ಇದು ಕಣ್ಣೊರೆಸುವ ತಂತ್ರ:ರವಿವರ್ಮಕುಮಾರ್ ಮರುಪರಿಶೀಲನೆ ಅರ್ಜಿ ಸಲ್ಲಿಸದಿದ್ದರೆ ಅಪಾಯ
ಬೆಂಗಳೂರು: ಕಾವೇರಿ ನದಿ ನೀರು ಹಂಚಿಕೆ ವಿಚಾರ ದಲ್ಲಿ ಸುಪ್ರೀಂಕೋರ್ಟ್ ನೀಡಿರುವ ತೀರ್ಪು ಕಣ್ಣೊರೆಸುವ ತಂತ್ರ. ಇದರಿಂದ ರಾಜ್ಯಕ್ಕೆ ಅನುಕೂಲವಾಗಿದೆ ಎಂಬುದು ಸರಿಯಲ್ಲ. ಹೆಚ್ಚುವರಿ ನೀರಿಗಾಗಿ ಮರು ಪರಿಶೀಲನಾ ಅರ್ಜಿ ಸಲ್ಲಿಸದಿದ್ದರೆ ಬರಗಾಲದಲ್ಲಿ ಸಂಕಷ್ಟದ ದಿನಗಳು ಎದುರಾಗಲಿವೆ ಎಂದು ಮಾಜಿ ಅಡ್ವೋಕೇಟ್ ಜನರಲ್ ಪ್ರೊ. ರವಿವರ್ಮ ಕುಮಾರ್ ಎಚ್ಚರಿಸಿದ್ದಾರೆ.
ಕರ್ನಾಟಕ ಗಾಂಧಿ ಸ್ಮಾರಕ ನಿಧಿ, ಬೆಂಗಳೂರು ವಕೀಲರ ಸಂಘ ಹಾಗೂ ಸಾಮಾಜಿಕ ನ್ಯಾಯಕ್ಕಾಗಿ ವಕೀಲರ ವೇದಿಕೆ, ನಗರದ ಗಾಂಧಿ ಭವನದಲ್ಲಿ ಶನಿವಾರ ಹಮ್ಮಿಕೊಂಡಿದ್ದ ‘ಕಾವೇರಿ ತೀರ್ಪು ಕುರಿತ ವಿಚಾರ ಸಂಕಿರಣ’ದಲ್ಲಿ ಅವರು ಮಾತನಾಡಿದರು.
ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ಕರ್ನಾಟಕಕ್ಕೆ 14.5 ಟಿಎಂಸಿ ನೀರು ಹೆಚ್ಚುವರಿಯಾಗಿ ಸಿಕ್ಕಿದೆ ಎಂದು ರಾಜ್ಯ ಹೆಮ್ಮೆ ಪಡುತ್ತಿದೆ. ಆದರೆ, ಅದೇ ತೀರ್ಪಿನಲ್ಲಿ ಕಾವೇರಿ ನಿರ್ವಹಣಾ ಮಂಡಳಿ ರಚನೆಗೆ ಸೂಚಿಸಿದೆ. ಇದರಿಂದ ಕಾವೇರಿ ನದಿಯ ಉಪನದಿಗಳ ಅಣೆಕಟ್ಟುಗಳನ್ನು ಮಂಡಳಿ ನಿರ್ವಹಿಸಲಿದ್ದು, ನಮ್ಮ ರಾಜ್ಯದ ನೀರು ಪಡೆಯಲು ಅರ್ಜಿ ಸಲ್ಲಿಸಿ ಕಾಯಬೇಕಾಗುತ್ತದೆ. ಆದ್ದರಿಂದ ಹೆಚ್ಚುವರಿ ನೀರು ಪಡೆಯಲು ಕಾನೂನು ಹೋರಾಟ ಅಗತ್ಯ ಎಂದರು.
ಕಾವೇರಿ ತೀರ್ಪಿಗೆ ಸಂಭ್ರಮಿಸಬೇಕಾದ ತಮಿಳುನಾಡು ಸರ್ಕಾರ ಸರ್ವಪಕ್ಷ ಸಭೆ ಕರೆದು ಪುನರ್ ಪರಿಶೀಲನಾ ಅರ್ಜಿ ಸಲ್ಲಿಸಲು ಮುಂದಾಗಿದೆ. ತೀರ್ಪಿನ ಕುರಿತು ವಿಶ್ಲೇಷಣೆ ಮಾಡಬೇಕಾದ ಕರ್ನಾಟಕ ಸಂಭ್ರಮಿಸುತ್ತಿದೆ. ಅಲ್ಲದೆ, ತೀರ್ಪಿನ ಸಂಬಂಧ ವಾದ ಮಂಡಿಸಿದ ವಕೀಲರ ತಂಡದೊಂದಿಗೆ ಇಲ್ಲಿಯವರೆಗೂ ಒಂದು ಸಭೆಯನ್ನೂ ನಡೆಸಿಲ್ಲ. ಈ ಬೆಳವಣಿಗೆಯಿಂದ ಕಾವೇರಿ ತೀರ್ಪು ಅನಾಥವಾಗಿ ಬಿದ್ದಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ತಜ್ಞರ ಮಾಹಿತಿ ಪಡೆದಿಲ್ಲ: ಯಾವುದೇ ವಿಚಾರದಲ್ಲಿ ಸುಪ್ರೀಂಕೋರ್ಟ್ ತೀರ್ಪು ಅಂತಿಮ. ಅಲ್ಲದೆ, ದೇಶದ ಇತಿಹಾಸದಲ್ಲಿ ನದಿ ನೀರು ಹಂಚಿಕೆ ಕುರಿತು ಹೊರಬಂದ ಮೊದಲ ತೀರ್ಪು ಇದು. ಆದರೆ ನೀರಾವರಿ ಹಾಗೂ ಪರಿಸರ ತಜ್ಞರ ಸಲಹೆಯನ್ನು ಕೋರ್ಟ್ ಪಡೆದಿಲ್ಲ. ಜೀವಂತವಾಗಿ ಹರಿಯುವ ನದಿ ನೀರಿನ ಹಂಚಿಕೆಯ ಕುರಿತು ತೀರ್ಪು ಪ್ರಕಟಿಸುತ್ತಿದ್ದೇವೆ ಎಂಬದನ್ನು ಗಮನಿಸದೆ ಕೇವಲ ಕಾನೂನಿನ ಕೋನದಲ್ಲಿ ತೀರ್ಪು ಪ್ರಕಟಿಸಿದೆ. ರಾಜ್ಯ ದ ರೈತರ ಸಮಸ್ಯೆಗಳನ್ನು ಪರಿಗಣಿಸಿಲ್ಲ. 14 ಟಿಎಂಸಿ ಹೆಚ್ಚುವರಿ ನೀರು ಹರಿಸುವ ಅಂಶ ಬಿಟ್ಟು ಕಾವೇರಿ ನ್ಯಾಯಾಧಿಕರಣ ನೀಡಿರುವ ತೀರ್ಪಿನ ಬೇರೆ ಯಾವುದೇ ಅಂಶ ಬದಲಾಯಿಸಿಲ್ಲ ಎಂದರು.
ತೀರ್ಪು ಮಹದಾಯಿಗೂ ಅನ್ವಯ: ಹಿರಿಯ ವಕೀಲ ಹಾಗೂ ಮಾಜಿ ಅಡ್ವೋಕೇಟ್ ಜನರಲ್ ಉದಯ್ ಹೊಳ್ಳ ಮಾತನಾಡಿ, ಕಾವೇರಿ ನದಿ ನೀರಿನಲ್ಲಿ ಎರಡೂ ರಾಜ್ಯಗಳಿಗೆ ಸಮವಾಗಿ ಹಂಚಿಕೆ ಮಾಡಬೇಕಾಗಿತ್ತು. ಆದರೆ, ತಮಿಳುನಾಡಿಗೆ ಹೆಚ್ಚು, ಕರ್ನಾಟಕಕ್ಕೆ ಕಡಿಮೆ ನೀರು ಹಂಚಿಕೆ ಮಾಡಲಾಗಿದೆ. ಕರ್ನಾಟಕಕ್ಕೆ ಕನಿಷ್ಠ 40 ಟಿಎಂಸಿ ಹೆಚ್ಚುವರಿ ನೀರು ನೀಡಬೇಕಾಗಿತ್ತು. ಕೇವಲ 14.5 ಟಿಎಂಸಿ ನೀಡಿರುವುದು ಅನ್ಯಾಯವಾಗಿದೆ. ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ಕರ್ನಾಟಕಕ್ಕೆ ಮೆತ್ತಗಿರುವವರನ್ನು ಹೆಚ್ಚಿಗೆ ಹೊಡೆಯಿರಿ ಎಂಬ ಗಾದೆಯಂತಾಗಿದೆ. ಆದರೆ, ಬೆಂಗಳೂರಿನ ಜನರ ಕುಡಿಯುವ ನೀರಿನ ಸಮಸ್ಯೆ ಪರಿಗಣಿಸಿ 14 ಟಿಎಂಸಿ ನೀರು ಹಂಚಿಕೆ ಮಾಡಿರುವುದು ಸ್ವಾಗತಾರ್ಹ. ಈ ತೀರ್ಪು ಮಹದಾಯಿ ಪ್ರಕರಣದಲ್ಲಿ ರಾಜ್ಯಕ್ಕೆ ವರವಾಗಿ ಪರಿಣಮಿಸಲಿದೆ ಎಂದರು.
ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ಎ.ಪಿ. ರಂಗನಾಥ್ ಮಾತನಾಡಿ, ಕಾವೇರಿ ತೀರ್ಪು ರಾಜ್ಯಕ್ಕೆ ಸಣ್ಣ ಪ್ರಮಾಣದ ಗೆಲುವಾದರೆ, ದೊಡ್ಡ ಪ್ರಮಾಣದ ಸೋಲಾಗಿದೆ. ಆದ್ದರಿಂದ ಸರ್ಕಾರ ರಾಜ್ಯದ ಎಲ್ಲಾ ರಾಜಕೀಯ ಪಕ್ಷಗಳ ಮುಖಂಡರ ಸರ್ವಪಕ್ಷ ಸಭೆ ಕರೆದು ಸುಪ್ರೀಂಕೋರ್ಟ್‌ಗೆ ಪುನರ್ ಪರಿಶೀಲನಾ ಅರ್ಜಿ ಸಲ್ಲಿಸಬೇಕು. ಈ ವಿಚಾರದಲ್ಲಿ ಸರ್ಕಾರ ಕೈಗೊಳ್ಳುವ ನಿರ್ಧಾರಕ್ಕೆ ವಕೀಲರ ಸಂಘ ಅಗತ್ಯ ನೆರವು ನೀಡಲಿದೆ ಎಂದರು.
ಗೋಷ್ಠಿಯಲ್ಲಿ ಗಾಂಧಿ ಸ್ಮಾರಕ ನಿಧಿಯ ಅಧ್ಯಕ್ಷ ಡಾ. ವುಡೇ ಪಿ.ಕೃಷ್ಣ, ಸುಪ್ರೀಂಕೋರ್ಟ್‌ನಲ್ಲಿ ರಾಜ್ಯದ ಪರ ವಾದ ಮಂಡಿಸಿದ ವಕೀಲರ ತಂಡದ ಗಂಗಾಧರ್ ಉಪಸ್ಥಿತರಿದ್ದರು.
