ಜೈಪುರ[ಫೆ.14]: ಮಗು ಹುಟ್ಟಿದ ಕ್ಷಣದಲ್ಲಿ ಆಸ್ಪತ್ರೆಗಳಲ್ಲೇ ‘ಜನ್ಮ ಕುಂಡಲಿ’ಯನ್ನೂ ನೀಡಿದರೆ ಹೇಗಿರುತ್ತೆ?!

ಇಂಥದ್ದೊಂದು ಪ್ರಶ್ನೆ ನಿಮ್ಮನ್ನೂ ಎಂದಾದರೂ ಕಾಡಿರಬಹುದು. ಅದೀಗ ನಿಜವಾಗುವ ದಿನಗಳು ಬಹಳ ದೂರವಿಲ್ಲ. ರಾಜಸ್ಥಾನ ಸರ್ಕಾರ ಹಿಂದೂ ಸಂಪ್ರದಾಯದಲ್ಲಿ ಇರುವಂತೆ ಜನ್ಮ ದಿನಾಂಕ ಆಧರಿತ ಜಾತಕ ರಚಿಸಿಕೊಡುವ ವ್ಯವಸ್ಥೆ ಜಾರಿಯ ಚಿಂತನೆಯಲ್ಲಿದೆ. ಇದರ ಜೊತೆಗೆ ಜಾತಕ ಆಧರಿಸಿ, ಮಗುವಿಗೆ ಸೂಕ್ತ ಹೆಸರನ್ನೂ ಆ ನಾಮಕರಣಕ್ಕೂ ಸಲಹೆ ನೀಡುವುದು ಯೋಜನೆ ಒಳಗೊಳ್ಳಲಿದೆ.

ಮೊದಲ ಹಂತದಲ್ಲಿ ಪ್ರಾಯೋಗಿಕವಾಗಿ ಜೈಪುರದ 5 ಸರ್ಕಾರಿ ಆಸ್ಪತ್ರೆಗಳಲ್ಲಿ ಯೋಜನೆ ಜಾರಿಗೊಳಿಸಲಾಗುವುದು. ಈ ಯೋಜನೆ ಅನ್ವಯ ಸರ್ಕಾರಿ ಆಸ್ಪತ್ರೆಗಳಲ್ಲಿ ಜಾತಕ ಮತ್ತು ಮಗುವಿಗೆ ಹೆಸರು ಸೂಚಿಸುವುದಕ್ಕೆ 51 ರು. ಶುಲ್ಕ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ 101 ರು. ಶುಲ್ಕ ವಿಧಿಸಲಾಗುವುದು. ಯೋಜನೆಗೆ ರಾಜೀವ್‌ ಗಾಂಧಿ ಜನ್ಮಪತ್ರ-ನಾಮಕರಣ ಯೋಜನಾ ಎಂದು ಹೆಸರಿಡುವ ಉದ್ದೇಶವಿದೆ. ಜಾತಕ ರಚಿಸುವ ಹೊಣೆಯನ್ನು ಜ್ಯೋತಿಷ್ಯ ಶಾಸ್ತ್ರದಲ್ಲಿ ಪದವಿ ಇಲ್ಲವೇ ಡಿಪ್ಲಮೋ ಮಾಡಿದವರಿಗೆ ವಹಿಸಲಾಗುವುದು. ಇಂಥ 3000 ಜ್ಯೋತಿಷಿಗಳನ್ನು ಆಸ್ಪತ್ರೆಗಳಿಗೆ ನಿಯೋಜಿಲಾಗುವುದು. ಪೋಷಕರಿಂದ ಸಂಗ್ರಹಿಸುವ ತಲಾ 51 ರು.ಗಳಲ್ಲಿ 40 ರು. ಮತ್ತು 101 ರು.ಗಳಲ್ಲಿ 80 ರು.ಗಳನ್ನು ಜ್ಯೋತಿಷಿಗಳಿಗೆ ನೀಡಲಾಗುವುದು. ಸಂಸ್ಕೃತ, ಪುರಾತನ ಹಿಂದೂ ಸಂಸ್ಕೃತಿಯನ್ನು ಪ್ರೋತ್ಸಾಹಿಸುವುದರ ಜೊತೆಗೆ, ಜ್ಯೋಷಿತಿಗಳಿಗೆ ಇದು ಉದ್ಯೋಗ ಕಲ್ಪಿಸುವ ಯೋಜನೆಯಾಗಲಿದೆ ಎಂದು ಸರ್ಕಾರ ಹೇಳಿದೆ. ರಾಸ್ಥಾನದಲ್ಲಿ ಒಟ್ಟು 16,728 ಸರ್ಕಾರಿ ಆಸ್ಪತ್ರೆಗಳಿದ್ದು, 54 ನೋಂದಾಯಿತ ಖಾಸಗಿ ಆಸ್ಪತ್ರೆಗಳಿವೆ.

ಯಾಕಾಗಿ ಈ ಯೋಜನೆ?:

ಕಳೆದ ವರ್ಷ ನಡೆದ ವಿಧಾನಸಭೆ ಚುನಾವಣೆ ವೇಳೆ ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ರಾಜ್ಯದಲ್ಲಿ ಸಂಸ್ಕೃತ ಶಿಕ್ಷಣ ಮತ್ತು ಭಾಷಾಭಿವೃದ್ಧಿಗೆ ಉತ್ತೇಜನ ನೀಡುವುದಾಗಿ ಭರವಸೆ ನೀಡಿತ್ತು.