ಪುಣೆ[ಆ.28]: ರಿಸರ್ವ್ ಬ್ಯಾಂಕ್‌ನಿಂದ ಕೇಂದ್ರ ಸರ್ಕಾರ 1.76 ಲಕ್ಷ ಕೋಟಿ ರು. ಪಡೆದುಕೊಂಡಿದ್ದನ್ನು ಕಳ್ಳತನಕ್ಕೆ ಹೋಲಿಸಿದ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಹೇಳಿಕೆಗೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಕಿಡಿ ಕಿಡಿಯಾಗಿದ್ದಾರೆ. ಇಂಥ ಆರೋಪಗಳನ್ನು ಮಾಡುವ ಮುನ್ನ ರಾಹುಲ್‌ ಗಾಂದಿ, ತಮ್ಮದೇ ಪಕ್ಷದ ಮಾಜಿ ವಿತ್ತ ಸಚಿವರೊಂದಿಗೆ ಸಮಾಲೋಚನೆ ನಡೆಸಬೇಕಿತ್ತು ಎಂದು ಸಲಹೆ ನೀಡಿದ್ದಾರೆ.

RBIನಿಂದ ಸರ್ಕಾರ ದುಡ್ಡು ಎತ್ತಿದ್ದು ಕಳ್ಳತನಕ್ಕೆ ಸಮ: ರಾಹುಲ್‌ ಕಿಡಿ

ಜೊತೆಗೆ ರಫೇಲ್‌ ವಿಚಾರದಲ್ಲೂ ಕಳ್ಳತನ ಆರೋಪ ಹೊರಿಸಿ, ಚುನಾವಣೆಯಲ್ಲಿ ಸೋತು ಸುಣ್ಣವಾಗಿದ್ದರು. ಅವರು ಇಂಥ ಆರೋಪ ಹೊರಿಸುವಲ್ಲಿ ನಿಸ್ಸೀಮರು ಅದನ್ನು ಗಂಭೀರವಾಗಿ ಪರಿಗಣಿಸವ ಅವಶ್ಯಕತೆ ಇಲ್ಲ ಎಂದು ತಿರುಗೇಟು ನೀಡಿದ್ದಾರೆ. ಅಲ್ಲದೇ ಆರ್‌ಬಿಐನ ವಿಶ್ವಾಸಾರ್ಹತೆ ಪ್ರಶ್ನೆ ಮಾಡುವವರ ವಿರುದ್ದವೂ ವಾಗ್ದಾಳಿ ನಡೆಸಿದ ಅವರು, ಆರ್‌ಬಿಐ ನೇಮಕ ಮಾಡಿದ ಬಿಮಲ್‌ ಜಲನ್‌ ಸಮಿತಿಯ ಶಿಫಾರಸ್ಸಿನಂತೆ ಈ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ.

ಆರ್‌ಬಿಐನ 1.76 ಲಕ್ಷ ಕೋಟಿ ಕೇಂದ್ರಕ್ಕೆ!

ಇದೇ ವೇಳೆ ಆರ್‌ಬಿಐನ ಮೀಸಲು ಹಣವನ್ನು ಕೇಂದ್ರಕ್ಕೆ ನೀಡಿದಲ್ಲಿ ಆರ್‌ಬಿಐನ ರೇಟಿಂಗ್‌ ಕುಸಿತವಾಗುವ ಬಗ್ಗೆ 2018ರಲ್ಲೇ ಅಂದಿನ ಆರ್‌ಬಿಐ ಗವರ್ನರ್‌ ರಘುರಾಂ ಎಚ್ಚರಿಸಿದ್ದ ಕುರಿತ ಪ್ರಶ್ನೆಗೆ ಉತ್ತರಿಸಿದ ನಿರ್ಮಲಾ, ಸ್ವತಃ ಆರ್‌ಬಿಐ ಬಿಮಲ್‌ ಜಲನ್‌ ಸಮಿತಿ ರಚಿಸಿತ್ತು. ಆ ಸಮಿತಿ ಹಲವು ಆರ್ಥಿಕ ತಜ್ಞರನ್ನು ಒಳಗೊಂಡಿದ್ದು, ಹಲವು ಸುತ್ತಿನ ಸಮಾಲೋಚನೆ ಬಳಿಕ ಇಂಥ ಶಿಫಾರಸು ಮಾಡಿತ್ತು. ಹೀಗಾಗಿ ಆರ್‌ಬಿಐನ ವಿಶ್ವಾಸಾರ್ಹತೆ ಕುರಿತ ಯಾವುದೇ ಪ್ರಶ್ನೆಗಳು ತೀರಾ ವಿಲಕ್ಷಣ ಎನ್ನಿಸಿಕೊಳ್ಳುತ್ತದೆ ಎಂದು ಹೇಳಿದ್ದಾರೆ.