ಗಜಾನನ ಶರ್ಮ

ಮಲೆನಾಡಿನ ಇಂದಿನ ಸಂಕಷ್ಟಕಾಲದಲ್ಲಿ ಕರ್ನಲ್ ಮೆಗ್ಗಾನ್ ದಂಪತಿಗಳು ನೆನಪಾಗುತ್ತಿದ್ದಾರೆ.....

ಇಂದಿಗೆ ಸರಿಯಾಗಿ ಎಂಬತ್ತೇಳು ವರ್ಷಗಳ‌ ಹಿಂದೆ ( ಜನವರಿ ಹದಿನಾರು, 1932), ಅಂದಿನ ಮೈಸೂರು ಸಂಸ್ಥಾನದ ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ಶಿವಮೊಗ್ಗದಲ್ಲಿ ಬೃಹತ್ ಆಸ್ಪತ್ರೆಯೊಂದಕ್ಕೆ ಅಡಿಗಲ್ಲಿಟ್ಟು ಅದಕ್ಕೆ ಕರ್ನಲ್ ಮೆಕ್ ಗಾನ್ ಹೆಸರಿಡಲು ಸೂಚಿಸುತ್ತಾರೆ. ಯಾಕೆ, ನಮ್ಮ ರಾಜರು ನಮ್ಮ ಸಂಸ್ಥಾನದಲ್ಲಿ ನಮ್ಮ ಜನರಿಗಾಗಿ ಸ್ಥಾಪಿಸುವ ಆಸ್ಪತ್ರೆ ಆ ವಿದೇಶೀಯನ ಹೆಸರು? ಯಾರೂ ಪ್ರಶ್ನಿಸಲಿಲ್ಲ. ಯಾಕೆಂದರೆ ಅದಕ್ಕೆ ಕಾರಣವಿತ್ತು. ಇಡೀ ಮಲೆನಾಡಿಗೆ ಕರ್ನಲ್ ಮೆಗ್ಗಾನ್ ದಂಪತಿಗಳ ಋಣಭಾರವಿತ್ತು.‌ ಅವರು ಗೈದ ಸೇವೆಯ ನೆನಪಿತ್ತು. ಹಾಗಾಗಿಯೇ ಶಿವಮೊಗ್ಗ ಜಿಲ್ಲಾಸ್ಪತ್ರೆ ಮೆಗ್ಗಾನ್ ಆಸ್ಪತ್ರೆಯಾಯಿತು.

ಆ ಮಹನೀಯರ ಪೂರ್ಣ ಹೆಸರು ಕರ್ನಲ್ ಟಿ ಜಿ ಮೆಕ್ ಗಾನ್ (colonel T G McGann). 1842 ರಲ್ಲಿ ಇಂಗ್ಲೆಂಡಿನಲ್ಲಿ ಹುಟ್ಟಿ, ವೈದ್ಯಕೀಯ ಶಿಕ್ಷಣ ಮುಗಿಸಿ ವೈದ್ಯರಾಗಿ ಭಾರತಕ್ಕೆ ಬಂದ ಕರ್ನಲ್ ಮೆಕ್ ಗಾನ್ ಅಂದಿನ ಮೈಸೂರು ಸಂಸ್ಥಾನದಲ್ಲಿ ವೈದ್ಯರಾಗಿ ಸೇವೆ ಸಲ್ಲಿಸತೊಡಗುತ್ತಾರೆ. ಅವರಿಗೆ ಮೊದಲು ತಮ್ಮ ಸೇವೆ ಸಲ್ಲಿಸಲು ದೊರೆತ ಸ್ಥಳ ಶಿವಮೊಗ್ಗ. ಅಲ್ಲಿ ಮೂರು ದಶಕಗಳಿಗೂ ಹೆಚ್ಚುಕಾಲ ಅವರು ತೀವ್ರಶ್ರದ್ಧೆ ಮತ್ತು ಅಪಾರ ಕರುಣೆಯಿಂದ ಮಲೆನಾಡಿನ ಬಡರೋಗಿಗಳ ಸೇವೆ ಮಾಡುತ್ತಾರೆ. 

ಅದು ಮಲೆನಾಡಿನ ಬದುಕು ಅಸಹನೀಯವಾಗಿದ್ದ ಕಾಲ. ವರ್ಷದ ಆರು ತಿಂಗಳು ಮಳೆ, ರಸ್ತೆ ಸೇತುವೆ ಸಂಪರ್ಕ ವಾಹನ ಸೌಲಭ್ಯಗಳಿಲ್ಲದ ಹಳ್ಳಿಗಾಡುಗಳು, ಕವಿದುಕೊಂಡ ಅರಣ್ಯ, ಕ್ರಿಮಿಕೀಟ ಕಾಡುಪ್ರಾಣಿಗಳ ಕಾಟ, ಮಾರಣಾಂತಿಕ ಸಾಂಕ್ರಾಮಿಕ ರೋಗಗಳ ಉಪಟಳ, ವೈದ್ಯಕೀಯ ಸೌಲಭ್ಯಗಳ ತೀವ್ರ ಕೊರತೆ, ಮೂಢನಂಬಿಕೆ, ಅನಕ್ಷರತೆ ಇವೆಲ್ಲವುಗಳ ನಡುವೆ ಕಾಡುವ ಹಸಿ ಹಸಿ ಬಡತನ. ಆದರೆ ಕರ್ನಲ್ ಮೆಗ್ಗಾನ್ ಇದ್ಯಾವುದಕ್ಕೂ ಮಹತ್ವ ಕೊಡದೆ ನಿರ್ವಂಚನೆಯಿಂದ ಮಲೆನಾಡಿನ ಮುಗ್ಧ ರೋಗಿಗಳ ಸೇವೆ ಮಾಡಿದರು. ತಾನೊಬ್ಬ ವಿದೇಶೀ ವೈದ್ಯ ಎಂಬುದನ್ನು ಮರೆತು ತಮ್ಮ ಶ್ರೀಮತಿಯವರನ್ನೂ ಜೊತೆಗೂಡಿಸಿಕೊಂಡು ಮಲೆನಾಡಿನ ರೋಗಿಗಳ ಸೇವೆಗೈದರು.

ಅವರಿಗೆ 1885 ರಲ್ಲಿ ರಾಜ್ಯದ ಸೀನಿಯರ್ ಸರ್ಜನ್ ಆಗಿ ಪದೋನ್ನತಿ ನೀಡಲ್ಪಟ್ಟಿತು. ಆಗಲೂ ಅವರು ಶಿವಮೊಗ್ಗೆಯನ್ನು ಮರೆಯಲಿಲ್ಲ. ಮಲೆನಾಡಿಗರ ಸೇವೆಯನ್ನು ನಿಲ್ಲಿಸಲಿಲ್ಲ. ತಮ್ಮ ಕುಟುಂಬವನ್ನು ಮೈಸೂರಿನಲ್ಲೇ ಬಿಟ್ಟು ಅವರು ಹೆಚ್ಚುಕಾಲ ಶಿವಮೊಗ್ಗೆಯಲ್ಲೇ ಉಳಿದು ಮಲೇರಿಯಾ ಮತ್ತು ಕಾಲರಾಗಳಿಂದ ಬಳಲುತ್ತಿದ್ದ ಸಾವಿರಾರು ಜನರನ್ನು ರಕ್ಷಿಸಿದರು. ಮೈಸೂರಿನಲ್ಲಿ ಅವರ ಶ್ರೀಮತಿ ಆಗಿನ ರೀಜೆಂಟ್ ಆಗಿದ್ದ ಕೆಂಪುನಂಜಮ್ಮಣ್ಣಿಯವರ ನೆಚ್ಚಿನ ಒಡನಾಡಿಯಾದರು.

ಅವರಿಬ್ಬರ ನಡುವೆ ಆತ್ಮೀಯ ಸ್ನೇಹ ಹರಳುಗಟ್ಟಿತು. ತಾವು ಸೀನಿಯರ್ ಸರ್ಜನ್ ಆಗಿದ್ದ 1885ರಿಂದ 1895 ರವರೆಗಿನ ಅವಧಿಯಲ್ಲಿ ಕರ್ನಲ್ ಮೆಗ್ಗಾನ್ ಮೈಸೂರು ರಾಜ್ಯದ ಆರೋಗ್ಯ ಇಲಾಖೆಯನ್ನು ಕಟ್ಟಿ ಬೆಳಸಿದರು. ಅದಕ್ಕೊಂದು ಕಾಯಕಲ್ಪ ಒದಗಿಸಿದರು. 1895 ರಲ್ಲಿ ಅವರನ್ನು ಅಧಿಕೃತವಾಗಿ ಮೈಸೂರು ರಾಜರ ಮತ್ತು ರಾಜಕುಟುಂಬದ ವೈದ್ಯರಾಗಿ ನೇಮಕ ಮಾಡಲಾಯಿತು.

ಅದು ರಾಜ್ಯದ ಆರೋಗ್ಯ ಕ್ಷೇತ್ರ ಸಂಪೂರ್ಣ ಹದಗೆಟ್ಟಿದ್ದ ಕಾಲ. ಸಾಮಾಜಿಕ ಬದುಕಿನಲ್ಲಿ ನೈರ್ಮಲ್ಯ ನಿರ್ಲಕ್ಷಿತಗೊಂಡಿದ್ದ ಅವಧಿ. ಆ ಅವಧಿಯಲ್ಲಿ ಕರ್ನಲ್ ಮೆಗ್ಗಾನ್ ಮಹಾರಾಜರಿಗೆ ರಾಜ್ಯದ ಪ್ರಜೆಗಳ ಆರೋಗ್ಯ ಮತ್ತು ನೈರ್ಮಲ್ಯ ರಕ್ಷಣೆಯ ಕುರಿತು ಪ್ರಭಾವ ಬೀರುತ್ತಾರೆ.ಅದು ಬಿ ಎಲ್ ರೈಸ್ ರವರ ಮೈಸೂರು ಗೆಜೆಟೀರಿನಲ್ಲಿ ಹೀಗೆ ಉಲ್ಲೇಖಿಸಲ್ಪಟ್ಟಿದೆ.

But surgeon colonel McGann, the head of the Medical Department, impresses upon the government.
“ the importance of improving village sanitation.Every advance in that direction, in the way of improving and conserving the water- supply, and promoting general cleanliness, by preventing the storage of manure in the back-yards of houses,and preventing, as far as possible,the defilement of the ground in and immediately around towns and villages would be a distinct gain,would improve the general health of the people,diminish their liability to fevers,bowel complaints and cholera, and tend to check the spread of the last- named disease on its occurance amongst them”.
In order to reduce the mortality from smallpox he strogly urges the introduction of compulsory vaccination Act as the only effectual course. 

ಹೀಗೆ ಆರೋಗ್ಯ ಇಲಾಖೆಯ ಮುಖ್ಯಸ್ಥರಾಗಿ ಮೆಗ್ಗಾನರು ಹಳ್ಳಿಗರಿಗೆ ಕಲುಷಿತ ನೀರು ಸೇವಿಸದಂತೆ, ಮನೆಯ ಹಿಂದೆ ಗೊಬ್ಬರ ಸಂಗ್ರಹಿಸದಂತೆ, ಮನೆಯ ಸುತ್ತ ಮುತ್ತ ಪರಿಶುದ್ದತೆ ಕಾಪಾಡಿಕೊಂಡು ಅಂಟುಜಾಡ್ಯಗಳಿಂದ ಮುಕ್ತರಾಗಲು ಕಡ್ಡಾಯ ಚುಚ್ಚುಮದ್ದು ಪಡೆಯುವಂತೆ ಒತ್ತಾಯಿಸುವ ಕಾಯ್ದೆ ಜಾರಿಗೊಳಿಸಲು ಒತ್ತಡ ಹೇರುತ್ತಿದ್ದರೆ, ಶ್ರೀಮತಿ ಮೆಗ್ಗಾನರು ರೀಜೆಂಟರಿಗೆ ಅರಮನೆಯೊಳಗೆ ರಾಜಕುಟುಂಬದ ಹೆಂಗಸರ ನಡುವೆ ವ್ಯಾಪಿಸಿದ್ದ ಮುಟ್ಟು ಮೈಲಿಗೆ, ಮಡಿ ಹುಡಿಗಳ ಕಂದಾಚಾರದ ಕುರಿತು ಜಾಗ್ರತೆ ಮೂಡಿಸುತ್ತ, ಅವರ ದೈನಂದಿನ ಬದುಕಿಗೆ ಒಂದಿಷ್ಟು ಆಧುನಿಕತೆಯನ್ನು ತುಂಬಲು ಯತ್ನಿಸುತ್ತಿದ್ದರು.

1905 ರಲ್ಲಿ ಅಂದಿನ ಮಹಾರಾಜ ನಾಲ್ವಡಿ ಕೃಷ್ಣರಾಜ್ ಒಡೆಯರ್ ಕರ್ನಲ್ ಮೆಗ್ಗಾನರನ್ನು ದರ್ಬಾರು ವೈದ್ಯರಾಗಿ ಅಧಿಕೃತವಾಗಿ ಘೋಷಿಸುತ್ತಾರೆ. ಇಷ್ಟುಹೊತ್ತಿಗೆ ಮಹಾರಾಜರ ಕುಟುಂಬಕ್ಕೂ ಮೆಗ್ಗಾನರ ಕುಟುಂಬಕ್ಕೂ ಅಪಾರ ಅನ್ಯೋನ್ಯತೆ ಬೆಳೆದಿರುತ್ತದೆ. ಅದರಲ್ಲೂ ರಾಜಮಾತೆಯವರಿಗೂ ಶ್ರೀಮತಿ ಮೆಗ್ಗಾನರಿಗೂ ಅತ್ಯಂತ ನಿಕಟ ಸ್ನೇಹ ಏರ್ಪಟ್ಟಿರುತ್ತದೆ. 

1906 ರಲ್ಲಿ ಮೆಗ್ಗಾನರು ಸೇವೆಯಿಂದ ನಿವೃತ್ತರಾಗುತ್ತಾರೆ. ಅನಿವಾರ್ಯವಾಗಿ ಅವರು ತಮ್ಮ ದೇಶಕ್ಕೆ ಹಿಂದಿರುಗಲೇ ಬೇಕಾಗುತ್ತದೆ. ನಾಲ್ಕು ದಶಕಗಳಿಗೂ ಹೆಚ್ಚುಕಾಲ ಕನ್ನಡದ ಮಣ್ಣನ್ನು ತಮ್ಮ ಮಾತೃಭೂಮಿಯಷ್ಟೇ ಪ್ರೀತಿಸಿ ಜನಸೇವೆಯಲ್ಲೇ ಮುಳುಗಿ ಬದುಕಿದ್ದ ಮೆಗ್ಗಾನ್ ದಂಪತಿಗಳು ತಮ್ಮ ಏಕಮಾತ್ರ ಪುತ್ರಿ ಇರ್ವಿನ್ ಜೊತೆ ಇಂಗ್ಲೆಂಡಿಗೆ ಮರಳುತ್ತಾರೆ.

1908ರಲ್ಲಿ ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ಕೆಲವು ತಿಂಗಳುಗಳ ಕಾಲ ತಮ್ಮ ಆತಿಥ್ಯ ಸ್ವೀಕರಿಸಲು ಮೈಸೂರಿಗೆ ಆಗಮಿಸುವಂತೆ ಮೆಗ್ಗಾನ್ ಕುಟುಂಬವನ್ನು ಆಹ್ವಾನಿಸುತ್ತಾರೆ. ಆ ಪ್ರಸಂಗ ಮೈಸೂರು ಸಂಸ್ಥಾನದ ದಿವಾನರಾಗಿದ್ದ ಸರ್ ಮಿರ್ಜಾ ಇಸ್ಮಾಯಿಲ್ಲರ ವೃತ್ತಿಬದುಕಿನ ಆತ್ಮಕತೆ “ ಮೈ ಪಬ್ಲಿಕ್ ಲೈಫ್” ನಲ್ಲಿ ಸೊಗಸಾಗಿ ನಿರೂಪಿಸಲ್ಪಟ್ಟಿದೆ. ಅದರ ಕನ್ನಡ ಅನುವಾದ ಹೀಗಿದೆ;

ನಾನು ಅತ್ಯಂತ ಗೌರವದಿಂದ ಕಾಣುವ ಇಬ್ಬರು ಸ್ನೇಹಿತರೆಂದರೆ, ಕರ್ನಲ್ ಮೆಗ್ಗಾನ್ ಮತ್ತು ಅವರ ಶ್ರೀಮತಿಯವರು. ಅವರು ಮಹಾರಾಜರು ಮತ್ತು ಅವರ ದಿವಂಗತ ಮಾತೃಶ್ರೀಯವರಿಗೆ ಅವರು ಅತ್ಯಂತ ಪ್ರೀತಿಪಾತ್ರರು. ಶ್ರೀಮತಿ ಮೆಗ್ಗಾನರು ದಿವಂಗತ ರಾಜಮಾತೆಯವರ ಜೀವದ ಗೆಳತಿಯಾಗಿದ್ದವರು ಮತ್ತು ಇಬ್ಬರೂ ಪರಸ್ಪರ ಗೌರವಾದರ ಹೊಂದಿದ್ದವರು. ಕರ್ನಲ್ ಮೆಗ್ಗಾನ್ ಭಾರತೀಯ ವೈದ್ಯಕೀಯ ಸೇವೆಯಲ್ಲಿದ್ದವರು ಮತ್ತು ಅವರು ತಮ್ಮ ವೃತ್ತಿಜೀವನವನ್ನು ಮೈಸೂರಿನಲ್ಲಿ‌ ಆರಂಭಿಸಿದವರು.

ಅವರು ಸಂಸ್ಥಾನದ ಮುಖ್ಯ ವೈದ್ಯಾಧಿಕಾರಿಯ ಹಂತಕ್ಕೇರಿದ್ದಲ್ಲದೆ ರಾಜ್ಯದಲ್ಲಿ ವೈದ್ಯಕೀಯ ಇಲಾಖೆಯನ್ನು ಕಟ್ಟಿಬೆಳೆಸಿದವರು. ಅವರು ತಮ್ಮ ನಿವೃತ್ತಿಯ ನಂತರ ತಮ್ಮ ತಾಯ್ನಾಡು ಇಂಗ್ಲೆಂಡಿಗೆ ಮರಳಿ ಅಲ್ಲೇ ಉಳಿದುಕೊಳ್ಳುತ್ತಾರೆ. 1908 ರ ಸುಮಾರಿಗೆ ಮಹಾರಾಜರು ಮೆಗ್ಗಾನ್ ದಂಪತಿಗಳನ್ನು ಕೆಲವು ತಿಂಗಳುಗಳ ಮಟ್ಟಿಗೆ ರಾಜ್ಯಕ್ಕೆ ಆಗಮಿಸಿ ತಮ್ಮ ಮತ್ತು ತಮ್ಮ ತಾಯಿಯವರ ಆತಿಥ್ಯ ಸ್ವೀಕರಿಸಬೇಕೆಂದು ಆಹ್ವಾನಿಸುತ್ತಾರೆ. ಆದರೆ ಆತಿಥ್ಯದ ಆ ತಿಂಗಳುಗಳು ಹಲವು ವರ್ಷಗಳಾಗಿ ವಿಸ್ತರಿಸುತ್ತವೆ. ಯಾಕೆಂದರೆ ಮಹಾರಾಜರ ಕುಟುಂಬಕ್ಕಾಗಲೀ ಕರ್ನಲ್ ಮೆಗ್ಗಾನರ ಕುಟುಂಬಕ್ಕಾಗಲೀ ಒಬ್ಬರನ್ನೊಬ್ಬರು ಅಗಲುವುದಕ್ಕೆ ಮನಸ್ಸಿರಲಿಲ್ಲ. ಕೊನೆಗೂ ಅವರನ್ನು ಅಗಲಿಸಿದ್ದು ಸಾವು.

ಶ್ರೀಮತಿ ಮೆಗ್ಗಾನ್ ಒಂದು ಬಗೆಯ ವಿಶಿಷ್ಟ ವ್ಯಕ್ತಿತ್ವವುಳ್ಳವರಾಗಿದ್ದರು. ಅವರು ಆತ್ಮೀಯ ಸ್ನೇಹಕ್ಕೆ ಅತಿ ಹೆಚ್ಚು ಮಹತ್ವ ನೀಡುವವರಾಗಿದ್ದು ತಮ್ಮ ವಿವೇಚನೆ ಮತ್ತು ದಯಾಪರತೆಯಿಂದ ಯಾರೂ ಇಷ್ಟ ಪಡುವ ಸ್ವಭಾವದವರಾಗಿದ್ದರು. ಬಹುದೀರ್ಘ ಕಾಲ ರಾಜಪರಿವಾರ ಅವರ ಪ್ರೀತಿಯನ್ನು ಮಾತ್ರವಲ್ಲದೆ ಅವರ ಸಲಹೆಯನ್ನೂ ಅತ್ಯಂತ ಗೌರವಭಾವದಿಂದ ಸ್ವೀಕರಿಸುತ್ತಿತ್ತು. ಅವರು ಒಬ್ಬ ಅತ್ಯುತ್ತಮ ಆಪ್ತ ಸಲಹೆಗಾರ್ತಿಯಾಗಿದ್ದರು. ಕರ್ನಲ್ ಮೆಗ್ಗಾನ್ ತಮ್ಮ ತೊಂಬತ್ನಾಲ್ಕನೆಯ ವಯಸ್ಸಿನಲ್ಲಿ ಅಂದರೆ 1936ರಲ್ಲಿ ತೀರಿಕೊಂಡರೆ ಅವರ ಶ್ರೀಮತಿ 1941 ರಲ್ಲಿ ಅಂದರೆ ತಮ್ಮ 84ನೆಯ ವಯಸ್ಸಿನಲ್ಲಿ ತೀರಿಕೊಂಡರು.

ಮಹಾರಾಜರು ಮತ್ತು ರಾಜಮಾತೆಯವರಿಬ್ಬರೂ ಆಗಲೇ ಅವರನ್ನಗಲಿಯಾಗಿತ್ತು. ಅವರ ಮರಣದ ಸಂದರ್ಭದಲ್ಲಿ ನಾನು ದೆಹಲಿಯಲ್ಲಿದ್ದುದರಿಂದ ಅವರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲಾಗಲಿಲ್ಲ. ಅವರು ನನಗೆ ತಾಯಿಯಂತಿದ್ದರು. ಅವರ ಮಗಳು ಶ್ರೀಮತಿ ಇರ್ವಿನ್ ಈಗಲೂ ಕೂಡ ಮೈಸೂರಿನಲ್ಲೇ ಇದ್ದಾರೆ ಮತ್ತು ನನ್ನನ್ನು ತಮ್ಮ ಎರಡನೇ ಮಗನಂತೆ ಎಂದು ಹೇಳುತ್ತಿರುತ್ತಾರೆ. ರಾಜಪರಿವಾರದೊಡನಿದ್ದ ಅವರ ಸ್ನೇಹ ಮತ್ತು ಈ‌ ಮಣ್ಣಿಗೆ ಅವರು ಸಲ್ಲಿಸಿದ ಸೇವೆಯ ಕುರುಹಾಗಿ ಮಹಾರಾಜರು ಶಿವಮೊಗ್ಗದಲ್ಲಿ ಸಂಸ್ಥಾನ ನಿರ್ಮಿಸಿದ ಆಸ್ಪತ್ರೆಗೆ ಕರ್ನಲ್ ಮೆಗ್ಗಾನರ ಹೆಸರನ್ನೇ ಇಟ್ಟು ಆ ಮಾನವತಾ ಮೂರ್ತಿಗೆ ಅರ್ಹ ಗೌರವ ಸಲ್ಲಿಸಿದ್ದಾರೆ” 

ಮದ್ದು ನೀಡುತ್ತಿದ್ದ ವೈದ್ಯರಿಗೆ ಬಂತು ಮಂಗನ ಕಾಯಿಲೆ

ಹೌದು, 1932 ರ ಜನವರಿ ಹದಿನಾರರಂದು ಶಿವಮೊಗ್ಗದ ಆಸ್ಪತ್ರೆಗೆ ಅಡಿಗಲ್ಲಿಟ್ಟ ಮಹಾರಾಜ ಕೃಷ್ಣರಾಜ ಒಡೆಯರ್ ಅವರ ಗುಣಗಾನಗೈದಿದ್ದನ್ನು ಮಲೆನಾಡು ಎಂದಿಗೂ ಮರೆಯುವುದಿಲ್ಲ, ಮರೆಯುವಂತೆಯೂ ಇಲ್ಲ. ಆಗಿನ ಆರೋಗ್ಯ ಇಲಾಖೆಯ ಪರಿಸ್ಥಿತಿ ಹೇಗಿತ್ತು ಗೊತ್ತೇ. ಅದಕ್ಕೂ ಮೆಗ್ಗಾನರದೇ ಉದಾಹರಣೆಯಿದೆ.

ಕರ್ನಲ್ ಮೆಗ್ಗಾನರು ಸೀನಿಯರ್ ಸರ್ಜನ್ ಆಗಿದ್ದ ಕಾಲದಲ್ಲಿ ನಡೆದ ಒಂದು ಘಟನೆ ಅತ್ಯಂತ ರೋಚಕವಾಗಿದೆ.
1889ರ ದಸರಾ ಪ್ರಜಾಪ್ರತಿನಿಧಿ ಸಭೆಯಲ್ಲಿ ಕೆಲವು ಸದಸ್ಯರು ರಾಜ್ಯದ ಪ್ರತಿ ತಾಲ್ಲೋಕಿಗೆ ಕನಿಷ್ಟ ಒಬ್ಬ ಸೂಲಗಿತ್ತಿ (ಮಿಡ್ ವೈವ್ಸ್ )ಯನ್ನಾದರೂ ನೇಮಕ ಮಾಡಲು ಒತ್ತಾಯಿಸುತ್ತಾರೆ. (ತಾಲೋಕಿಗೊಬ್ಬ ವೈದ್ಯರಲ್ಲ! ಸೂಲಗಿತ್ತಿ!ಊಹಿಸಿಕೊಳ್ಳಿ ಅಂದಿನ ಪರಿಸ್ಥಿತಿ. ) ಆದರೆ ಆ ಬೇಡಿಕೆ ಸೀನಿಯರ್ ಸರ್ಜನ್ ಮೆಗ್ಗಾನರಿಗೆ ತಲೆಬೇನೆಗೆ ತರುತ್ತದೆ. ಯಾಕೆಂದರೆ ಆಗ ಮಿಡ್ ವೈವ್ಸ್ ನೇಮಕವೆಂಬುದು ಕಡುಕಷ್ಟದ ಕೆಲಸವಾಗಿತ್ತು. ಆ ಕಾಲದಲ್ಲಿ ಸೂಲಗಿತ್ತಿಯರಿಗೆ ತರಬೇತಿ ಕೊಡಲು ಮದ್ರಾಸಿಗೆ ಕಳುಹಿಸಬೇಕಿರುತ್ತದೆ. ತರಬೇತಿಯ ಸಂದರ್ಭದಲ್ಲಿ ತಿಂಗಳಿಗೆ ಹತ್ತು ರೂಪಾಯಿ ಸ್ಕಾಲರ್ ಶಿಪ್ ಕೊಡುತ್ತೇವೆ ಮತ್ತು ಅದು ಮುಗಿಯುತ್ತಿದ್ದಂತೆ ಮಾಸಿಕ ಇಪ್ಪತ್ತು ರುಪಾಯಿ ವೇತನ ಶ್ರೇಣಿಯ ಉದ್ಯೋಗ ನೀಡುತ್ತೇವೆ ಎಂದರೂ ಯಾರೂ ಮುಂದೆ ಬರುತ್ತಿರಲಿಲ್ಲ. (ಆಗ ಹತ್ತು ರುಪಾಯಿ ಎಂಬುದು ಬಹುದೊಡ್ಡ ಮೊತ್ತ)

ಸರಿ, ಮತ್ತೆ ಸ್ಕಾಲರ್ಶಿಪ್ ಮಾಸಿಕ ಹದಿನೈದು ರುಪಾಯಿಗೇರಿಸಿ 1891ರಲ್ಲಿ ಮಿಡ್ ವೈವ್ಸ್ ತರಬೇತಿಗೆ ಕರೆಯಲಾಗುತ್ತದೆ. ಆಗಲೂ ಯಾರೂ ಮುಂದೆ ಬರುವುದಿಲ್ಲ. ಅದು ಮುಟ್ಟು ಮೈಲಿಗೆ ಕಂದಾಚಾರಗಳ ಕಾಲ. ಶ್ರೇಣೀಕೃತ ಜಾತಿ ವ್ಯವಸ್ಥೆಯಲ್ಲಿ ಯಾವ ಜಾತಿಯವರೂ ತಮಗಿಂತ ಕನಿಷ್ಟ ಜಾತಿಯವರ ಪ್ರಸವ ಮಾಡಿಸಲು ಒಪ್ಪುತ್ತಿರಲಿಲ್ಲ. ಹಾಗಾಗಿ ಯಾವ ಹಿಂದೂ ಮತ್ತು ಮುಸ್ಲಿಂ ಮಹಿಳೆಯರೂ ಮುಂದೆ ಬರದಿದ್ದಾಗ ಉಳಿದಿದ್ದು ಬರೀ ಕ್ರಿಶ್ಚಿಯನ್ನರು ಮಾತ್ರ. ತರಬೇತಿಗೆ ಆಯ್ಕೆಯಾಗಲು ಇದ್ದ ಒಂದೇ ಒಂದು ಕರಾರು, ಕನ್ನಡ ಅಥವಾ ತಮಿಳನ್ನು ಕನಿಷ್ಟ ಓದಲು ಬರಬೇಕಿತ್ತು. 

ಆ ಕಾಲಘಟ್ಟದಲ್ಲಿ ಅಬ್ದುಲ್ ರಹಮಾನ್ ಎಂಬುವವರು ಶಿವಮೊಗ್ಗದ ಜಿಲ್ಲಾಧಿಕಾರಿ. ಇನ್ನು ಸೀನಿಯರ್ ಸರ್ಜನ್ ಮೆಗ್ಗಾನರಿಗಂತೂ ಶಿವಮೊಗ್ಗ ತವರು ಮನೆಯಂತೆ. ಹಾಗಾಗಿ ಇಬ್ಬರೂ ಸೇರಿ ಶಿವಮೊಗ್ಗದ ನಥಾಲಿಯಾ ಡಿಕಾಸ್ಟ್ ಎಂಬ ಮೂವತ್ತೆಂಟು ವರ್ಷದ ಒಬ್ಬಳು ಮಹಿಳೆ ಮತ್ತು ಹತ್ತೊಂಬತ್ತು ವರ್ಷದ ಆಕೆಯ ಮಗಳು ಅನ್ನಾ ಮಾರಿಯಾ ಎಂಬ ಯುವತಿಯಲ್ಲದೇ, ಇನ್ನೊಬ್ಬಳು ಸಬೀನಾ ಡಿಸೋಸಾ ಮುಂತಾಗಿ ನಾಲ್ಕೈದು ಮಹಿಳೆಯರನ್ನು ಕಷ್ಟಪಟ್ಟು ತರಬೇತಿಗೆ ಹೋಗಲು ಒಪ್ಪಿಸುತ್ತಾರೆ. 

ಮುಂದೆಯೂ ಬಹಳ ಕಾಲ ಹಿಂದೂ ಮತ್ತು ಮುಸ್ಲಿಂ ಮಹಿಳೆಯರು ಈ ಕೆಲಸಕ್ಕೆ ಮುಂದೆ ಬರುವುದಿಲ್ಲ. ಇಡೀ ರಾಜ್ಯದ ಬೇರೆ ಬೇರೆ ಸ್ಥಳಗಳಲ್ಲಿ ಹೆಣ್ಣುಮಕ್ಕಳಿಗೆ ಜಾಗೃತಿ ಮೂಡಿಸುವ ಪ್ರಯತ್ನ ನಿರಂತರವಾಗಿ ನಡೆಯುತ್ತದೆ. ಇದೆಲ್ಲದರ ಪರಿಣಾಮವಾಗಿ ಹತ್ತೊಂಬತ್ತನೇ ಶತಮಾನದ ಅಂತ್ಯದ ವೇಳೆಗೆ ಸುಮಾರು ಇಪ್ಪತ್ತು ಬ್ರಾಹ್ಮಣ ಹುಡುಗಿಯರೂ ಸೇರಿದಂತೆ ಹಲವು ಹಿಂದೂ ಮತ್ತು ಮುಸ್ಲಿಂ ಹೆಣ್ಣುಮಕ್ಕಳು ಮಿಡ್ ವೈವ್ಸ್ ಕೆಲಸಕ್ಕೆ ಸೇರಲು ತರಬೇತಿಗೆ ಹೋಗಲು ಸಿದ್ದರಾಗುತ್ತಾರೆ. ಇದು ಕರ್ನಲ್ ಮೆಗ್ಗಾನರಂತಹ ಮಹನೀಯರು ಸೃಷ್ಟಿಸಿದ ಜಾಗೃತಿಯ ಪರಿಣಾಮ ಎಂದರೆ ಅತಿಶಯೋಕ್ತಿಯಲ್ಲ.

ಮಂಗನ ಕಾಯಿಲೆಯಂತಹ ಹೊಸ ಹೊಸ ಕಾಯಿಲೆಗಳಿಗೆ ಸಿಕ್ಕು ಇಡೀ ಮಲೆನಾಡು ಬಾಡಿ ಬಸವಳಿಯುತ್ತಿರುವ ಈ ಸಂದರ್ಭದಲ್ಲಿ ಅದೇಕೋ ಮೆಗ್ಗಾನ್ ದಂಪತಿಗಳು ಮತ್ತೆ ಮತ್ತೆ ನೆನಪಾಗುತ್ತಿದ್ದಾರೆ. ಜಾತಿ ಮತ, ವರ್ಗ ಲಿಂಗಗಳ ಬೇಧವಿಲ್ಲದೇ ದೂರ ದೂರದ ಹಳ್ಳಿಗಳಿಗೆ ಹೋಗಿ ಮಲೇರಿಯಾ, ಕಾಲರಾ ರೋಗಗಳ ವಿರುದ್ದ ಮುಗ್ಧ ಗ್ರಾಮೀಣರ ಸೇವೆ ಮಾಡುತ್ತಿದ್ದ ಆ ದಂಪತಿಗಳನ್ನು ಕನಿಷ್ಟ ನೆನಪಾದರೂ ಮಾಡಿಕೊಳ್ಳದಿದ್ದರೆ ನಾವು ಕೃತಘ್ನರಾಗುವುದಿಲ್ಲವೇ? ಇಂದು ಯಾರಿದ್ದಾರೆ ಅವರಂತೆ ಸೇವೆಗೈಯ್ಯುವವರು?