ಬೆಂಗಳೂರು, (ಸೆ. 24): ಒಂದು ಕಡೆ ಅನರ್ಹ ಶಾಸಕರು ಉಪಚುನಾವಣೆಗೆ ತಡೆ ನೀಡುವಂತೆ ಮನವಿ ಮಾಡಿದ್ರೆ, ಮತ್ತೊಂದೆಡೆ ತಮ್ಮ ಕ್ಷೇತ್ರಕ್ಕೆ ಬೈ ಎಲೆಕ್ಷನ್ ನಡೆಸುವಂತೆ ಅನರ್ಹ ಶಾಸಕ ಕೋರ್ಟ್ ಮೆಟ್ಟಿಲೇರಲು ನಿರ್ಧರಿಸಿದ್ದಾರೆ.  

 ಬೆಂಗಳೂರಿನ ಆರ್ ಆರ್ ನಗರ ವಿಧಾನಸಭೆ ಕ್ಷೇತ್ರದ ಉಪಚುನಾವಣೆ ದಿನಾಂಕವನ್ನು ಘೋಷಣೆ ಮಾಡದೇ ಕೇಂದ್ರ ಚುನಾವಣೆ ಆಯೋಗ ತಡೆಹಿಡಿದಿದೆ. ಇದರ ವಿರುದ್ಧ ಕಾಂಗ್ರೆಸ್ RR ನಗರದ ಅನರ್ಹ ಶಾಸಕ ಮುನಿರತ್ನ ಅವರು ಕೋರ್ಟ್ ಮೊರೆಹೋಗಲು ನಿರ್ಧರಿಸಿದ್ದಾರೆ. 

ಬುಧವಾರ ಸುಪ್ರೀಂಕೋರ್ಟ್‌ನಲ್ಲಿ ಅನರ್ಹ ಶಾಸಕರ ಅರ್ಜಿಯ ವಿಚಾರಣೆ ನಡೆಯಲಿದ್ದು, ಉಪಚುನಾವಣೆಗೆ ತಡೆ ನೀಡುವಂತೆ ಮನವಿ ಮಾಡಿದ್ದಾರೆ. ಇದರ ಮಧ್ಯೆ ಮುನಿರತ್ನ ಅವರು ತಮ್ಮ  ರಾಜರಾಜೇಶ್ವರಿ ನಗರ ಕ್ಷೇತ್ರಕ್ಕೆ ಉಪಚುನಾವಣೆ ದಿನಾಂಕ ಘೋಷಣೆ ಮಾಡುವಂತೆ ಸುಪ್ರೀಂ ಕೋರ್ಟ್ ಗೆ ಅರ್ಜಿ ಸಲ್ಲಿಸಲಿದ್ದಾರೆ. 

ಬೈ ಎಲೆಕ್ಷನ್: ಮಸ್ಕಿ, RR ನಗರ ಕ್ಷೇತ್ರಗಳಿಗೆ ಚುನಾವಣೆಯಾಕಿಲ್ಲ? ಕಾರಣ ಇಲ್ಲಿದೆ
 
2018ರಲ್ಲಿ ನಡೆದ ಚುನಾವಣೆಯಲ್ಲಿ ಆರ್. ಆರ್. ನಗರ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಕಣಕ್ಕಿಳಿದಿದ್ದ ಮುನಿರತ್ನ 108065 ಮತಗಳನ್ನು ಪಡೆದು ಜಯಗಳಿಸಿದ್ದರು. ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಅವರನ್ನು ಸ್ಪೀಕರ್ ಅನರ್ಹಗೊಳಿಸಿದ್ದರು.

17ರ ಪೈಕಿ 15 ಕ್ಷೇತ್ರಗಳಿಗೆ ಬೈ ಎಲೆಕ್ಷನ್ ಘೋಷಣೆ 
ರಾಜ್ಯದಲ್ಲಿ ಒಟ್ಟು 17 ಶಾಸಕರು ಅನರ್ಹರಾಗಿದ್ದರು, 17 ಕ್ಷೇತ್ರಗಳಲ್ಲಿಯೂ ಉಪಚುನಾವಣೆ ನಡೆಯುತ್ತದೆ ಎಂದು ನಿರೀಕ್ಷಿಸಲಾಗಿತ್ತು, ಆದರೆ 15 ಕ್ಷೇತ್ರಗಳಿಗೆ ಮಾತ್ರವೇ ಕೇಂದ್ರ ಚುನಾವಣೆ ಆಯೋಗ ಉಪಚುನಾವಣೆ ಘೋಷಣೆ ಮಾಡಿದ್ದು, ಇನ್ನುಳಿದ RR ನಗರ ಮತ್ತು ರಾಯಚೂರು ಜಿಲ್ಲೆಯ ಮಸ್ಕಿ ಕ್ಷೇತ್ರಗಳಿಗೆ ಉಪಚುನಾವಣೆ ಘೋಷಣೆ ಮಾಡಿಲ್ಲ.

RR ನಗರ & ಮಸ್ಕಿ ಕ್ಷೇತ್ರಗಳಿಗೇಕೆ ಬೈ ಎಲೆಕ್ಷನ್ ಇಲ್ಲ?
2018ರಲ್ಲಿ ರಾಜರಾಜೇಶ್ವರಿ ನಗರ ಕ್ಷೇತ್ರದಿಂದ ಕಾಂಗ್ರೆಸ್‌ನ ಮುನಿರತ್ನ ಗೆದ್ದಿದ್ದರು. ಆದರೆ ಚುನಾವಣೆ ಸಮಯದಲ್ಲಿ ಕ್ಷೇತ್ರದಲ್ಲಿ ನಕಲಿ ಮತದಾರರ ಪಟ್ಟಿ ಸಿಕ್ಕಿತ್ತು, ಈ ಬಗ್ಗೆ ಮುನಿರತ್ನ ವಿರುದ್ಧ ದೂರು ದಾಖಲಾಗಿತ್ತು. ಇತ್ತೀಚೆಗೆ ಮುನಿರತ್ನ ಹೆಸರು ಚಾರ್ಜ್‌ಶೀಟ್‌ನಿಂದ ಕೈಬಿಡಲಾಗಿತ್ತು. ಆದರೆ ಬಿಜೆಪಿಯ ತುಳಸಿ ಮುನಿರಾಜು ಗೌಡ ಮನವಿಯಂತೆ ಮುನಿರತ್ನ ವಿರುದ್ಧ ತನಿಖೆ ಜಾರಿಯಲ್ಲಿದೆ. ನಕಲಿ ಮತದಾರರ ಪಟ್ಟಿ ದೊರೆತ ಪ್ರಕರಣ ನ್ಯಾಯಾಲಯದಲ್ಲಿ ಇರುವ ಕಾರಣ ರಾಜರಾಜೇಶ್ವರಿ ನಗರ ಉಪಚುನಾವಣೆಗೆ ನ್ಯಾಯಾಲಯ ತಡೆ ನೀಡಿದೆ. 

ಇನ್ನು ಮಸ್ಕಿ ವಿಧಾನಸಭೆ ಕ್ಷೇತ್ರಕ್ಕೆ 2018 ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ನ ಪ್ರತಾಪ್ ಗೌಡ ಪಾಟೀಲ್ ಅವರು ಕೇವಲ 213 ಮತಗಳ ಅಂತರದಿಂದ ಅಷ್ಟೆ ಗೆದ್ದಿದ್ದರು. ಬಿಜೆಪಿಯ ಪರಾಜಿತ ಅಭ್ಯರ್ಥಿ ಆರ್.ಬಸವರಾಜು ಅವರು ನ್ಯಾಯಾಲಯದ ಮೆಟ್ಟಿಲೇರಿ ಚುನಾವಣೆಯಲ್ಲಿ ಅಕ್ರಮ ಮತದಾನ ನಡೆದಿದೆ ಎಂದು ಆರೋಪ ಕೇಳಿಬಂದಿದ್ದರಿಂದ ಪ್ರಕಣ ಕೋರ್ಟ್ ನಲ್ಲಿದೆ. ಈ ಹಿನ್ನೆಲಯಲ್ಲಿ ಈ ಎರಡು ಕ್ಷೇತ್ರಗಳಿಗೆ ಉಪಚುನಾವಣೆ ಘೋಷಣೆ ಮಾಡಿರಲಿಲ್ಲ.

ಉಪಚುನಾವಣೆ ನಡೆಯಲಿರುವ ಕ್ಷೇತ್ರಗಳು
1) ಚಿಕ್ಕಬಳ್ಳಾಪುರ 2) ಮಹಾಲಕ್ಷ್ಮಿ ಲೇಔಟ್ 3) ಹೊಸಕೋಟೆ 4) ಹುಣಸೂರು 5) ಗೋಕಾಕ 6) ಯಶವಂತಪುರ 7) ಅಥಣಿ 8) ಕಾಗವಾಡ 9) ಶಿವಾಜಿನಗರ 10) ಕೆ.ಆರ್.ಪೇಟೆ 11) ಕೆ.ಆರ್.ಪುರಂ 12) ಹಿರೇಕೆರೂರು 13) ರಾಣೆಬೆನ್ನೂರು 14) ವಿಜಯನಗರ 15) ಯಲ್ಲಾಪುರ.

ಮಹತ್ವದ ದಿನಾಂಕಗಳು
ನಾಮಪತ್ರ ಸಲ್ಲಿಕೆ ಅಧಿಸೂಚನೆ - ಸೆಪ್ಟೆಂಬರ್ 23
ನಾಮಪತ್ರ ಸಲ್ಲಿಕೆ ಅಂತ್ಯ - ಸೆಪ್ಟೆಂಬರ್ 30
ನಾಮಪತ್ರ ಪರಿಶೀಲನೆ - ಅಕ್ಟೋಬರ್ 1
ನಾಮಪತ್ರ ವಾಪಸ್: ಅಕ್ಟೋಬರ್.3
ಮತದಾನ ಅಕ್ಟೋಬರ್ 21
ಫಲಿತಾಂಶ ಅಕ್ಟೋಬರ್ 24