ಲಕ್ಷ್ಮೇಶ್ವರ :  ಬೆತ್ತಲೆ ಸೇವೆಯನ್ನು ನಿಷೇಧಿಸಲಾಗಿದ್ದರೂ ಇಬ್ಬರು ಯುವತಿಯರು ಬೆತ್ತಲೆ ಸೇವೆ ಮಾಡಿರುವ ಘಟನೆ ಮಂಗಳವಾರ ಸಂಜೆ ಲಕ್ಷ್ಮೇಶ್ವರದಲ್ಲಿ ನಡೆದಿದೆ ಎನ್ನಲಾಗಿದೆ. ಆದರೆ, ಈ ಆಚರಣೆಯ ವಿವರಗಳನ್ನು ಸ್ಥಳೀಯರು ಗೌಪ್ಯವಾಗಿಡುತ್ತಿದ್ದು, ಯಾವುದೇ ಮಾಹಿತಿ ನೀಡುತ್ತಿಲ್ಲ.

ಮೂಲಗಳ ಪ್ರಕಾರ ಬೇವಿನ ಉಡುಗೆ ತೊಟ್ಟಬಾಲಕಿಯರಿಬ್ಬರು ಬೆತ್ತಲೆಯಾಗಿ ಸರ್ಕಾರಿ ಆಸ್ಪತ್ರೆ, ಶಿಗ್ಲಿ ಕ್ರಾಸ್‌ ಮೂಲಕ ರಸ್ತೆಯಲ್ಲಿ ಸಾಗಿ ಅಗಸ್ತ್ಯ ತೀರ್ಥದ ಹತ್ತಿರ ಇರುವ ದುರ್ಗಮ್ಮ ದೇವಿ ದೇವಸ್ಥಾನಕ್ಕೆ ಹೋಗಿ ಪೂಜೆ ಸಲ್ಲಿಸಿದ್ದಾರೆ. ಡೊಳ್ಳು ಮೇಳದ ಮೆರವಣಿಗೆ ಮಾಡಲಾಗಿದೆ.

ಅಗಸ್ತ್ಯತೀರ್ಥದ ಹತ್ತಿರ ಇರುವ ದುರ್ಗಮ್ಮದೇವಿ ದೇವಸ್ಥಾನಕ್ಕೆ ಹರಕೆ ಹೊತ್ತವರು ಬೆತ್ತಲೆ ಸೇವೆ ಮಾಡುವ ಪದ್ಧತಿ ಮೊದಲಿನಿಂದಲೂ ಇದೆ. ಕಳೆದ ವರ್ಷವೂ 2 ರಿಂದ 3 ಬಾಲಕಿಯರು ಬೆತ್ತಲೆ ಸೇವೆ ಮಾಡಿದ್ದಾರೆ ಎನ್ನಲಾಗಿದೆ. ಈ ಪದ್ಧತಿಯಂತೆ ದೇಹದ ಮೇಲೆ ಕೇವಲ ಬೇವಿನಸೊಪ್ಪಿನಿಂದ ತಯಾರಿಸಿದ ಉಡುಗೆ ಮಾತ್ರ ಇರುತ್ತದೆ. ಅದನ್ನು ತೊಟ್ಟು ಮೆರವಣಿಗೆಯಲ್ಲಿ ಯುವತಿಯರನ್ನು ದೇವಸ್ಥಾನಕ್ಕೆ ಕರೆತರಲಾಗುತ್ತದೆ. ದೇವಸ್ಥಾನದಲ್ಲಿ ದೇವರ ಪೂಜೆ ಮಾಡಿಸಿ, ಹೆಣ್ಣು ದೇವರ (ಯಲ್ಲಮ್ಮ, ದುರ್ಗಮ್ಮ) ಸೇವೆಗೆ ಅವರನ್ನು ನಿಯೋಜಿಸುತ್ತಾರೆ. ಜೀವನ ಪರ್ಯಂತ ಅವರು ದೇವತೆಯ ದಾಸಿಯಾಗಿ (ದೇವದಾಸಿ, ವೇಶ್ಯೆಯಾಗಿ) ಸೇವೆ ಸಲ್ಲಿಸುವುದು ಕಡ್ಡಾಯ. ಈ ಪದ್ಧತಿಯನ್ನು ನಿಯಂತ್ರಿಸುವ ಕೆಲಸವನ್ನು ಮಾಡಬೇಕು ಎಂದು ಕೆಲವು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಮಹಿಳೆಯ ಮಾನಹಾನಿ ಮಾಡುವ ಇಂತಹ ಪ್ರಕರಣ ನಡೆದಿರುವ ಬಗ್ಗೆ ನಮಗೆ ಯಾರಿಂದಲೂ ಮಾಹಿತಿ ಸಿಕ್ಕಿಲ್ಲ. ಇದು ಗೊತ್ತಾಗಿದ್ದರೆ, ತಡೆಯುವ ಕಾರ್ಯವನ್ನು ಖಂಡಿತಾ ಮಾಡುತ್ತಿದ್ದೇವು. ಇನ್ನು ಮುಂದೆ ಇಂತಹ ಘಟನೆಗಳು ಮರುಕಳಿಸದಂತೆ ನೋಡಿಕೊಳ್ಳುತ್ತೇವೆ.

-ನಂದಾ ನವಲೆ, ಲಕ್ಷ್ಮೇಶ್ವರ ವಿಭಾಗದ ಅಂಗನವಾಡಿ ಮೇಲ್ವಿಚಾರಕಿ