ಮುಂಬೈ[ಆ.27]: ಆರ್‌ಬಿಐನಲ್ಲಿರುವ ಹೆಚ್ಚುವರಿ ಹಣವನ್ನು ಕೇಂದ್ರ ಸರ್ಕಾರಕ್ಕೆ ವರ್ಗಾಯಿಸುವ ಸಂಬಂಧ ಎದ್ದಿದ್ದ ಬಿಕ್ಕಟ್ಟು ಕೊನೆಗೂ, ಕೇಂದ್ರ ಸರ್ಕಾರದ ಪರವಾಗಿ ಮುಕ್ತಾಯಗೊಂಡಿದೆ. ತನ್ನ ಬಳಿ ಇರುವ ಹೆಚ್ಚುವರಿ 1.76 ಲಕ್ಷ ಕೋಟಿ ರು.ಗಳನ್ನು ಕೇಂದ್ರ ಸರ್ಕಾರಕ್ಕೆ ನೀಡಲು ಆರ್‌ಬಿಐ ಸಮ್ಮತಿಸಿದೆ.

ಆರ್‌ಬಿಐ ಮತ್ತು ಕೇಂದ್ರ ಸರ್ಕಾರದ ನಡುವಿನ ವೈಷಮ್ಯ ಸ್ಥಿತಿ ಸರಿಪಡಿಸುವ ನಿಟ್ಟಿನಲ್ಲಿ ರಚನೆಯಾಗಿದ್ದ ಆರ್‌ಬಿಐನ ನಿವೃತ್ತ ಗವರ್ನರ್‌ ಬಿಮಲ್‌ ಜಲನ್‌ ನೇತೃತ್ವದ ಉನ್ನತ ಹಂತದ ಸಮಿತಿಯ ವರದಿ ಶಿಫಾರಸನ್ನು ಆರ್‌ಬಿಐ ಒಪ್ಪಿಕೊಂಡಿದೆ. ಈ ಪ್ರಕಾರ 2018-19 ಸಾಲಿನ 1.23 ಲಕ್ಷ ಕೋಟಿ ಹಾಗೂ ಆರ್ಥಿಕ ಬಂಡವಾಳದ ಪರಿಷ್ಕೃತ ಚೌಕಟ್ಟು ಪ್ರಕಾರ ಉಳಿಕೆಯಾದ 52,637 ಕೋಟಿ ರು. ಅನ್ನು ಆರ್‌ಬಿಐ ಮೋದಿ ಸರ್ಕಾರ ದಯಪಾಲಿಸಲಿದೆ.

2018ರ ಅವಧಿಯಲ್ಲಿ ಆರ್‌ಬಿಐ ಬಳಿಯಿರುವ ಹಣವನ್ನು ಕೇಂದ್ರ ಸರ್ಕಾರಕ್ಕೆ ರವಾನಿಸಬೇಕೆಂಬ ವಿಚಾರ ಸೇರಿದಂತೆ ಆಗಿನ ಆರ್‌ಬಿಐ ಗವರ್ನರ್‌ ಊರ್ಜಿತ್‌ ಪಟೇಲ್‌ ಹಾಗೂ ಕೇಂದ್ರ ಸರ್ಕಾರದ ನಡುವಿನ ಹಲವು ಬಿಕ್ಕಟ್ಟು ಎದುರಾಗಿದ್ದವು. ಇದಾಗಿ ಎರಡು ತಿಂಗಳ ಬಳಿಕ ತನ್ನ ಬಳಿಯಿರುವ ಹಣವನ್ನು ಕೇಂದ್ರ ಸರ್ಕಾರಕ್ಕೆ ರವಾನಿಸಬೇಕೆ ಸೇರಿದಂತೆ ಇನ್ನಿತರ ವಿಚಾರಗಳ ಕುರಿತು ಆರ್‌ಬಿಐನ ಮಾಜಿ ಗವರ್ನರ್‌ ಬಿಮಲ್‌ ಜಲನ್‌ ನೇತೃತ್ವದಲ್ಲಿ 6 ಮಂದಿ ಸದಸ್ಯರನ್ನೊಳಗೊಂಡ ತಜ್ಞರ ಸಮಿತಿಯೊಂದನ್ನು ಆರ್‌ಬಿಐ ರಚನೆ ಮಾಡಿತ್ತು.