ನವದೆಹಲಿ (ಡಿ.04): ದಿಲ್ಲಿಯಲ್ಲಿ ವಾಯುಮಾಲಿನ್ಯ ಪರಿಸ್ಥಿತಿಯ ಬಗ್ಗೆ ಕಳವಳ ವ್ಯಕ್ತಪಡಿಸಿರುವ ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ, ದಿಲ್ಲಿ ಸರ್ಕಾರಕ್ಕೆ 25 ಕೋಟಿ ರುಪಾಯಿ ದಂಡ ಕಟ್ಟುವಂತೆ ಆದೇಶಿಸಿದೆ.

ಒಂದು ವೇಳೆ ದಂಡ ತೆರಲು ವಿಫಲವಾದಲ್ಲಿ ಮಾಸಿಕ 10 ಕೋಟಿ ರುಪಾಯಿ ಹೆಚ್ಚುವರಿ ದಂಡ ವಿಧಿಸಲಾಗುತ್ತದೆ ಎಂದು ಎಚ್ಚರಿಸಿದೆ. ಇದಲ್ಲದೆ, ದಂಡದ ಮೊತ್ತವನ್ನು ದಿಲ್ಲಿ ಸರ್ಕಾರದ ಅಧಿಕಾರಿಗಳ ವೇತನದಲ್ಲಿ ಕಡಿತಗೊಳಿಸುವ ಮೂಲಕ ಹಾಗೂ ಪರಿಸರ ಮಾಲಿನ್ಯ ಮಾಡುತ್ತಿರುವವರ ಮೂಲಕ ವಸೂಲು ಮಾಡಬೇಕು ಎಂದು ಆದೇಶಿಸಿದೆ.

ದಿಲ್ಲಿಯ ಮುಂಡ್ಕಾ ಎಂಬಲ್ಲಿ ಕೃಷಿ ಜಮೀನಿನಲ್ಲಿ ಉದ್ದಿಮೆಗಳು ಪ್ಲಾಸ್ಟಿಕ್‌ ಹಾಗೂ ಇತರ ತ್ಯಾಜ್ಯಗಳಿಗೆ ಬೆಂಕಿ ಹಚ್ಚಿ ವಾಯುಮಾಲಿನ್ಯ ಮಾಡುತ್ತಿವೆ ಎಂದು ಕೆಲವು ಗ್ರಾಮಸ್ಥರು ನ್ಯಾಯಾಧಿಕರಣದ ಮೊರೆ ಹೋಗಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಧಿಕರಣ ಈ ಆದೇಶ ಹೊರಡಿಸಿದೆ.