ಮಾಜಿ ಸಿಎಂ ಏನು ಹೇಳಿದ್ದಾರೋ ನಂಗೆ ಗೊತ್ತಿಲ್ಲ. ಆದರೆ ಕೆಪಿಸಿಸಿ ಅಧ್ಯಕ್ಷನಾಗಿ ನಾನು ಹೇಳ್ತೇನೆ, ಈ ಸರ್ಕಾರ ರಚನೆ ಆಗುವ ವೇಳೆಯೇ ಒಪ್ಪಂದ ಆಗಿದೆ. ಸರ್ಕಾರ 5 ಪೂರೈಸುವುದರಲ್ಲಿ ಯಾವುದೇ ರೀತಿಯಾದ ಅನುಮಾನವೇ ಇಲ್ಲ ಎಂದು ಜಿ. ಪರಮೇಶ್ವರ್ ಹೇಳಿದ್ದಾರೆ. 

ಚಿತ್ರದುರ್ಗ :  ಮಾಜಿ ಸಿಎಂ ಏನು ಹೇಳಿದ್ದಾರೋ ನಂಗೆ ಗೊತ್ತಿಲ್ಲ. ಆದರೆ ಕೆಪಿಸಿಸಿ ಅಧ್ಯಕ್ಷನಾಗಿ ನಾನು ಹೇಳ್ತೇನೆ, ಈ ಸರ್ಕಾರ ಐದು ವರ್ಷ ಪೂರೈಸುತ್ತದೆ. ಮೈತ್ರಿ ಸರ್ಕಾರ ರಚನೆ ವೇಳೆಯೇ ಒಪ್ಪಂದ ಆಗಿದೆ.

ಮುಂದಿನ ಲೋಕಸಭಾ ಚುನಾವಣೆವರೆಗೆ ಮಾತ್ರ ಸಮ್ಮಿಶ್ರ ಸರ್ಕಾರ ಇರುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದಾರೆನ್ನಲಾಗಿರುವ ವಿಡಿಯೋ ವೈರಲ್‌ ಆಗಿರುವ ಬಗ್ಗೆ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌ ಹೀಗೆ ಪ್ರತಿಕ್ರಿಯಿಸಿದ್ದಾರೆ.

ಕೊಪ್ಪಳಕ್ಕೆ ಹೋಗುವ ಮಾರ್ಗ ಮಧ್ಯೆ ಚಿತ್ರದುರ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜಕಾರಣದಲ್ಲಿ ಯಾವ ಸಂದರ್ಭದಲ್ಲಿ ಏನು ಆಗುತ್ತದೆ ಅಂತ ಹೇಳೋಕೆ ಆಗೋಲ್ಲ. ಆದರೆ, ಒಪ್ಪಂದದಂತೆ ನಾವು ಐದು ವರ್ಷ ಸರ್ಕಾರ ನಡೆಸುತ್ತೇವೆ. ಇದರ ಬಗ್ಗೆ ಯಾವುದೇ ಸಂದೇಹ ಬೇಡ. ಪದೇ ಪದೇ ನೀವು ಅದೇ ಪ್ರಶ್ನೆ ಕೇಳಿದರೆ ನಾನು ಇದೇ ಉತ್ತರ ಹೇಳೋದು ಎಂದು ಮಾಧ್ಯಮದವರ ಮೇಲೆ ಪರಮೇಶ್ವರ್‌ ಗರಂ ಆದರು. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಯಾವ ಕಾರಣಕ್ಕೆ ಹಾಗೆ ಮಾತನಾಡಿದ್ದಾರೋ ನನಗಂತೂ ಗೊತ್ತಿಲ್ಲ. ಏಕೆ ಹೇಳಿದರು ಅಂತ ಅವರಿಂದಲೇ ಉತ್ತರ ಪಡೆಯಿರಿ. ನಮ್ಮ ಬಳಿ ಏಕೆ ಪ್ರಸ್ತಾಪಿಸುತ್ತೀರಿ ಎಂದು ಪರಮೇಶ್ವರ ಸಿಡಿಮಿಡಿಗೊಂಡರು.

ಧರ್ಮಸ್ಥಳದ ಶಾಂತಿವನದಲ್ಲಿರುವ ಪ್ರಕೃತಿ ಚಿಕಿತ್ಸೆ ಆಸ್ಪತ್ರೆಯಲ್ಲಿ ದಾಖಲಾಗಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ‘ಲೋಕಸಭಾ ಚುನಾವಣೆವರೆಗೆ ಮೈತ್ರಿ ಸರ್ಕಾರ ಇರುತ್ತದೆ. ಆ ಬಳಿಕ ಏನೆಲ್ಲ ಬೆಳವಣಿಗೆ ನಡೆಯುತ್ತದೋ ನೋಡೋಣ..!’ ಎಂದು ಹೇಳಿದ್ದಾರೆನ್ನುವ ವಿಡಿಯೋ ಈಗ ವೈರಲ್‌ ಆಗಿದೆ.