ಸರಕಾರಕ್ಕೆ ಎನ್'ಜಿಟಿ ಕೇಳಿದ ಪ್ರಶ್ನೆಗಳು:1) ಎಷ್ಟು ರಾಜಾಕಾಲುವೆಗಳನ್ನ ಸ್ವಚ್ಛಗೊಳಿಸಿದ್ದೀರಿ?2) ರಾಜಾಕಾಲುವೆಗಳು ಹಾಗೂ ಕೆರೆಯಿಂದ ಎಷ್ಟು ಪ್ರಮಾಣದ ಕಸ ತೆಗೆದಿದ್ದೀರಿ?3) ಈ ಕಸಗಳನ್ನು ಎಲ್ಲಿ ಡಂಪ್ ಮಾಡಿದ್ದೀರಿ.?4) ಪ್ರವಾಹ ತಪ್ಪಿಸಲು ಯಾವ ಮುಂಜಾಗ್ರತಾ ಕ್ರಮ ಕೈಗೊಂಡಿದ್ದೀರಿ..?

ಬೆಂಗಳೂರು(ಆ. 17): ಬೆಳ್ಳಂದೂರು ಕೆರೆ ನಿರ್ವಹಣೆ ವಿಚಾರದಲ್ಲಿ ನಿರ್ಲಕ್ಷ್ಯ ತೋರುತ್ತಿರುವ ರಾಜ್ಯ ಸರಕಾರವನ್ನು ರಾಷ್ಟ್ರೀಯ ಹಸಿರು ನ್ಯಾಯಾಧೀಕರಣ ತರಾಟೆಗೆ ತೆಗೆದುಕೊಂಡಿದೆ. ಈ ಹಿಂದಿನ ಎನ್'ಜಿಟಿ ಆದೇಶವನ್ನು ಪಾಲಿಸಿಯೇ ಇಲ್ಲ ಎಂದು ಗರಂ ಆಗಿದೆ. ಎನ್'ಜಿಟಿಯ ಆದೇಶವನ್ನು ಜಾರಿಗೊಳಿಸಿರುವ ವಿವರವನ್ನು ಆಗಸ್ಟ್ 22ರಂದು ಕೋರ್ಟ್'ಗೆ ನೀಡಬೇಕು ಎಂದು ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ಎನ್'ಜಿಟಿ ಆದೇಶಿಸಿದೆ. ಅಲ್ಲದೇ, ಅಧಿಕಾರಿಯು ಅಂದು ಖುದ್ದಾಗಿ ಕೋರ್ಟ್'ಗೆ ಹಾಜರಾಗಬೇಕೆಂದೂ ಖಡಕ್ ಸೂಚನೆ ನೀಡಿದೆ.

ಹಸಿರು ನ್ಯಾಯಾಧಿಕರಣದ ವಿಚಾರಣೆಯಲ್ಲಿ ನಮ್ಮ ಬೆಂಗಳೂರು ಫೌಂಡೇಶನ್ ಪರ ವಕೀಲ ಸಜ್ಜನ್ ಪೂವಯ್ಯ ವಾದಿಸಿದರು. ಈ ಹಿಂದಿನ ಎನ್'ಜಿಟಿಯ ಆದೇಶವನ್ನು ಸರಕಾರ ಪಾಲಿಸಿಲ್ಲ ಎಂಬುದನ್ನು ವಕೀಲರು ದಾಖಲೆ ಸಮೇತ ಕೋರ್ಟ್'ಗೆ ಮನವರಿಕೆ ಮಾಡಿಕೊಟ್ಟರು.

ಸರಕಾರಕ್ಕೆ ಎನ್'ಜಿಟಿ ಕೇಳಿದ ಪ್ರಶ್ನೆಗಳು:
1) ಎಷ್ಟು ರಾಜಾಕಾಲುವೆಗಳನ್ನ ಸ್ವಚ್ಛಗೊಳಿಸಿದ್ದೀರಿ?
2) ರಾಜಾಕಾಲುವೆಗಳು ಹಾಗೂ ಕೆರೆಯಿಂದ ಎಷ್ಟು ಪ್ರಮಾಣದ ಕಸ ತೆಗೆದಿದ್ದೀರಿ?
3) ಈ ಕಸಗಳನ್ನು ಎಲ್ಲಿ ಡಂಪ್ ಮಾಡಿದ್ದೀರಿ.?
4) ಪ್ರವಾಹ ತಪ್ಪಿಸಲು ಯಾವ ಮುಂಜಾಗ್ರತಾ ಕ್ರಮ ಕೈಗೊಂಡಿದ್ದೀರಿ..?

ಈ ಪ್ರಶ್ನೆಗಳಿಗೆ ಉತ್ತರವನ್ನು ಆ.22ರಷ್ಟರಲ್ಲಿ ತಮಗೆ ತಿಳಿಸಬೇಕೆಂದು ನ್ಯಾಯಾಧಿಕರಣವು ಸರಕಾರಕ್ಕೆ ಗಡುವು ಕೊಟ್ಟಿದೆ.

ಕೆಲ ದಿನಗಳಿಂದ ಬೆಂಗಳೂರಿನಲ್ಲಿ ಸುರಿದ ಮಳೆಯಿಂದಾಗಿ ಬೆಳ್ಳಂದೂರು ಮತ್ತು ವರ್ತೂರು ಕೆರೆಗಳಲ್ಲಿ ನೊರೆ ಹಾವಳಿ ಮತ್ತೆ ಹೆಚ್ಚಾಗಿದೆ. ಸುತ್ತಮುತ್ತಲಿನ ನಿವಾಸಿಗಳು ನಿತ್ಯ ನರಕಯಾತನೆ ಅನುಭವಿಸುತ್ತಿದ್ದಾರೆ. ಜತೆಗೆ ವಾಹನ ಸವಾರರು ಕಿರಿ-ಕಿರಿ ಅನುಭವಿಸುತ್ತಿದ್ದಾರೆ. ಕೆರೆಯಲ್ಲಿ ವಿಷಯುಕ್ತ ರಾಸಾಯನಿಕ ಮತ್ತು ತ್ಯಾಜ್ಯ ತುಂಬಿರುವುದರಿಂದ ನೊರೆ ಹೆಚ್ಚಾಗುತ್ತಿದೆ ಎಂದು ರಾಷ್ಟ್ರೀಯ ಹಸಿರು ಮಂಡಳಿ ಈ ಹಿಂದೆಯೇ ಚಾಟಿ ಬೀಸಿದರೂ ನೊರೆ ಹಾವಳಿ ಮಾತ್ರ ತಪ್ಪಿಲ್ಲ. ಬೊಮ್ಮನಹಳ್ಳಿಯಿಂದ ಹಿಡಿದು ವರ್ತೂರುವರೆಗೂ ರಾಸಾಯನಿಕ ಕಂಪನಿಗಳಿಗೆ ಬೀಗ ಜಡಿದರೂ, ಕೆರೆಗಳಿಗೆ ಸೇರುವ ರಾಸಾಯನಿಕ ಪ್ರಮಾಣ ಮಾತ್ರ ಕಡಿಮೆಯಾಗಿಲ್ಲ.