Asianet Suvarna News Asianet Suvarna News

ಉಗ್ರ ಕೃತ್ಯಕ್ಕೆ ಪಾಕ್‌ ಕೊಟ್ಟಹಣವನ್ನೂ ಲಪಟಾಯಿಸಿದ ಪ್ರತ್ಯೇಕತಾವಾದಿಗಳು!

ಉಗ್ರ ಕೃತ್ಯಕ್ಕೆ ಪಾಕ್‌ ಕೊಟ್ಟಹಣವನ್ನೂ ಲಪಟಾಯಿಸಿದ ಪ್ರತ್ಯೇಕತಾವಾದಿಗಳು!| ವಿದೇಶಿ ದೇಣಿಗೆಯಿಂದ ಹಣ ಆಸ್ತಿ ಖರೀದಿ, ಮಕ್ಕಳ ವಿದ್ಯಾಭ್ಯಾಸಕ್ಕೆ ಬಳಕೆ| ಕಾಶ್ಮೀರದಲ್ಲಿ ಎನ್‌ಐಎ ತನಿಖೆ ವೇಳೆ ರೋಚಕ ಅಂಶಗಳು ಬೆಳಕಿಗೆ

Jammu and Kashmir terror funding case NIA nails top separatist leaders
Author
Bangalore, First Published Jun 17, 2019, 12:58 PM IST

ನವದೆಹಲಿ[ಜೂ.17]: ಜಮ್ಮು-ಕಾಶ್ಮೀರದ ಗಡಿ ಜನರ ಮನಸ್ಸಿನಲ್ಲಿ ಭಾರತ ವಿರೋಧಿ ಅಭಿಪ್ರಾಯ ಭಿತ್ತಿ ಅವರನ್ನು ಉಗ್ರವಾದದತ್ತ ಸೆಳೆಯಲು ಪ್ರತ್ಯೇಕತಾವಾದಿ ನಾಯಕರು ಶತ್ರು ರಾಷ್ಟ್ರ ಪಾಕಿಸ್ತಾನದಿಂದ ದೇಣಿಗೆ ಪಡೆದಿದ್ದಾರೆ ಎಂಬ ವಿಚಾರ ರಾಷ್ಟ್ರೀಯ ತನಿಖಾ ತಂಡ(ಎನ್‌ಐಎ)ದ ತನಿಖೆಯಿಂದ ಬಯಲಾಗಿದೆ. ಅಲ್ಲದೆ, ಪಾಕಿಸ್ತಾನ ನೀಡಿದ ಈ ದೇಣಿಗೆಯ ಹಣವನ್ನು ಪ್ರತ್ಯೇಕತಾವಾದಿ ನಾಯಕರು ತಮ್ಮ ವೈಯಕ್ತಿಕ ಕೆಲಸ ಮತ್ತು ಆಕಾಂಕ್ಷೆಗಳ ಈಡೇರಿಕೆಗಾಗಿ ಬಳಕೆ ಮಾಡಿಕೊಂಡಿದ್ದಾರೆ ಎಂಬುದು ಬೆಳಕಿಗೆ ಬಂದಿದೆ.

ಜಮ್ಮು-ಕಾಶ್ಮೀರದಲ್ಲಿನ ಭಯೋತ್ಪಾದನೆ ವಿಚಾರಕ್ಕೆ ಸಂಬಂಧಿಸಿದಂತೆ ಹುರಿಯತ್‌ ಕಾನ್ಫರೆನ್ಸ್‌ ಸೇರಿದಂತೆ ಜಮ್ಮು-ಕಾಶ್ಮೀರದ ಪ್ರತ್ಯೇಕತಾವಾದಿ ನಾಯಕರನ್ನು ರಾಷ್ಟ್ರೀಯ ತನಿಖಾ ತಂಡ ವಿಚಾರಣೆಗೊಳಪಡಿಸಿದ್ದು, ಈ ಸಂದರ್ಭದಲ್ಲಿ ಪಾಕಿಸ್ತಾನ ರಾಷ್ಟ್ರದಿಂದ ದೇಣಿಗೆ ಪಡೆದಿರುವುದಾಗಿ ಒಪ್ಪಿಕೊಂಡಿದ್ದಾರೆ. ಅಲ್ಲದೆ, ಈ ಹಣವನ್ನು ತಮ್ಮ ಖಾಸಗಿ ಕೆಲಸಗಳು ಮತ್ತು ತಮ್ಮ ಸಂಬಂಧಿಕರು ವಿದೇಶದಲ್ಲಿ ಶಿಕ್ಷಣ ಪೂರೈಸಲು ವಿನಿಯೋಗಿಸಿದ್ದಾರೆ ಎಂಬುದಾಗಿಯೂ ತಪ್ಪೊಪ್ಪಿಕೊಂಡಿದ್ದಾರೆ ಎಂದು ಎನ್‌ಐಎ ಹೇಳಿದೆ.

ಉಗ್ರ ದೇಣಿಗೆ ಪ್ರಕರಣದಲ್ಲಿ ಬಂಧನವಾದ ದುಕ್ತರನ್‌-ಇ ಮಿಲತ್‌ ನಾಯಕಿ ಆಸಿಯಾ ಅಂದ್ರಾಬಿ ಎಂಬಾಕೆಯನ್ನು ಎನ್‌ಐಎ ವಿಚಾರಣೆಗೊಳಪಡಿಸಿದ್ದು, ಈ ವೇಳೆ ತಾನು ವಿದೇಶಿ ದೇಣಿಗಳು ಹಾಗೂ ದಾನದ ಮೂಲಕ ಹಣ ಪಡೆಯುತ್ತಿದ್ದೇನೆ. ಇದೇ ಹಣವನ್ನು ಮಲೇಷ್ಯಾದಲ್ಲಿ ಮಗನ ಶಿಕ್ಷಣಕ್ಕೂ ವಿನಿಯೋಗಿಸುತ್ತಿದ್ದಾಗಿ ಒಪ್ಪಿಕೊಂಡಿದ್ದಾಳೆ. ಮಿಲತ್‌ ಸಂಘಟನೆ ಜಮ್ಮು-ಕಾಶ್ಮೀರದಲ್ಲಿ ಮುಸ್ಲಿಂ ಮಹಿಳೆಯರ ಜೊತೆಗೂಡಿ ಪ್ರತಿಭಟನೆಗಳನ್ನು ಹಮ್ಮಿಕೊಳ್ಳುತ್ತಿದೆ.

ಇನ್ನು ಪ್ರತ್ಯೇಕತಾವಾದಿ ನಾಯಕ ಶಬೀರ್‌ ಶಾ ಪಹಲ್ಗಾಂ ಹೋಟೆಲ್‌ ಸೇರಿದಂತೆ ಇನ್ನಿತರ ಉದ್ಯಮಗಳಿಗೆ ವಿದೇಶದಿಂದ ಹಣ ಪೂರೈಕೆಯಾಗುತ್ತಿರುವ ಬಗ್ಗೆಯೂ ಎನ್‌ಐಎ ವಿಚಾರಣೆಗೊಳಪಡಿಸಿದೆ.

ಜಮ್ಮು-ಕಾಶ್ಮೀರದ ನಾಗರಿಕರು ಹಾಗೂ ಪ್ರತ್ಯೇಕತಾ ವಾದಿಗಳಲ್ಲಿ ಭಾರತದ ವಿರೋಧಿ ಭಾವನೆ ಭಿತ್ತಿ ಅವರನ್ನು ಉಗ್ರಗಾಮಿಗಳನ್ನಾಗಿ ಮಾಡಿ ಅವರನ್ನೇ ಭಾರತ ಸರ್ಕಾರದ ವಿರುದ್ಧವೇ ಯುದ್ಧಕ್ಕೆ ಪ್ರಚೋದಿಸುವ ನಿಟ್ಟಿನಲ್ಲಿ ದೇಣಿಗೆ ಸಂಗ್ರಹ, ವಿದೇಶಿ ದೇಣಿಗೆ ಸಂಗ್ರಹ ಮಾಡಿದ ಆರೋಪದ ಮೇರೆಗೆ ಜಮಾತ್‌ ಉದ್‌ ದವಾ, ದುಕ್ತಾರನ್‌-ಇ-ಮಿಲ್ಲಾತ್‌, ಲಷ್ಕರ್‌-ಎ-ತೊಯ್ಬಾ, ಹಿಜ್ಬುಲ್‌-ಮುಜಾಹಿದ್ದೀನ್‌ ಹಾಗೂ ಇತರ ಪ್ರತ್ಯೇಕತಾವಾದಿ ನಾಯಕರ ವಿರುದ್ಧ ಎನ್‌ಐಎ 2017ರಲ್ಲೇ ಕೇಸ್‌ ದಾಖಲಿಸಿಕೊಂಡು ತನಿಖೆಗಿಳಿದಿತ್ತು. ಜಮಾತ್‌ ಉದ್‌ ದವಾ ನಾಯಕ ಹಫೀಜ್‌ ಮೊಹಮ್ಮದ್‌ ಸಯೀದ್‌, ಹಿಜ್ಬುಲ್‌ ಮುಜಾಹಿದೀನ್‌ ನಾಯಕ ಸಯೀದ್‌ ಸಲಾಹುದ್ದೀನ್‌ ಸೇರಿದಂತೆ ಒಟ್ಟಾರೆ 13 ಆರೋಪಿಗಳ ವಿರುದ್ಧ ಎನ್‌ಐಎ ಚಾಜ್‌ರ್‍ಶೀಟ್‌ ಸಲ್ಲಿಕೆ ಮಾಡಿದೆ.

Follow Us:
Download App:
  • android
  • ios