ರಾಮನಗರ: ಹೊಸ ವರ್ಷದ ಹಿನ್ನೆಲೆಯಲ್ಲಿ ಜಿಲ್ಲೆಯ ಪ್ರಸಿದ್ದ ಪ್ರವಾಸಿ ತಾಣವಾಗಿರುವ ಕನಕಪುರ ತಾಲೂಕಿನ ಸಂಗಮ ಮತ್ತು ಮೇಕೆದಾಟಿಗೆ ಪ್ರವಾಸಿಗರ ಪ್ರವೇಶ ನಿರ್ಬಂಧಿಸಿ ತಾಲೂಕು ಆಡಳಿತ ಆದೇಶ ಹೊರಡಿಸಿದೆ. 

ಈ ಸಂಬಂಧ ಅಧಿಕೃತ ಪ್ರಕಟಣೆ ಹೊರಡಿಸಿರುವ ಅರಣ್ಯ ಇಲಾಖೆ, ಪೊಲೀಸ್ ಇಲಾಖೆ ಮತ್ತು ತಹಸೀಲ್ದಾರ್ ಸಂಗಮ ಮತ್ತು ಮೇಕೆದಾಟುವಿಗೆ ಡಿ. 31 ರ ಬೆಳಿಗ್ಗೆ 6 ಗಂಟೆಯಿಂದ ಜ. 1 ರ ಮಧ್ಯರಾತ್ರಿ 12 ಗಂಟೆಯವರೆಗೆ ಪ್ರವಾಸಿಗರ ಪ್ರವೇಶವನ್ನು ನಿರ್ಬಂಧಿಸಿ ಪ್ರಕಟಣೆ ಹೊರಡಿಸಲಾಗಿದೆ.

ಹೊಸ ವರ್ಷದ ಮೋಜು ಮಸ್ತಿಯ ಹಿನ್ನೆಲೆಯಲ್ಲಿ ಸಂಗಮ ಮತ್ತು ಮೇಕೆದಾಟಿನಲ್ಲಿ ಸಾವುನೋವುಗಳು ಸಂಭವಿಸುವ ಸಾಧ್ಯತೆ ಇರುವುದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ಪ್ರವೇಶ ನಿಷೇಧಿಸಿರುವುದಾಗಿ ಇಲಾಖಾ ಮೂಲಗಳು ತಿಳಿಸಿವೆ. 

ಜಿಲ್ಲೆಯ ಸಮೀಪದ ಪ್ರಮುಖ ಪ್ರವಾಸಿ ತಾಣ ಎನಿಸಿರುವ ಮುತ್ತಿತ್ತಿಗೂ ಪ್ರವೇಶ ನಿಷೇಧಿಸಲಾಗಿದೆ. ಈ ಸಂಬಂಧ ಜಿಲ್ಲೆಯ ಗಡಿಭಾಗದಲ್ಲಿರುವ ಅರಣ್ಯ ಪ್ರದೇಶದಲ್ಲಿ ಅಧಿಕೃತ ಪ್ರಕಟಣೆ ಹೊರಡಿಸಲಾಗಿದೆ.