ಅಮೆರಿಕಾದ ಕ್ಯಾಲಿಫೋರ್ನಿಯಾದಲ್ಲಿ ನಡೆದ ಭೀಕರ ಕಾರು ಅಪಘಾತದಲ್ಲಿ ತೆಲಂಗಾಣ ಮೂಲದ ಇಬ್ಬರು ಯುವತಿಯರಾದ ಮೇಘನಾ ರಾಣಿ ಮತ್ತು ಭಾವನಾ ಕಂಡಿಯಲಾ ಸಾವನ್ನಪ್ಪಿದ್ದಾರೆ. ಇವರು ಸ್ನಾತಕೋತ್ತರ ಪದವಿ ಮುಗಿಸಿ ಉದ್ಯೋಗ ಅರಸುತ್ತಿದ್ದ
ತೆಲಂಗಾಣ: ಅಮೆರಿಕಾದಲ್ಲಿ ಶಿಕ್ಷಣದ ನಂತರ ಉದ್ಯೋಗ ಅರಸುತ್ತಿದ್ದ ಇಬ್ಬರು ಹುಡುಗಿಯರು ಕಾರು ಅಪಘಾತದಲ್ಲಿ ಸಾವಿಗೀಡಾದ ಆಘಾತಕಾರಿ ಘಟನೆ ಅಮೆರಿಕಾದ ಕ್ಯಾಲಿಫೋರ್ನಿಯಾದಲ್ಲಿ ನಡೆದಿದೆ. ತಮ್ಮ ಸ್ನೇಹಿತರ ಜೊತೆ ಪ್ರವಾಸ ಹೋಗಿ ವಾಪಸ್ ಬರುತ್ತಿದ್ದ ವೇಳೆ ಕಾರು ಅಪಘಾತಕ್ಕೀಡಾಗಿ ಈ ದುರಂತ ಸಂಭವಿಸಿದೆ. ಮೃತರನ್ನು 24ರ ಹರೆಯದ ಪುಲ್ಲಖಂಡಮ್ ಮೇಘನಾ ರಾಣಿ, ಹಾಗೂ ಕಂಡಿಯಲಾ ಭಾವನಾ ಎಂದು ಗುರುತಿಸಲಾಗಿದೆ.
ಶನಿವಾರ ಸಂಜೆ ಈ ಅಪಘಾತ ಸಂಭವಿಸಿದ್ದು, ಅಲಬಾಮಾ ಬೆಟ್ಟಗಳ ಬಳಿಯ ಕಠಿಣ ಪ್ರದೇಶದಲ್ಲಿ ಹಾದು ಹೋಗುವಾಗ ಕಾರು ನಿಯಂತ್ರಣ ತಪ್ಪಿ, ರಸ್ತೆಯಿಂದ ಹೊರಗುರುಳಿ ಆಳವಾದ ಕಂದಕಕ್ಕೆ ಉರುಳಿದ ಪರಿಣಾಮ ಕಾರಿನಲ್ಲಿದ್ದ ಇಬ್ಬರು ಭಾರತೀಯ ಯುವತಿಯರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಕಾರಿನಲ್ಲಿದ್ದ ಇತರ ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
ಮೃತರಲ್ಲಿ 25 ವರ್ಷದ ಮೇಘನಾ ರಾಣಿ ಪುಲ್ಲಖಂಡಂ ಮೆಹಬೂಬಾಬಾದ್ ನಗರದ ಗಾರ್ಲಾ ಮಂಡಲದ ನಿವಾಸಿ. ಹಾಗೂ 24ರ ಹರೆಯದ ಕಡಿಯಾಲ ಭಾವನಾ ಮುಲ್ಕನೂರು ಗ್ರಾಮದ ನಿವಾಸಿ ಎಂದು ಗುರುತಿಸಲಾಗಿದೆ. ಎರಡೂ ಗ್ರಾಮಗಳು ತೆಲಂಗಾಣದ ಮಹಬೂಬಾಬಾದ್ ಜಿಲ್ಲೆಯಲ್ಲಿವೆ. ಈ ಇಬ್ಬರು ಯುವತಿಯರು ತಮ್ಮ ಸ್ನಾತಕೋತ್ತರ ಪದವಿ ಪಡೆಯಲು ಸುಮಾರು ಮೂರು ವರ್ಷಗಳ ಹಿಂದೆ ಅಮೆರಿಕಕ್ಕೆ ತೆರಳಿದ್ದು, ತಮ್ಮ ಪದವಿಯ ಅಂತಿಮ ಹಂತದಲ್ಲಿದ್ದು, ಉದ್ಯೋಗ ಅರಸುತ್ತಿದ್ದರು. ಸ್ಥಳೀಯ ಮಾಧ್ಯಮಗಳ ವರದಿಯ ಪ್ರಕಾರ ಈ ಇಬ್ಬರು ಪ್ರತಿಭಾನ್ವಿತ ವಿದ್ಯಾರ್ಥಿಗಳು ಎಂದು ವರದಿಯಾಗಿದೆ.
ಇದನ್ನೂ ಓದಿ: ಮದ್ಯದ ವಾಸನೆ: ವ್ಯಾಂಕೋವರ್‌ನಿಂದ ದೆಹಲಿಗೆ ವಿಮಾನ ಹಾರಿಸುವ ಮೊದಲು ಏರ್ ಇಂಡಿಯಾ ಪೈಲಟ್‌ನ ಬಂಧನ
ಮೃತ ಮೇಘನಾ ರಾಣಿ ಪುಲ್ಲಖಂಡ ಅವರ ತಂದೆ ನಾಗೇಶ್ವರ ರಾವ್ ತೆಲಂಗಾಣದಲ್ಲಿ ಮೀ-ಸೇವಾ ಕೇಂದ್ರವನ್ನು ನಡೆಸುತ್ತಿದ್ದು, ಭಾವನಾ ಅವರ ತಂದೆ ಮುಲ್ಕನೂರು ಗ್ರಾಮದ ಉಪ ಸರಪಂಚ್ ಆಗಿದ್ದಾರೆ. ಮಕ್ಕಳ ಹಠಾತ್ ಸಾವಿನಿಂದ ಆ ಕುಟುಂಬಗಳು ತೀವ್ರ ಆಘಾತಕ್ಕೀಡಾಗಿವೆ. ಮೃತರ ಪಾರ್ಥಿವ ಶರೀರವನ್ನು ಭಾರತಕ್ಕೆ ತರಲು ಇವರ ಕುಟುಂಬಕ್ಕೆ ತುರ್ತು ನೆರವಾಗುವಂತೆ ಕುಟುಂಬಗಳು ತೆಲಂಗಾಣ ಸರ್ಕಾರ ಮತ್ತು ವಿದೇಶಾಂಗ ಸಚಿವಾಲಯಕ್ಕೆ ಮನವಿ ಮಾಡಿಕೊಂಡಿವೆ. ಮೇಘನಾ ರಾಣಿ ಅವರ ಮೃತದೇಹವನ್ನು ಭಾರತಕ್ಕೆ ಮರಳಿ ತರಲು ಗೋಫಂಡ್‌ಮಿ ಮೂಲಕ ನಿಧಿಸಂಗ್ರಹಣೆ ಕಾರ್ಯಕ್ರಮವನ್ನು ಸಹ ಆರಂಭಿಸಲಾಗಿದೆ.
ಇದನ್ನೂ ಓದಿ: ಬಡವನಿರಬಹುದು ಆದರೆ ಭಿಕಾರಿ ಅಲ್ಲ: ಸ್ವಾಭಿಮಾನಿ ವೃದ್ಧನ ವೀಡಿಯೋ ಭಾರಿ ವೈರಲ್


