಸಮಾಜ ನಿರ್ಮಿಸಲು ಕರೆ ನೀಡಿದರು.
ತುಮಕೂರು(ಜ.1): ಹೊಸ ವರ್ಷದ ಆರಂಭದ ಹಿನ್ನೆಲೆಯಲ್ಲಿ ತುಮಕೂರಿನ ಐತಿಹಾಸಿಕ ಸಿದ್ದಗಂಗಾ ಮಠದ ಮಠಾಧ್ಯಕ್ಷರಾದ ಶ್ರೀ ಸಿದ್ಧಲಿಂಗ ಸ್ವಾಮೀಜಿಯವರು ನಾಡಿನ ಜನತೆಗೆ 2026ರ ಹೊಸ ವರ್ಷದ ಶುಭಾಶಯಗಳನ್ನು ಕೋರಿದ್ದಾರೆ. ಹಳೆಯ ಕಹಿ ಘಟನೆಗಳನ್ನು ಮರೆತು, ಹೊಸತನದೊಂದಿಗೆ ಪ್ರಕೃತಿ ಮತ್ತು ಮಾನವೀಯತೆಯನ್ನು ಬೆಸೆಯುವ ಸಮಾಜ ನಿರ್ಮಾಣಕ್ಕೆ ಶ್ರೀಗಳು ಆಶೀರ್ವಚನ ನೀಡಿದ್ದಾರೆ.
ವ್ಯವಹಾರಕ್ಕೆ ಕ್ಯಾಲೆಂಡರ್, ಬದುಕಿಗೆ ಸಂಸ್ಕೃತಿ ಮುಖ್ಯ
ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ನಾವು ಯುಗಾದಿಯನ್ನು ಹೊಸ ವರ್ಷವಾಗಿ ಪ್ರಕೃತಿಯ ಜೊತೆ ಆಚರಿಸುತ್ತೇವೆ. ಆದರೆ ವ್ಯವಹಾರಿಕ ದೃಷ್ಟಿಯಿಂದ ಇಂದು 2025ಕ್ಕೆ ವಿದಾಯ ಹೇಳಿ 2026ಕ್ಕೆ ಕಾಲಿಡುತ್ತಿದ್ದೇವೆ ಎಂದು ಶ್ರೀಗಳು ನೆನಪಿಸಿದರು. ಕಳೆದ ವರ್ಷದ ಪ್ರಗತಿ, ಸಾಧನೆ ಮತ್ತು ದುಃಖಕರ ಸನ್ನಿವೇಶಗಳನ್ನು ಮೆಲುಕು ಹಾಕುತ್ತಾ, ಹೊಸ ವರ್ಷದಲ್ಲಿ ಅಂತಹ ಅಹಿತಕರ ಘಟನೆಗಳು ಮರುಕಳಿಸದಿರಲಿ ಎಂದು ಶ್ರೀಗಳು ಹಾರೈಸಿದರು.
ಸಂತೋಷ ಮತ್ತು ನೆಮ್ಮದಿ ನಮ್ಮೊಳಗಿರಲಿ
ಮನುಷ್ಯನ ಇಂದಿನ ಅತಿದೊಡ್ಡ ಅವಶ್ಯಕತೆ ನೆಮ್ಮದಿ ಎಂದು ಪ್ರತಿಪಾದಿಸಿದ ಶ್ರೀಗಳು, ನೆಮ್ಮದಿ ಮತ್ತು ಸಂತೋಷವನ್ನು ನಾವು ನಮ್ಮೊಳಗೆ ಕಂಡುಕೊಳ್ಳಬೇಕು. ಹೊರಗಿನ ವಸ್ತುಗಳು ಕೇವಲ ಪೂರಕ ಅಷ್ಟೇ. ಪ್ರತಿಯೊಬ್ಬರೂ ಪ್ರೀತಿ-ವಿಶ್ವಾಸದಿಂದ ಬದುಕುವ ವಾತಾವರಣ ಸೃಷ್ಟಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ. ಅಶಾಂತಿಯನ್ನು ತೊರೆದು ತನ್ಮನಗಳಲ್ಲಿ ಶಾಂತಿ ನೆಲೆಸುವಂತೆ ಮಾಡಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ರೈತರು ಬೆಳೆದರೆ ಜಗತ್ತು ಶಾಂತವಾಗಿರಲು ಸಾಧ್ಯ
ಹೊಸ ವರ್ಷದಲ್ಲಿ ರಾಜ್ಯದಲ್ಲಿ ಉತ್ತಮ ಮಳೆ-ಬೆಳೆಯಾಗಲಿ ಎಂದು ಶ್ರೀಗಳು ಹಾರೈಸಿದರು. "ರೈತರು ಚೆನ್ನಾಗಿದ್ದಾಗ ಮಾತ್ರ ಜಗತ್ತು ಶಾಂತಿಯಿಂದ ಇರಲು ಸಾಧ್ಯ. ಪ್ರಾಕೃತಿಕವಾಗಿ ಮಳೆ ಚೆನ್ನಾಗಿ ಆದಾಗ ಎಲ್ಲರಿಗೂ ನೆಮ್ಮದಿ ಸಿಗುತ್ತದೆ. ಕಳೆದ ವರ್ಷ ಅನಾಹುತಕ್ಕೆ ಒಳಗಾದವರಿಗೆ ದುಃಖ ಭರಿಸುವ ಶಕ್ತಿ ಸಿಗಲಿ ಹಾಗೂ ಇನ್ನು ಮುಂದೆ ಇಂತಹ ಅವಘಡಗಳು ಸಂಭವಿಸದಿರಲಿ" ಎಂದು ಶ್ರೀಗಳು ಪ್ರಾರ್ಥಿಸಿದರು.
ಪರಿಸರ ರಕ್ಷಣೆಗೆ 'ಒಂದು ಗಿಡ ನೆಡುವ' ಸಂಕಲ್ಪ ಮಾಡಿ
ಇಂದಿನ ಮಾಲಿನ್ಯಯುತ ಜಗತ್ತಿನಲ್ಲಿ ಪ್ರಕೃತಿಯನ್ನು ಉಳಿಸುವುದು ನಮ್ಮೆಲ್ಲರ ಹೊಣೆ ಎಂದು ಶ್ರೀಗಳು ಕರೆ ನೀಡಿದರು. 'ಪ್ರತಿಯೊಬ್ಬರೂ ಈ ವರ್ಷ ಒಂದು ಗಿಡ ನೆಟ್ಟು ಅದನ್ನು ಕಾಪಾಡುವ ಸಂಕಲ್ಪ ಮಾಡಬೇಕು. ಪ್ರಕೃತಿಯ ರಕ್ಷಣೆ ನಮ್ಮ ಮೊದಲ ಕೊಡುಗೆಯಾಗಲಿ. ಕಾಯಾ-ವಾಚಾ-ಮನಸಾ ದೇಶಕ್ಕೆ ಮತ್ತು ಜನತೆಗೆ ಒಳಿತನ್ನು ಮಾಡುವ ಕೆಲಸವಾಗಲಿ' ಎಂದು ಪರಿಸರ ಜಾಗೃತಿಯ ಮಂತ್ರ ಬೋಧಿಸಿದರು.
ಹೊಸತನದೊಂದಿಗೆ ಉತ್ತಮ ಪರಿಸರ ನಿರ್ಮಾಣಕ್ಕೆ ಹಾರೈಕೆ
ಮನುಷ್ಯರು ಮಾತ್ರವಲ್ಲದೆ ಸಕಲ ಜೀವರಾಶಿಗಳು ಸುಖವಾಗಿ ಬದುಕಲು ನಾವು ಉತ್ತಮ ಪರಿಸರ ನಿರ್ಮಾಣ ಮಾಡೋಣ. ಪ್ರತಿಯೊಬ್ಬರ ಜೀವನದಲ್ಲಿ ಹೊಸತನ ಬರಲಿ ಎಂದು ಆಶಿಸುತ್ತಾ ಶ್ರೀಗಳು ಮತ್ತೊಮ್ಮೆ ಸಮಸ್ತ ಜನತೆಗೆ 2026ರ ಹೊಸ ವರ್ಷದ ಶುಭ ಹಾರೈಸಿದರು.


