'ಜವಾಹರ್ ಲಾಲ್ ನೆಹರು ಸಹ ಆರ್‌ಎಸ್‌ಎಸ್‌ಗೆ ಮಾರು ಹೋಗಿದ್ದರು'

Nehru invited RSS to 1963 R Day parade Indira attended 1977 event
Highlights

ನಾಗ್ಪುರದಲ್ಲಿ ನಡೆಯುವ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಒಪ್ಪಿಕೊಂಡಿರುವುದು ಇದೀಗ ಭಾರೀ ಚರ್ಚೆಗೆ ಗ್ರಾಸವಾಗಿದೆ. ಈಗಾಗಲೇ ನೆಹರು ಸೇರಿ ಅನೇಕ ಗಣ್ಯರಿಗೆ ಸಂಘದೊಂದಿಗೆ ಹೇಗೆ ನಂಟಿತ್ತು ಎಂಬುದನ್ನು ಸಂಘದ ಮುಖಂಡರೊಬ್ಬರು ನೆನಪಿಸಿಕೊಂಡಿದ್ದಾರೆ.

ಹೊಸದಿಲ್ಲಿ: ನಾಗ್ಪುರದಲ್ಲಿ ನಡೆಯುವ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಒಪ್ಪಿಕೊಂಡಿರುವುದು ಇದೀಗ ಭಾರೀ ಚರ್ಚೆಗೆ ಗ್ರಾಸವಾಗಿದೆ. 

ಕಾಂಗ್ರೆಸ್ ಮುಖಂಡರಾಗಿದ್ದ ಪ್ರಣಬ್ ಈ ನಿರ್ಧಾರಕ್ಕೆ ಕಾಂಗ್ರೆಸ್ ದಂಗಾಗಿದ್ದರೆ, ಇತರೆ ಪ್ರತಿಪಕ್ಷಗಳು ಕಟುವಾಗಿ ಟೀಕಿಸುತ್ತಿವೆ. 'ಆರೆಸ್ಸೆಸ್ ಏನೂ ಪಾಕಿಸ್ತಾನದ ಏಜೆಂಟ್ ಅಲ್ಲ. ಇದು ರಾಷ್ಟ್ರವಾದಿ ಸಂಘಟನೆ. ರಾಜಕೀಯ ಅಸ್ಪೃಶ್ಯತೆ ನಿವಾರಣೆಗಿದು ಸಕಾಲ,' ಎಂದು ಬಿಜೆಪಿ ಹಾಗೂ ಸಂಘದ ಮುಖಂಡರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಈ ಎಲ್ಲ ಬೆಳವಣಿಗೆಗಳ ಬೆನ್ನಲ್ಲೇ ಆರ್‌ಎಸ್‌ಎಸ್ ಮುಖಂಡರೊಬ್ಬರು, ಭಾರತದ ಮೊದಲ ಪ್ರಧಾನಿ ಜವಾಹರ್ ಲಾಲ್ ನೆಹರು ಸಂಘದ ರಾಷ್ಟ್ರೀಯತೆಗೆ ಹೇಗೆ ಮಾರು ಹೋಗಿದ್ದರೆಂಬುದನ್ನು ಸ್ಮರಿಸಿಕೊಂಡಿದ್ದಾರೆ. 

ಆರ್‌ಎಸ್‌ಎಸ್‌ನ ರಾಷ್ಟ್ರೀಯ ಮಾಧ್ಯಮ ತಂಡದ ಸದಸ್ಯ ಹಾಗೂ ಲೇಖಕ ರತನ್ ಶಾರ್ದಾ, '1962ರಲ್ಲಿ ಭಾರತ-ಚೀನಾ ಯುದ್ಧವಾದಾಗ ಸಂಘದ ಕಾರ್ಯಕರ್ತರ ಸೇವೆಯಿಂದ ನೆಹರು ಪ್ರಭಾವಿತರಾಗಿದ್ದರು. 1963ರ ಗಣರಾಜ್ಯೋತ್ಸವ ಸಮಾರಂಭಕ್ಕೆ ಮೂರು ಸಾವಿರ ಸಂಘದ ಕಾರ್ಯಕರ್ತರನ್ನು ಆಹ್ವಾಹಿಸಿದ್ದರು. ಆ ಮೂಲಕ ರಾಷ್ಟ್ರೀಯತೆ ಮನೋಭಾವವನ್ನು ಅಳವಡಿಸಿಕೊಳ್ಳಲು ಪ್ರೇರೇಪಿಸಿದ್ದರು,' ಎಂದು ಹೇಳಿದ್ದಾರೆ.

'ಕೇವಲ ಎರಡೇ ವಾರಗಳ ಮುಂಚೆ ನೀಡಿದ ಆಹ್ವಾನವನ್ನು ಮನ್ನಿಸಿದ ಆರ್‌ಎಸ್‌ಎಸ್ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿತ್ತು. ಆರ್‌ಎಸ್‌ಎಸ್‌ನೊಂದಿಗೆ ಇನ್ನೂ ಏನೇಕ ಸಂಘಟನೆಗಳಿಗೂ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ಆಹ್ವಾನಿಸಲಾಗಿತ್ತು. ಆದರೆ, ಚೀನಾದೊಂದಿಗೆ ಯುದ್ಧದ ವಿಷಯದಲ್ಲಿ ನೆಹರು ಅವರು ತೆಗೆದುಕೊಂಡಿದ್ದ ನಿರ್ಧಾರಕ್ಕೆ ವಿರೋಧವಿದ್ದಿದ್ದರಿಂದ ಬೇರೆ ಯಾರೂ ಪಾಲ್ಗೊಂಡಿರಲಿಲ್ಲ,' ಎಂದು ಅವರು ಹೇಳಿದ್ದಾರೆ.

ಸಂಘ ತನ್ನ ಕೇಂದ್ರ ಕಚೇರಿಗೆ ಈಗಾಗಲೇ ಅನೇಕ ಗಣ್ಯರನ್ನು ಆಹ್ವಾನಿಸಿದ್ದು, 1977ರಲ್ಲಿ ಆಗಿನ ಪ್ರಧಾನಿ ಇಂದಿರಾ ಗಾಂಧಿ ಆರ್‌ಎಸ್‌ಎಸ್ ಕಾರ್ಯಕರ್ತ ಏಕನಾಥ್ ರಾನಾಡೆ ಅವರ ಆಹ್ವಾನವನ್ನು ಮನ್ನಿಸಿ, ವಿವೇಕಾನಂದ ಶಿಲಾ ಸ್ಮಾರಕವನ್ನು ಉದ್ಘಾಟಿಸಿದ್ದರು. ಅಲ್ಲದೇ ಮಹಾತ್ಮ ಗಾಂಧಿಯೂ ಸಂಘದ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದನ್ನು ಶಾರ್ದಾ ಅವರು ಸ್ಮರಿಸಿಕೊಂಡಿದ್ದಾರೆ.

ಆರ್‌ಎಸ್‌ಎಸ್‌ಗೆ ಹೊಸದಾಗಿ ಸೇರಿಕೊಂಡವರಿಗೆ 'ಸಂಘ ಶಿಕ್ಷಾ ವರ್ಗ' ಎಂಬ 25  ದಿನಗಳ ತರಬೇತಿ ಶಿಬಿರವನ್ನು ನಾಗಪುರ ಕೇಂದ್ರ ಕಚೇರಿಯಲ್ಲಿ ನಡೆಸಲಾಗುತ್ತದೆ. ಇದರ ತೃತೀಯ ವರ್ಷದ ಸಮಾರೋಪ ಜೂನ್ 7ರಂದು ನಡೆಯಲಿದೆ. ಈ ಸಮಾರಂಭದ ಮುಖ್ಯ ಅತಿಥಿಯನ್ನಾಗಿಯನ್ನಾಗಿ ಪ್ರಣಬ್ ಅವರನ್ನು ಸಂಘ ಅಹ್ವಾನಿಸಿದ್ದು, ಅವರು ಪಾಲ್ಗೊಳ್ಳಲು ಒಪ್ಪಿಕೊಂಡಿದ್ದಾರೆ. 

'ಸರ್ವೋದಯ ಮುಖಂಡ ಪ್ರಭಾಕರ ರಾವ್, ಲೋಕಮಾನ್ಯ ಜಯಪ್ರಕಾಶ್ ನಾರಾಯಣ್, ನ್ಯಾ.ಕೆ.ಟಿ.ಥಾಮಸ್ ಮತ್ತು ಖ್ಯಾತ ವಿಜ್ಞಾನಿಗಳಾದ ಜಿ.ಮಾಧವನ್ ನಾಯರ್, ಕೆ.ರಾಧಕೃಷ್ಣನ್ ಮತ್ತು ಕೆ.ಕಸ್ತೂರಿರಂಗನ್ ಸಹ ಸಂಘದ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದಾರೆ,' ಎಂದು ಸಂಘದ ಮುಖವಾಣಿ ಆರ್ಗನೈಸರ್  ಹೇಳಿದೆ.
 

loader