ಸಂಚಾರ ನಿಯಮ ಉಲ್ಲಂಘಿಸಿದವರಿಗೆ ಖಾಕಿ ಪಾಠ | ಉಲ್ಲಂಘನೆಯಿಂದಾಗುವ ಅನಾಹುತಗಳ ಅರಿವು 

ಬೆಂಗಳೂರು: ನೀವು ಸಂಚಾರ ನಿಯಮ ಉಲ್ಲಂಘಿಸುತ್ತೀರಾ?. ಆದರೆ, ನಿಮಗೆ ಪೊಲೀಸರು ದಂಡ ವಿಧಿಸದೆ ಸಂಚಾರ ಶಿಸ್ತಿನ ಬಗ್ಗೆ ವಿಡಿಯೋ ತೋರಿಸಿದರೆ ಹೇಗೆ...! ರಾಜಧಾನಿ ನಾಗರಿಕರೇ ಅಚ್ಚರಿಯಾಯಿತೇ. ಹೌದು ಸಂಚಾರ ನಿಯಮಗಳ ಪಾಲನೆ ಕುರಿತು ಅರಿವು ಮೂಡಿಸಲು ಯತ್ನಿಸುತ್ತಿರುವ ಸಂಚಾರ ವಿಭಾಗದ ಪೊಲೀಸರು, ಈಗ ಇಂತಹ ದೊಂದು ವಿನೂತನ ಕಾರ್ಯಕ್ರಮ ಜಾರಿಗೆ ಮುಂದಾಗಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಈಗಾಗಲೇ ಈ ಕಾರ್ಯಕ್ರಮವು ಶುಕ್ರವಾರದಿಂದ ಕೋರಮಂಗಲ ಫೋರಂ ಮಾಲ್ ಆವರಣದಲ್ಲಿ ಪ್ರಾಯೋಗಿಕವಾಗಿ ಜಾರಿಗೆ ಬಂದಿದ್ದು, ಇದಕ್ಕೆ ಸಾರ್ವಜನಿಕರ ಪ್ರತಿಕ್ರಿಯೆ ಗಮನಿಸಿ ಮುಂದಿನ ಹಂತಗಳಲ್ಲಿ ನಗರ ವ್ಯಾಪ್ತಿ ವಿಸ್ತರಣೆಗೆ ಅಧಿಕಾರಿಗಳು ನಿರ್ಧರಿಸಿದ್ದಾರೆ.

ಈ ಸಂಬಂಧ ‘ಕನ್ನಡಪ್ರಭ’ ಜತೆ ಮಾತನಾಡಿದ ಹೆಚ್ಚುವರಿ ಪೊಲೀಸ್ ಆಯುಕ್ತ (ಸಂಚಾರ) ಆರ್.ಹಿತೇಂದ್ರ ಅವರು, ಸಾರ್ವಜನಿಕ ಹಾಗೂ ಖಾಸಗಿ ಸ್ಥಳಗಳ ಲಭ್ಯತೆ ಆಧಾರದ ಮೇರೆಗೆ ವಿಡಿಯೋ ಪ್ರದರ್ಶನ ವ್ಯವಸ್ಥೆ ಕಲ್ಪಿಸಲಾಗುತ್ತದೆ. ನಮಗೆ ದಂಡ ಸಂಗ್ರಹಕ್ಕಿಂತ ಜನರಿಗೆ ಸಂಚಾರ ನೀತಿ ರಿವಾಜುಗಳ ಕುರಿತು ಜಾಗೃತಿ ಮೂಡಿಸುವುದು ಆಶಯವಾಗಿದೆ ಎಂದರು.

ಪ್ರಮುಖ ಜಂಕ್ಷನ್ ಅಥವಾ ರಸ್ತೆಗಳಲ್ಲಿ ವಾಹನ ತಪಾಸಣೆ ನಡೆಸುವ ಪೊಲೀಸರು, ಆ ವೇಳೆ ಸಂಚಾರ ನಿಯಮ ಉಲ್ಲಂಘಿಸಿದವರನ್ನು ವಶಕ್ಕೆ ಪಡೆಯುತ್ತಾರೆ. ಬಳಿಕ ಸಮೀಪದ ಸಾರ್ವಜನಿಕ ಅಥವಾ ಖಾಸಗಿ ಪ್ರದೇಶದಲ್ಲಿ ತಾತ್ಕಾಲಿಕವಾಗಿ ಟೆಂಟ್ ಹಾಕಿ ಸಂಚಾರ ನಿಯಮಗಳ ಮಹತ್ವ ಸಾರುವ ದೃಶ್ಯಾವಳಿ ಪ್ರದರ್ಶನ ವ್ಯವಸ್ಥೆ ಕಲ್ಪಿಸಲಾಗುತ್ತದೆ.

ಅಲ್ಲಿಗೆ ಸಂಚಾರ ನಿಯಮ ಉಲ್ಲಂಘಿಸಿದವರನ್ನು ಕರೆ ತಂದು ವಿಡಿಯೋ ತೋರಿಸಲಾಗುತ್ತದೆ. ಇಲ್ಲಿ ಚಾಲನೆ ವೇಳೆ ಮೊಬೈಲ್ ಬಳಕೆ, ಪಾನಮತ್ತರಾಗಿ ಚಾಲನೆ, ಸಿಗ್ನಲ್ ಜಂಪ್ ಹೀಗೆ ಸಂಚಾರ ನಿಯಮ ಉಲ್ಲಂಘನೆಯಿಂದ ಸಂಭವಿಸಿದ ಅಪಘಾತಗಳ ದೃಶ್ಯಗಳನ್ನು ಪ್ರಸುತ್ತಪಡಿಸಿ ಕಾನೂನು ಪಾಲನೆ ಬಗ್ಗೆ ‘ಪಾಠ’ ಹೇಳಲಾಗುತ್ತದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.