Asianet Suvarna News Asianet Suvarna News

ಯಾರ ಬಗ್ಗೆ ಸಂದೇಹವಿಲ್ಲ – ಹಿಂಸಿಸದೇ ನಮ್ಮ ಪಾಡಿಗೆ ಬಿಡಿ : ಲೋಯಾ ಪುತ್ರ

ಬಿಜೆಪಿ ಅಧ್ಯಕ್ಷ ಅಮಿತ್ ಶಾ ಖುಲಾಸೆಗೊಂಡಿರುವ ಶಂಕಿತ ಉಗ್ರ ಸೊಹ್ರಾಬುದ್ದೀನ್ ಶೇಖ್ ನಕಲಿ ಎನ್’ಕೌಂಟರ್ ಪ್ರಕರಣದ ವಿಚಾರಣೆ ನಡೆಸುತ್ತಿದ್ದ ಸಿಬಿಐ ವಿಶೇಷ ನ್ಯಾಯಾಧೀಶ ಬಿ.ಎಚ್. ಲೋಯಾ ಅವರ ಸಾವಿನಲ್ಲಿ ಯಾವುದೇ ಅನುಮಾನಗಳಿಲ್ಲ. ಹೀಗಾಗಿ ನಮ್ಮ ಕುಟುಂಬವನ್ನು ನಮ್ಮ ಪಾಡಿಗೆ ಬಿಟ್ಟುಬಿಡಿ ಎಂದು ಲೋಯಾ ಅವರ ಪುತ್ರ ಅನುಜ್ ಲೋಯಾ ಹೇಳಿದ್ದಾರೆ.

No Doubts on Fathers death says Loyas son

ಮುಂಬೈ: ಬಿಜೆಪಿ ಅಧ್ಯಕ್ಷ ಅಮಿತ್ ಶಾ ಖುಲಾಸೆಗೊಂಡಿರುವ ಶಂಕಿತ ಉಗ್ರ ಸೊಹ್ರಾಬುದ್ದೀನ್ ಶೇಖ್ ನಕಲಿ ಎನ್’ಕೌಂಟರ್ ಪ್ರಕರಣದ ವಿಚಾರಣೆ ನಡೆಸುತ್ತಿದ್ದ ಸಿಬಿಐ ವಿಶೇಷ ನ್ಯಾಯಾಧೀಶ ಬಿ.ಎಚ್. ಲೋಯಾ ಅವರ ಸಾವಿನಲ್ಲಿ ಯಾವುದೇ ಅನುಮಾನಗಳಿಲ್ಲ. ಹೀಗಾಗಿ ನಮ್ಮ ಕುಟುಂಬವನ್ನು ನಮ್ಮ ಪಾಡಿಗೆ ಬಿಟ್ಟುಬಿಡಿ ಎಂದು ಲೋಯಾ ಅವರ ಪುತ್ರ ಅನುಜ್ ಲೋಯಾ ಹೇಳಿದ್ದಾರೆ.

ಅನುಜ್ ಅವರ ಈ ಹೇಳಿಕೆಯಿಂದಾಗಿ ಲೋಯಾ ಅವರ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸುತ್ತಿದ್ದ ಕಾಂಗ್ರೆಸ್ ಪಕ್ಷ, ಕೆಲವು ಪ್ರತಿಪಕ್ಷಗಳು, ಸಂಸ್ಥೆಗಳು ಹಾಗೂ ಗುಂಪುಗಳಿಗೆ ತೀವ್ರ ಹಿನ್ನಡೆಯಾಗಿದೆ. ಅಲ್ಲದೆ ಲೋಯಾ ಸಾವಿನ ಪ್ರಕರಣದ ವಿಚಾರಣೆ ಈಗ ಸುಪ್ರೀಂ ಕೋರ್ಟ್‌ನಲ್ಲಿ ನಡೆಯುತ್ತಿದ್ದು, ಈ ಕುರಿತು ರಚಿಸಲಾದ ನ್ಯಾಯಪೀಠಕ್ಕೆ ಸಂಬಂಧಿಸಿದಂತೆಯೇ ಮುಖ್ಯ ನ್ಯಾಯಾಧೀಶರು ಹಾಗೂ ಇತರ ಹಿರಿಯ ನಾಲ್ವರು ನ್ಯಾಯಾಧೀಶರ ಮಧ್ಯೆ ಸಂಘರ್ಷ ಏರ್ಪಟ್ಟಿತ್ತುಈ ಹಿನ್ನೆಲೆಯಲ್ಲಿ ಲೋಯಾ ಅವರ ಪುತ್ರನ ಈ ಹೇಳಿಕೆ ಮಹತ್ವ ಪಡೆದಿದೆ.

ನಮ್ಮನ್ನು ಬಿಟ್ಟುಬಿಡಿ- ಅತ್ತ ಅನುಜ್: ಭಾನುವಾರ ಸಂಜೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ 21ರ ಹರೆಯದ ಅನುಜ್ ಲೋಯಾ, ‘ಈ ಹಿಂದೆ ನಮಗೆ ನಮ್ಮ ತಂದೆಯವರ ಸಾವಿನ ಬಗ್ಗೆ ಅನುಮಾನಗಳು ಇದ್ದವು. ಆದರೆ ಈಗ ಯಾವುದೇ ಅನುಮಾನಗಳು ಇಲ್ಲ’ ಎಂದು ಸ್ಪಷ್ಟಪಡಿಸಿದರು.

‘ನಾನು ಕೆಲವು ದಿನಗಳ ಹಿಂದೆ ಭಾವುಕನಾಗಿದ್ದೆ. ಹೀಗಾಗಿ ಸಂದೇಹ ವ್ಯಕ್ತಪಡಿಸಿದ್ದೆ. ನನ್ನ ಅಜ್ಜ ಹಾಗೂ ನನ್ನ ಚಿಕ್ಕಮ್ಮ ಕೂಡ ಸಂದೇಹ ವ್ಯಕ್ತಪಡಿಸಿದ್ದರು. ಆದರೆ 3 ವರ್ಷಗಳ ಹಿಂದೆ ಸಂಭವಿಸಿದ ನನ್ನ ತಂದೆಯ ಸಾವಿನ ಬಗ್ಗೆ ನನಗಾಗಲೀ ಅಥವಾ ಚಿಕ್ಕಮ್ಮ-ಅಜ್ಜನಿಗಾಗಲಿ ಯಾವುದೇ ಅನುಮಾನಗಳು ಇಲ್ಲ’ ಎಂದು ಅವರು ಸ್ಪಷ್ಟಪಡಿಸಿದರು.

 ನಡುವೆ ಸುದ್ದಿಗೋಷ್ಠಿಯಲ್ಲೇ ಕಣ್ಣೀರು ಹಾಕಿದ ಅನುಜ್, ‘ಕೆಲವು ಸ್ವಯಂಸೇವಾ ಸಂಸ್ಥೆಗಳು ಹಾಗೂ ರಾಜಕಾರಣಿಗಳಿಂದ ನಮ್ಮ ಮೇಲೆ ಒತ್ತಡ ಬರುತ್ತಿದೆ. ಅವರು ಯಾರು ಎಂದು ನಾವು ಹೇಳಬಯಸುವುದಿಲ್ಲ. ಆದರೆ ನಮ್ಮ ತಂದೆಯವರ ಸಾವಿನ ಬಗ್ಗೆ ಪದೇ ಪದೇ ಪ್ರಸ್ತಾಪಿಸಿ ಕುಟುಂಬವನ್ನು ಗೋಳು ಹೊಯ್ದುಕೊಳ್ಳಬೇಡಿ. ನಮ್ಮ ಕುಟುಂಬವನ್ನು ನಮ್ಮ ಪಾಡಿಗೆ ಇರಲು ಬಿಟ್ಟುಬಿಡಿ’ ಎಂದು ಗೋಗರೆದರು. ಅನುಜ್ ಪುಣೆ ಯಲ್ಲಿ ದ್ವಿತೀಯ ವರ್ಷದ ಕಾನೂನು ಪದವಿ ಓದುತ್ತಿದ್ದಾರೆ. 

ಏನಿದು ಪ್ರಕರಣ?: ಲೋಯಾ ಅವರು 2014ರ ಡಿಸೆಂಬರ್ 1ರಂದು ತಮ್ಮ ಸಹೋದ್ಯೋಗಿಯ ಮಗಳ ಮದುವೆಗೆ ಹೋದಾಗ ಹೃದಯಾಘಾತದಿಂದ ಸಾವನ್ನಪ್ಪಿದ್ದರು ಎಂದು ಹೇಳಲಾಗಿತ್ತು. ಆದರೆ ಈ ಸಾವು ಸಹಜವಾಗಿಲ್ಲ ಎಂದು ಅವರ ಕುಟುಂಬದ ಆರೋಪವನ್ನು ಉಲ್ಲೇಖಿಸಿ ಇತ್ತೀಚೆಗೆ ಕೆಲವು ಮಾಧ್ಯಮಗಳು ವರದಿ ಮಾಡಿದ ನಂತರ ಪ್ರಕರಣಕ್ಕೆ ಮರುಜೀವ ಬಂದಿತ್ತು. ಅಲ್ಲದೆ, ಲೋಯಾ ಅವರಿಗೆ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಪರ ತೀರ್ಪು ನೀಡುವಂತೆ 100 ಕೋಟಿ ರು. ಲಂಚದ ಆಮಿಷ ಕೂಡ ಬಂದಿತ್ತು ಎಂದು ಅವರ ಕುಟುಂಬ ಆರೋಪಿಸಿತ್ತು.

ಲೋಯಾ ಅವರ ಸಾವಿನ 2 ವಾರ ಬಳಿಕ, ಅವರ ಸ್ಥಾನಕ್ಕೆ ನೇಮಕಗೊಂಡಿದ್ದ ಹೊಸ ಸಿಬಿಐ ವಿಶೇಷ ನ್ಯಾಯಾಧೀಶರು ಅಮಿತ್ ಶಾ ಅವರನ್ನು ಪ್ರಕರಣದಿಂದ ಖುಲಾಸೆಗೊಳಿಸಿದ್ದು ಅನೇಕರ ಹುಬ್ಬೇರುವಂತೆ ಮಾಡಿತ್ತು.

Follow Us:
Download App:
  • android
  • ios