-ಎನ್‌.ಲಕ್ಷ್ಮಣ್‌, ಕನ್ನಡಪ್ರಭ

ಬೆಂಗಳೂರು[ಜು.10]: ಬೆಂಗಳೂರು ಹೊರವಲಯದ ದೊಡ್ಡಬಳ್ಳಾಪುರದ ಮಸೀದಿಯಲ್ಲಿ ಸಿಕ್ಕಿಬಿದ್ದ ಜಮಾತ್‌-ಉಲ್‌-ಮುಜಾಹಿದೀನ್‌-ಬಾಂಗ್ಲಾದೇಶ್‌ (ಜೆಎಂಬಿ) ಶಂಕಿತ ಉಗ್ರ ಹಬೀಬುರ್‌ ರೆಹಮಾನ್‌ (30) ಗ್ಯಾಂಗ್‌ ತಮಿಳುನಾಡಿನ ಕೃಷ್ಣಗಿರಿಬೆಟ್ಟದಲ್ಲಿ ಪ್ರಾಯೋಗಿಕವಾಗಿ ಮೂರು ಬಾರಿ ‘ರಾಕೆಟ್‌’ ಉಡಾಯಿಸಿತ್ತು ಎಂಬ ದೇಶವನ್ನೇ ಬೆಚ್ಚಿಬೀಳಿಸುವ ವಿಷಯ ಕೊಲ್ಕತ್ತಾ ರಾಷ್ಟ್ರೀಯ ತನಿಖಾ ದಳದ (ಎನ್‌ಐಎ) ತನಿಖೆ ವೇಳೆ ಬೆಳಕಿಗೆ ಬಂದಿದೆ.

ಬಿಹಾರದ ಬೋಧಗಯಾ ಮಂದಿರದ ಸ್ಫೋಟದ ‘ಮಾಸ್ಟರ್‌ ಮೈಂಡ್‌’ ಜೈದುಲ್‌ ಇಸ್ಲಾಮ್‌ ಅಲಿಯಾಸ್‌ ಮುನೀರ್‌ ಶೇಖ್‌ ಕಳೆದ ವರ್ಷ ರಾಮನಗರದಲ್ಲಿ ಬಂಧನಕ್ಕೆ ಒಳಗಾಗುವ ಮುನ್ನ ಶಂಕಿತ ಉಗ್ರರು ಈ ಪ್ರಾಯೋಗಿಕ ಉಡಾವಣೆ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಶಂಕಿತ ಉಗ್ರನನ್ನು ಜು.6ರಂದು ಕೃಷ್ಣಗಿರಿಬೆಟ್ಟಕ್ಕೆ ಕರೆದೊಯ್ದು ಮಹಜರ್‌ ನಡೆಸಲಾಗಿದೆ ಎಂದು ಕೊಲ್ಕತ್ತಾ ಎನ್‌ಐಎ ಉನ್ನತ ಮೂಲಗಳು ‘ಕನ್ನಡಪ್ರಭ’ಕ್ಕೆ ತಿಳಿಸಿವೆ.

ಎರಡು ರಾಕೆಟ್‌ ಉಡಾವಣೆ ಸಫಲ:

ಬಾಂಬ್‌ ತಯಾರಿಸುವುದರಲ್ಲಿ ನಿಷ್ಣಾತನಾಗಿದ್ದ ಮುನೀರ್‌, ಬೆಂಗಳೂರಿನ ಹೊರವಲಯದ ಎಲೆಕ್ಟ್ರಾನಿಕ್‌ ಸಿಟಿಯ ಶಿಕಾರಿಪಾಳ್ಯ ಹಾಗೂ ಬೇಗೂರಿನ ಬಾಡಿಗೆ ಮನೆಯಲ್ಲಿ ಹಬೀಬುರ್‌ ರೆಹಮಾನ್‌ ಮುಂತಾದವರ ಜತೆ ನೆಲೆಸಿದ್ದ. ಈ ವೇಳೆ ಶಂಕಿತರು ಅಮೋನಿಯಂ ಸಲ್ಫೇಟ್‌, ಪೊಟ್ಯಾಷಿಯಂ, ಕನೆಕ್ಟರ್‌, ವೈರ್‌ ಹಾಗೂ ಪೈಪ್‌ ಬಳಸಿ ‘ರಾಕೆಟ್‌’ ಸಿದ್ಧಪಡಿಸಿದ್ದರು. ಈ ರಾಕೆಟ್‌ ಅನ್ನು ತಮಿಳುನಾಡಿನ ಕೃಷ್ಣಗಿರಿಯ ಬೆಟ್ಟಕ್ಕೆ ಕೊಂಡೊಯ್ದು ಪ್ರಾಯೋಗಿಕವಾಗಿ ಉಡಾವಣೆ ಮಾಡಿದ್ದಾರೆ. ಮೂರು ಬಾರಿ ಉಡಾವಣೆಯಲ್ಲಿ ಎರಡು ಬಾರಿ ಸಫಲರಾಗಿದ್ದೇವೆ ಎಂದು ಶಂಕಿತ ವ್ಯಕ್ತಿ ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾನೆ ಎಂದು ಎನ್‌ಐಎ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಬೌದ್ಧರನ್ನೇ ಗುರಿಯಾಗಿಸಿಕೊಂಡಿರುವ ಜೆಎಂಬಿ ಶಂಕಿತ ಉಗ್ರರು ಬೆಂಗಳೂರಿನ ಹೊರವಲಯದಲ್ಲಿ ಬಾಂಬ್‌ ಸ್ಫೋಟಿಸಲು ಸಂಚು ರೂಪಿಸಿದ್ದರು. ಸುಮಾರು 100 ಮೀಟರ್‌ ದೂರದಲ್ಲಿ ನಿಂತು ಈ ರಾಕೆಟ್ಟನ್ನು ಉಡಾವಣೆ ಮಾಡಲು ಶಂಕಿತರು ಸಿದ್ಧತೆ ನಡೆಸಿದ್ದರು. ಸುಮಾರು 50ರಿಂದ 60 ಮಂದಿ ಇರುವ ಜನನಿಬಿಡ ಸ್ಥಳಕ್ಕೆ ಈ ರಾಕೆಟ್‌ ಉಡಾವಣೆ ಮಾಡಿದರೆ 10ರಿಂದ 12 ಮಂದಿ ಸಾವನ್ನಪ್ಪುತ್ತಾರೆ. ಹೀಗಾಗಿ ಸುಲಭವಾಗಿ ಕೃತ್ಯ ಎಸಗಲು ರಾಕೆಟ್‌ ಸಿದ್ಧಪಡಿಸಿದ್ದರು ಎಂದು ತಿಳಿದುಬಂದಿದ್ದು, ಆರೋಪಿಯನ್ನು ತೀವ್ರ ವಿಚಾರಣೆಗೊಳಪಡಿಸಲಾಗಿದೆ ಎಂದು ಅಧಿಕಾರಿ ಮಾಹಿತಿ ನೀಡಿದರು.

ಪಶ್ಚಿಮ ಬಂಗಾಳದ ಬುದ್ರ್ವಾನ್‌ ಸ್ಫೋಟ ಪ್ರಕರಣದ ಬಳಿಕ ತಲೆಮರೆಸಿಕೊಂಡಿದ್ದ ಶಂಕಿತ ಹಬೀಬುರ್‌ ರೆಹಮಾನ್‌ನನ್ನು ದೊಡ್ಡಬಳ್ಳಾಪುರದಲ್ಲಿ ಜೂ.25ರಂದು ಎನ್‌ಐಎ ತಂಡ ಬಂಧಿಸಿತ್ತು. ವಿಚಾರಣೆ ವೇಳೆ ರಾಮನ​ಗ​ರ​ದ ಟಿಪ್ಪು ನಗರ ಬಡಾ​ವ​ಣೆ​ಯ ಸೇತುವೆ ಬಳಿ ಹುದು​ಗಿ​ಸಿ​ಟ್ಟಿದ್ದ ಸುಧಾರಿತ ಸ್ಫೋಟಕ ವಸ್ತುಗಳನ್ನು ಎನ್‌ಐಎ ತಂಡ ಜಪ್ತಿ ಮಾಡಿತ್ತು. ತೀವ್ರ ವಿಚಾರಣೆಗೊಳಪಡಿಸಿದಾಗ ಬೆಂಗಳೂರಿನ ಚಿಕ್ಕಬಾಣಾವರದ ಮನೆಯಲ್ಲಿ ಸ್ಫೋಟಕ ವಸ್ತುಗಳು ಇರುವ ವಿಷಯ ಬೆಳಕಿಗೆ ಬಂದಿತ್ತು. ಭಾನುವಾರ ಶಂಕಿತರು ವಾಸವಿದ್ದ ಮನೆ ಮೇಲೆ ದಾಳಿ ನಡೆಸಿದ್ದ ಎನ್‌ಐಎ ತಂಡ ಅಪಾರ ಪ್ರಮಾಣದ ಸ್ಫೋಟಕಗಳನ್ನು ಜಪ್ತಿ ಮಾಡಿದೆ.

ಬಾಂಬ್‌ ಸಿಕ್ಕ ಕೇಸು ಪ್ರತ್ಯೇಕ ತನಿಖೆ?

ಚಿಕ್ಕಬಾಣಾವರದ ಹಳೆ ರೈಲ್ವೆ ನಿಲ್ದಾಣದ ಸಮೀಪದ ಮನೆಯಲ್ಲಿ ಬೆಚ್ಚಿಬೀಳಿಸುವ ಎರಡು ಚೀಲದಷ್ಟುಸ್ಫೋಟಕ ವಸ್ತಗಳು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳು ಪ್ರತ್ಯೇಕವಾಗಿ ಪ್ರಕರಣದ ತನಿಖೆ ನಡೆಸಲು ಮುಂದಾಗಿದ್ದಾರೆ.

ಶಂಕಿತ ಜೈದುಲ್‌ ಇಸ್ಲಾಮ್‌ ಅಲಿಯಾಸ್‌ ಮುನೀರ್‌ ಶೇಖ್‌ ಹಾಗೂ ರೆಹಮಾನ್‌ ಇತರರನ್ನು 2014ರಲ್ಲಿ ಪಶ್ಚಿಮ ಬಂಗಾಳದ ಬುದ್ರ್ವಾನ್‌ನಲ್ಲಿ ಸಂಭವಿಸಿದ್ದ ಪ್ರಕರಣದಲ್ಲಿ ಬಂಧಿಸಲಾಗಿದೆ. ಕೃಷ್ಣಗಿರಿ ಬೆಟ್ಟದಲ್ಲಿ ಪ್ರಯೋಗಿಕ ರಾಕೆಟ್‌ ಉಡಾವಣೆ ಹಾಗೂ ಬೆಂಗಳೂರಿನ ಮನೆಯೊಂದರಲ್ಲಿ ಅಪಾರ ಪ್ರಮಾಣದ ಸ್ಫೋಟಕಗಳು ಪತ್ತೆಯಾಗಿರುವುದರ ಹಿಂದೆ ಶಂಕಿತರು ಬೇರೆಯದೇ ಉದ್ದೇಶ ಹೊಂದಿದ್ದಾರೆ ಎಂಬ ಅನುಮಾನ ಬಂದಿದೆ. ಬುದ್ರ್ವಾನ್‌ ಪ್ರಕರಣವನ್ನು ಕೊಲ್ಕತ್ತಾ ಎನ್‌ಐಎ ತಂಡ ತನಿಖೆ ನಡೆಸುತ್ತಿದೆ. ಆ ಪ್ರಕರಣದಿಂದ ಇದನ್ನು ಪ್ರತ್ಯೇಕಗೊಳಿಸಿ ತನಿಖೆಯನ್ನು ದೆಹಲಿ ಮೂಲದ ಎನ್‌ಐಎಗೆ ವರ್ಗಾವಣೆ ಮಾಡಲು ಚಿಂತನೆ ನಡೆದಿದೆ ಎಂದು ಎನ್‌ಐಎ ಉನ್ನತ ಮೂಲಗಳು ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿದೆ.

2 ಯಶಸ್ವಿ ಟಾರ್ಗೆಟ್‌ ಬೆಂಗಳೂರು

- ಕಳೆದ ವರ್ಷ ರಾಮನಗರದಲ್ಲಿ ಬಂಧಿತನಾಗಿದ್ದ ಬೋಧಗಯಾ ಸ್ಫೋಟದ ಮಾಸ್ಟರ್‌ ಮೈಂಡ್‌ ಜೈದುಲ್‌ ಅಲಿಯಾಸ್‌ ಮುನೀರ್‌

- ಇತ್ತೀಚೆಗೆ ಬೆಂಗಳೂರು ಬಳಿಯ ದೇವನಹಳ್ಳಿಯ ಮಸೀದಿಯೊಂದರಲ್ಲಿ ಸಿಕ್ಕಿ ಬಿದ್ದ ಮತ್ತೊಬ್ಬ ಶಂಕಿತ ಉಗ್ರ ಹಬೀಬುರ್‌ ರೆಹಮಾನ್‌

- ಕಳೆದ ವರ್ಷ ಇವರೆಲ್ಲ ಬೆಂಗಳೂರು ಹೊರವಲಯದ ಎಲೆಕ್ಟ್ರಾನಿಕ್‌ ಸಿಟಿ ಪ್ರದೇಶದಲ್ಲಿ ವಾಸ್ತವ್ಯ. ಅಲ್ಲೇ ಬಾಂಬ್‌, ರಾಕೆಟ್‌ ತಯಾರಿಕೆ

- ಹೀಗೆ ತಯಾರಿಸಿದ ರಾಕೆಟ್‌ ಅನ್ನು ತಮಿಳುನಾಡಿನ ಕೃಷ್ಣಗಿರಿ ಬೆಟ್ಟಕ್ಕೆ ಒಯ್ದು, ಪ್ರಾಯೋಗಿಕವಾಗಿ ಉಡಾಯಿಸಿದ ಶಂಕಿತ ಉಗ್ರರು

- 3 ರಾಕೆಟ್‌ ಉಡಾವಣೆ, ಈ ಪೈಕಿ 2 ಯಶಸ್ವಿ. ಬೆಂಗಳೂರಿನಲ್ಲಿ ಬೌದ್ಧರನ್ನೇ ಗುರಿಯಾಗಿಸಿ ಈ ರಾಕೆಟ್‌ ಪ್ರಯೋಗಿಸಲು ಸಂಚು

- ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ವಿಚಾರಣೆ ವೇಳೆ ಆಘಾತಕಾರಿ ಮಾಹಿತಿ ಹೊರಗೆಡವಿದ ಶಂಕಿತ ಉಗ್ರ ಹಬೀಬುರ್‌ ರೆಹಮಾನ್‌