ಮಸ್ಕತ್‌ ಒಮಾನ್‌ನಲ್ಲಿ ಆಯೋಜಿಸಿದ್ದ ‘ಮಿಸ್‌ ಎಲಿಗೆಂಟ್‌ ಏಷ್ಯಾ ಫೆಸಿಫಿಕ್‌’ 2018-19 ಸೌಂದರ್ಯ ಸ್ಪರ್ಧೆಯಲ್ಲಿ ನಿಬೇದಿತಾ ಬಿಸ್ವಾಲ್‌ ವಿಜೇತರಾಗಿದ್ದಾರೆ.

ಬೆಂಗಳೂರು : ಜಿಯವುಲ್ಲಾ ಝೆವೆಂಟ್ಸ್‌ ಮತ್ತು ಗಲ್ಫ್ ಇಂಟರ್‌ನ್ಯಾಷನಲ್‌ ಯೂನಿಯನ್‌ ಎಲ್‌ಎಲ್‌ಸಿಯ ಸಹಯೋಗದಲ್ಲಿ ಕಳೆದ ಡಿಸೆಂಬರ್‌ನಲ್ಲಿ ಮಸ್ಕತ್‌ ಒಮಾನ್‌ನಲ್ಲಿ ಆಯೋಜಿಸಿದ್ದ ‘ಮಿಸ್‌ ಎಲಿಗೆಂಟ್‌ ಏಷ್ಯಾ ಫೆಸಿಫಿಕ್‌’ 2018-19 ಸೌಂದರ್ಯ ಸ್ಪರ್ಧೆಯಲ್ಲಿ ಒಡಿಶಾದ ನಿಬೇದಿತಾ ಬಿಸ್ವಾಲ್‌ ವಿಜೇತರಾಗಿದ್ದಾರೆ.

ಬುಧವಾರ ನಗರದ ಖಾಸಗಿ ಹೋಟೆಲ್‌ವೊಂದರಲ್ಲಿ ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಿಸ್‌ ಎಲಿಗೆಂಟ್‌ ನಿಬೇದಿತಾ ಬಿಸ್ವಾಲ್‌, 2018ರ ಡಿ.14ರಿಂದ ನಾಲ್ಕು ದಿನಗಳ ಕಾಲ ನಡೆದ ಸೌಂದರ್ಯ ಸ್ಪರ್ಧೆಯಲ್ಲಿ ಭಾರತ, ಅರಬ್‌ ದೇಶಗಳು, ಶ್ರೀಲಂಕಾ, ಬಾಂಗ್ಲಾದೇಶ ಮತ್ತು ಏಷ್ಯಾದ ಹಲವಾರು ದೇಶಗಳಿಂದ 16 ಜನ ಯುವತಿಯರು ಸ್ವರ್ಧೆಯಲ್ಲಿ ಭಾಗವಹಿಸಿದ್ದರು. ಅಂತಿಮ ಹಂತದಲ್ಲಿ ಗೆಲುವು ಸಾಧಿಸಿದೆ ಎಂದು ತಿಳಿಸಿದರು.

ಕಳೆದ ಹತ್ತು ವರ್ಷಗಳಿಂದ ಬೆಂಗಳೂರಿನಲ್ಲಿ ವಾಸಿಸುತ್ತಿದ್ದೇನೆ. ಐಟಿ ಕಂಪನಿಯೊಂದರ ಎಚ್‌ಆರ್‌ ಎಕ್ಸಿಕ್ಯೂಟಿವ್‌ ಆಗಿ ಕಾರ್ಯನಿರ್ವಹಿಸುತ್ತಿದ್ದು, ಮಾಡೆಲಿಂಗ್‌ ಮತ್ತು ನಟನೆಯಲ್ಲಿ ಆಸಕ್ತಿ ಹೊಂದಿದ್ದೇನೆ. ನನಗೆ ಸಮಾಜ ಸೇವೆ ಮಾಡುವ ಕನಸಿದೆ. ನನ್ನ ಬಿಡುವಿನ ಸಮಯವನ್ನು ವೃದ್ಧಾಶ್ರಮ ಮತ್ತು ಅನಾಥಾಶ್ರಮದಲ್ಲಿ ಕಳೆಯುತ್ತೇನೆ. ಸದ್ಯದಲ್ಲೇ ನಾಲ್ಕು ಭಾಷೆಗಳಲ್ಲಿ ತೆರೆಗೆ ಬರಲಿರುವ ನಿರ್ದೇಶಕ ವೆಂಕಟೇಶ್‌ಕುಮಾರ್‌ ನಿರ್ದೇಶನದ ಬಿ-ಪಾಸಿಟಿವ್‌ ಚಲನಚಿತ್ರದಲ್ಲಿ ನಟಿಸುತ್ತಿದ್ದೇನೆ. ಈ ಚಲನಚಿತ್ರ ಜುಲೈ ತಿಂಗಳಿನಲ್ಲಿ ವಿಶ್ವದಾದ್ಯಂತ ಬಿಡುಗಡೆಯಾಗಲಿದೆ ಎಂದರು.