ಬೆಂಗಳೂರು(ಸೆ.25): ರಾಜ್ಯದಲ್ಲಿ ಘೋಷಣೆಯಾಗಿರುವ 15 ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗೆ ಅನರ್ಹಗೊಂಡಿರುವ ಶಾಸಕರು ಸೇರಿದಂತೆ ಯಾರು ಬೇಕಾದರೂ ನಾಮಪತ್ರ ಸಲ್ಲಿಸಬಹುದು. ಆದರೆ, ಅದು ಅಂಗೀಕಾರವಾಗುವುದು ಮುಖ್ಯವಾಗುತ್ತದೆ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.

ಅನರ್ಹ ಶಾಸಕರು ಚುನಾವಣೆಯಲ್ಲಿ ಸ್ಪರ್ಧಿಸಲು ಸಮಸ್ಯೆಯಿಲ್ಲ ಎಂದು ಕೇಂದ್ರ ಚುನಾವಣಾ ಆಯೋಗ ಸೋಮವಾರ ಸುಪ್ರೀಂಕೋರ್ಟ್‌ನಲ್ಲಿ ಹೇಳಿದ್ದು ಕೇಳಿ ನಿಟ್ಟುಸಿರು ಬಿಟ್ಟಿದ್ದ ಅನರ್ಹ ಶಾಸಕರಿಗೆ ಇದೀಗ ಸಂಜೀವ್ ಕುಮಾರ್ ಹೇಳಿಕೆಯಿಂದ ಮತ್ತೆ ಆತಂಕ ಎದುರಾಗಿದೆ. ಆಯೋಗದ ಕಚೇರಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಜೀವ್ ಕುಮಾರ್, ಉಪ ಚುನಾವಣೆಗೆ ಅನರ್ಹಗೊಂಡಿರುವ ಶಾಸಕರು ಸ್ಪರ್ಧೆ ಮಾಡುವಂತಿಲ್ಲ ಎಂದು ನಾನು ಹೇಳಿಕೆ ನೀಡಿಲ್ಲ. ಮಾಧ್ಯಮಗಳು ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಿಕೊಂಡಿವೆ.

ಉಪಚುನಾವಣೆ ನಡುವೆ 3 ದಿನದ ಅಧಿವೇಶನ.. ಏನಿದರ ಮರ್ಮ?

ಉಪ ಚುನಾವಣೆಗೆ ಅನರ್ಹಗೊಂಡಿರುವ ಶಾಸಕರು ಸೇರಿದಂತೆ ಯಾರು ಬೇಕಾದರೂ ನಾಮಪತ್ರ ಸಲ್ಲಿಸಬಹುದು. ಆದರೆ, ಅದು ಅಂಗೀಕಾರ ವಾಗುವುದು ಮುಖ್ಯ. ಚುನಾವಣಾಧಿಕಾರಿಗಳು ನಿಯಮಾನುಸಾರವಾಗಿರುವ ನಾಮಪತ್ರಗಳನ್ನು ಮಾತ್ರ ಅಂಗೀಕರಿಸಲಿದ್ದಾರೆ. ಒಂದು ವೇಳೆ ನಿಯಮಾನುಸಾರ ಇಲ್ಲದಿದ್ದರೆ ಅಂತಹ ನಾಮಪತ್ರಗಳನ್ನು ತಿರಸ್ಕರಿಸಲಾಗುತ್ತದೆ ಎಂದು ಹೇಳಿದರು.

ಅತ್ತ ಬೈ ಎಲೆಕ್ಷನ್ ತಡೆ ಹಿಡಿಯುವಂತೆ ಮನವಿ: ಇತ್ತ ಉಪಚುನಾವಣೆ ನಡೆಸುವಂತೆ ಅನರ್ಹ ಶಾಸಕನ ಪಟ್ಟು

ಅನರ್ಹ ಶಾಸಕರ ಪ್ರಕರಣ ವಿಚಾರಣೆ ಹಂತದಲ್ಲಿದ್ದು, ಶೀಘ್ರವೇ ತೀರ್ಪು ಬರಲಿದೆ. ನಂತರ ಎಲ್ಲದಕ್ಕೂ ಸ್ಪಷ್ಟನೆ ಸಿಗಲಿದೆ. ನ್ಯಾಯಾಲಯದಲ್ಲಿ ವಿಚಾರಣೆ ಇರುವ ಕಾರಣ ಈ ಬಗ್ಗೆ ಮಾತನಾಡಿದರೆ ನ್ಯಾಯಾಂಗ ನಿಂದನೆಯಾಗಲಿದೆ. ಹೀಗಾಗಿ ಅನರ್ಹಗೊಂಡವರ ಪ್ರಕರಣದ ಸಂಬಂಧ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದರು.

ಬೈ ಎಲೆಕ್ಷನ್: ಮಸ್ಕಿ, RR ನಗರ ಕ್ಷೇತ್ರಗಳಿಗೆ ಚುನಾವಣೆಯಾಕಿಲ್ಲ? ಕಾರಣ ಇಲ್ಲಿದೆ