"ಕೇಜ್ರಿವಾಲ್ ಅವರ ಉದ್ದೇಶ ಕೆಟ್ಟದ್ದಾಗಿತ್ತು. ಮುಂಚೆ ಈಸ್ಟ್ ಇಂಡಿಯಾ ಬಂದಿತು. ಈಗ ಸೆಂಟ್ರಲ್ ಇಂಡಿಯಾ ಕಂಪನಿ ಇದೆ. ಇವರಿಗೆ ಪಂಜಾಬಿಗಳಲ್ಲಿ ಒಡಕು ಮೂಡಿಸುವುದಷ್ಟೇ ಬೇಕು. ಕೇಜ್ರಿವಾಲ್ ಈ ಭೂಮಿ ಮೇಲೆ ತಾವೊಬ್ಬರೇ ಪ್ರಾಮಾಣಿಕ ವ್ಯಕ್ತಿ ಎಂದು ಭಾವಿಸಿದ್ದಾರೆ"

ಚಂಡೀಗಢ(ಸೆ. 08): ಕ್ರಿಕೆಟಿಗ ನವಜ್ಯೋತ್ ಸಿಂಗ್ ಸಿಧು ಗುರುವಾರ ತಮ್ಮ "ಆವಾಜ್ ಎ ಪಂಜಾಬ್" ಪಕ್ಷವನ್ನು ಗುರುವಾರ ಅಧಿಕೃತವಾಗಿ ಉದ್ಘಾಟನೆ ಮಾಡಿದರು. ಈ ವೇಳೆ ತಮ್ಮ ಮನಸಿನ ಮಾತುಗಳನ್ನು ಹೊರಹಾಕಿದ ಸಿಧು, ಬಿಜೆಪಿ ಹಾಗೂ ಅರವಿಂದ್ ಕೇಜ್ರಿವಾಲ್ ವಿರುದ್ಧ ಕಠಿಣ ವಾಗ್ದಾಳಿ ನಡೆಸಿದರು. ಬಿಜೆಪಿ ಮತ್ತು ಆಮ್ ಆದ್ಮಿ ಪಕ್ಷಗಳು ಜನರನ್ನು ಕೇವಲ ಡೆಕೋರೇಷನ್ ಗೊಂಬೆಗಳಂತೆ ಬಳಸಿಕೊಳ್ಳುತ್ತವೆ ಎಂದು ಸಿಧು ಕಟಕಿಯಾಡಿದರು. ಬಿಜೆಪಿಗೆ ಬೇಕಾದಾಗ ಮಾತ್ರ ತನ್ನನ್ನು ಬಳಸಿಕೊಂಡಿತು ಎಂದು ಜರಿದ ಸಿಧು, ಕೇಜ್ರಿವಾಲ್'ರನ್ನು ಅರ್ಧಸತ್ಯ ಹೇಳುವ ವ್ಯಕ್ತಿ ಎಂದು ಟೀಕಿಸಿದರು.

ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷವನ್ನು ತಾನು ಸೇರುವ ಕುರಿತು ಇದ್ದ ಸುದ್ದಿಗಳ ಬಗ್ಗೆ ಮಾತನಾಡಿದ ಸಿಧು, "ನಾನು ಕೇಜ್ರಿವಾಲ್'ರನ್ನು ಭೇಟಿ ಮಾಡುವ ಬಗ್ಗೆ ಅಸ್ಪಷ್ಟ ಮಾಹಿತಿಯಷ್ಟೇ ಹೊರಬಂದಿತ್ತು. ನನ್ನ ಪತ್ನಿಯನ್ನು ಆಮ್ ಆದ್ಮಿಗೆ ಸೇರುವಂತೆ ಅವರು ಕೇಳುತ್ತಿದ್ದರು. ಅದು ಸರಿಯಲ್ಲ. ನಾನು ಬಿಜೆಪಿಗೆ ರಾಜಿನಾಮೆ ಕೊಡುವುದಕ್ಕೂ ಕೇಜ್ರಿವಾಲ್'ಗೂ ಏನೂ ನಂಟಿಲ್ಲ. ಎರಡು ವರ್ಷಗಳ ಹಿಂದೆ ಅರುಣ್ ಜೇಟ್ಲಿಯವರು ನನಗೆ ಕೊಟ್ಟಿದ್ದ ರಾಜ್ಯಸಭಾ ಸ್ಥಾನದ ಆಫರ್ ಅನ್ನು ನಾನು ತಿರಸ್ಕರಿಸಿದೆ. ಯಾರೊಂದಿಗೂ ನಾನು ಯಾವುದೇ ಡೀಲ್ ಮಾಡುವುದಿಲ್ಲವೆಂದು ಹೇಳಿದೆ" ಎಂದು ವಿವರಿಸಿದರು.

"ಕೇಜ್ರಿವಾಲ್ ಅವರ ಉದ್ದೇಶ ಕೆಟ್ಟದ್ದಾಗಿತ್ತು. ಮುಂಚೆ ಈಸ್ಟ್ ಇಂಡಿಯಾ ಬಂದಿತು. ಈಗ ಸೆಂಟ್ರಲ್ ಇಂಡಿಯಾ ಕಂಪನಿ ಇದೆ. ಇವರಿಗೆ ಪಂಜಾಬಿಗಳಲ್ಲಿ ಒಡಕು ಮೂಡಿಸುವುದಷ್ಟೇ ಬೇಕು. ಕೇಜ್ರಿವಾಲ್ ಈ ಭೂಮಿ ಮೇಲೆ ತಾವೊಬ್ಬರೇ ಪ್ರಾಮಾಣಿಕ ವ್ಯಕ್ತಿ ಎಂದು ಭಾವಿಸಿದ್ದಾರೆ... ಸತ್ಯ ಹೇಳುವ ಕಾಲ ಬಂದಿದೆ. ಪಂಜಾಬ್'ನಲ್ಲಿ ಜನರು ಬಸವಳಿದಿದ್ದಾರೆ. ಈ ರಾಜ್ಯವನ್ನು ಉಳಿಸಬೇಕಿದೆ" ಎಂದು ಕೇಜ್ರಿವಾಲ್ ಅಭಿಪ್ರಾಯಪಟ್ಟರು.

"ಮೂರು ಥರದ ವ್ಯಕ್ತಿಗಳಿದ್ದಾರೆ. ಅಪಾರ ಬುದ್ಧಿಮತ್ತೆಯ ವ್ಯಕ್ತಿಯನ್ನು ಕಂಡು ಜನರು ಬೆರಗಾಗುತ್ತಾರೆ. ಅಧಿಕಾರಯುವ ವ್ಯಕ್ತಿಗೆ ಜನರು ಭಯಪಡುತ್ತಾರೆ. ಆದರೆ, ಒಳ್ಳೆಯ ವ್ಯಕ್ತಿತ್ವದ ಮಂದಿಯನ್ನು ನಂಬುತ್ತಾರೆ. ನಾವು ಮೂರನೇ ವರ್ಗಕ್ಕೆ ಸೇರಿದ ಜನರು" ಎಂದು ತಮ್ಮ ಆವಾಜ್ ಎ ಪಂಜಾಬ್ ಪಕ್ಷವನ್ನು ಸಿಧು ಬಣ್ಣಿಸಿದರು.