ಇಂಡಿಯಾ ಟುಡೇ ಸಮೂಹ ಸಂಸ್ಥೆ ಹಾಗೂ ಕಾರ್ವಿ ನಡೆಸಿದ ಮೂಡ್ ಆಫ್ ದಿ ನೇಷನ್ ಪೋಲ್-2019 ಸಮೀಕ್ಷೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಶೇ.37 ಮತ ಪಡೆಯುವ ಮೂಲಕ ದೇಶದ ನಂ.1 ಪ್ರಧಾನಿ ಎನಿಸಿಕೊಂಡಿದ್ದಾರೆ.
ನವದೆಹಲಿ [ಆ.16] : ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟ 2ನೇ ಅವಧಿಗೂ ಭರ್ಜರಿ ಬಹುಮತದ ಮೂಲಕ ಅಧಿಕಾರದ ಚುಕ್ಕಾಣಿ ಹಿಡಿಯಲು ಕಾರಣೀ ಭೂತರಾದ ನರೇಂದ್ರ ಮೋದಿ ಅವರು ಭಾರತ ಕಂಡ ಅತ್ಯುತ್ತಮ ಪ್ರಧಾನ ಮಂತ್ರಿ ಎಂದು ದೇಶದ ಜನತೆ ಅಭಿಪ್ರಾಯಪಟ್ಟಿದ್ದಾರೆ.
ಜಮ್ಮು-ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ ರದ್ದುಗೊಳಿಸುವ ಮುನ್ನ ಇಂಡಿಯಾ ಟುಡೇ ಸಮೂಹ ಸಂಸ್ಥೆ ಹಾಗೂ ಕಾರ್ವಿ ನಡೆಸಿದ ಮೂಡ್ ಆಫ್ ದಿ ನೇಷನ್ ಪೋಲ್-2019 ಸಮೀಕ್ಷೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಶೇ.37 ಮತ ಪಡೆಯುವ ಮೂಲಕ ದೇಶದ ಪ್ರಧಾನಿಗಳಾದ ಇಂದಿರಾಗಾಂಧಿ (ಶೇ.14), ಅಟಲ್ ಬಿಹಾರಿ ವಾಜಪೇಯಿ (ಶೇ.11), ಜವಾಹರಲಾಲ್ ನೆಹರೂ (ಶೇ.9) ಅವರ ಜನಪ್ರಿಯತೆಯನ್ನು ಹಿಂದಿಕ್ಕಿದ್ದಾರೆ. ಸ್ವಾತಂತ್ರ್ಯ ನಂತರ ನೆನೆಗುದಿಗೆ ಬಿದ್ದಿರುವ ಕಾಶ್ಮೀರ ಸಮಸ್ಯೆಗೆ ಸೂಕ್ತ ಪರಿಹಾರ ಕಂಡುಕೊಳ್ಳಲು ಮೋದಿ ಅವರು ಮಾತ್ರವೇ ಸಮರ್ಥರು ಎಂದು ಈ ಸಮೀಕ್ಷೆಯಲ್ಲಿ ಪಾಲ್ಗೊಂಡ ಶೇ.65 ಮಂದಿ ವಿಶ್ವಾಸವಿಟ್ಟಿದ್ದಾರೆ.
ನವ ಭಾರತಕ್ಕಾಗಿ ಪ್ರಧಾನಿ ಮೋದಿ ಸಪ್ತ ಮಂತ್ರ
ಇನ್ನು 1991ರಲ್ಲಿ ಎಲ್‌ಪಿಜಿ(ಉದಾರೀಕರಣ, ಖಾಸಗೀಕರಣ ಹಾಗೂ ಜಾಗತೀಕರಣ) ಮೂಲಕ ದೇಶವನ್ನು ಆರ್ಥಿಕ ಬಿಕ್ಕಟ್ಟಿನಿಂದ ಪಾರು ಮಾಡಿದ ಆರ್ಥಿಕ ತಜ್ಞ ಹಾಗೂ ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರು ಶೇ.5ರಷ್ಟುಮಾತ್ರವೇ ಜನಪ್ರಿಯತೆ ಗಳಿಸಿದ್ದಾರೆ.
ಪತಿ ಜೊತೆಗೆ ಬಂದು ಮೋದಿಗೆ ಪಾಕ್ ಸೋದರಿ ರಾಖಿ
ಪ್ರಬಲ ನಾಯಕತ್ವ: ಪ್ರಬಲ ನಾಯಕತ್ವದ ಗುಣವೇ ಪ್ರಧಾನಿ ನರೇಂದ್ರ ಮೋದಿ ಅವರ ದೀರ್ಘಾಕಾಲೀನ ಜನಪ್ರಿಯತೆಯ ಮೂಲವಾಗಿದ್ದು, ಈಗಲೂ ದೇಶದ ಬಹುತೇಕ ಜನ ಪ್ರಧಾನಿ ನರೇಂದ್ರ ಮೋದಿ ನಾಯಕತ್ವವನ್ನು ಒಪ್ಪಿಕೊಳ್ಳುತ್ತಾರೆ. ಮೋದಿ ಅವರ ಈ ನಾಯಕತ್ವವೇ 2019ರ ಮೇ ತಿಂಗಳ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ 302 ಸೀಟು ತಂದುಕೊಡುವಲ್ಲಿ ನೆರವಾಯಿತು. ಜೊತೆಗೆ, 2019ರ ಬಿಜೆಪಿಯ ಅಭೂತಪೂರ್ವ ಗೆಲುವಿನ ಹಿಂದೆ ನರೇಂದ್ರ ಮೋದಿ ಫ್ಯಾಕ್ಟರ್ ಶೇ.35, ಬಾಲಾಕೋಟ್ ದಾಳಿ ಶೇ.16, ಮೋದಿ ಸರ್ಕಾರದ ಯೋಜನೆಗಳು ಶೇ.11, ಬಿಜೆಪಿಯ ಅಬ್ಬರದ ಜಾಹೀರಾತು ಶೇ.8, ರಾಷ್ಟ್ರೀಯತೆ ಶೇ.7, ಹಿಂದುತ್ವ ಫ್ಯಾಕ್ಟರ್ ಶೇ.7, ಮೈ ಭೀ ಚೌಕೀದಾರ್ ಶೇ.6, ಎನ್‌ಡಿಎ ಮೈತ್ರಿ ಶೇ.5 ಮತ್ತು ಅಮಿತ್ ಶಾ ಅವರ ಚಾಣಾಕ್ಷತೆ ಶೇ.5ರಷ್ಟುಕೆಲಸ ಮಾಡಿವೆ ಎಂದು ಈ ಸಮೀಕ್ಷೆ ಹೇಳಿದೆ.
ಅಲ್ಲದೆ, ಒಂದು ವೇಳೆ ಪ್ರಸ್ತುತ ಸಂದರ್ಭದಲ್ಲಿ ಲೋಕಸಭೆ ಚುನಾವಣೆ ಏರ್ಪಟ್ಟದ್ದೆ ಆದರೆ, ಬಿಜೆಪಿಯು 2019ರ ಮೇ ತಿಂಗಳಲ್ಲಿ ಗಳಿಸಿದ ಸೀಟುಗಳಿಗಿಂತ ಹೆಚ್ಚು ಸ್ಥಾನ ಗೆಲ್ಲಲಿದೆ ಎಂಬುದು ಮೂಡ್ ಆಫ್ ದಿ ನೇಷನ್ ಸಮೀಕ್ಷೆಯ ಅಂಬೋಣ. ಅಲ್ಲದೆ, ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ರದ್ದುಗೊಳಿಸುವ ಮುನ್ನವೇ ನಡೆಸಲಾದ ಈ ಮೂಡ್ ಆಫ್ ದಿ ನೇಷನ್ ಸಮೀಕ್ಷೆಯಲ್ಲಿ ಶೇ.65ರಷ್ಟುಮಂದಿ ರಾಜಕೀಯವಾಗಿ ಅತೀ ಸೂಕ್ಷ್ಮ ಹಾಗೂ ಜಟಿಲವಾದ ಕಾಶ್ಮೀರ ಸಮಸ್ಯೆಗೆ ಪರಿಹಾರ ಕೊಡಬಲ್ಲ ಪ್ರಬಲ ನಾಯಕ ಎಂದರೆ ಅದು ಮೋದಿ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಈ ಸಮೀಕ್ಷೆಯಲ್ಲಿ ಕಾಶ್ಮೀರದ 370ನೇ ವಿಧಿ ರದ್ದುಗೊಳಿಸಬೇಕೆಂಬ ನಿರ್ಧಾರಕ್ಕೆ ಶೇ.57ರಷ್ಟುಮಂದಿ ಸೈ ಎಂದಿದ್ದಾರೆ. ಈ ಸಮೀಕ್ಷೆಯಲ್ಲಿ ಎಲ್ಲಾ ಪ್ರಧಾನಿಗಳಿಗಿಂತ ಮೋದಿ ಅವರಿಗೆ ಹೆಚ್ಚು ಜನಪ್ರಿಯತೆ ಲಭ್ಯವಾಗಲು ಕಾಶ್ಮೀರದ ವಿಶೇಷ ಸ್ಥಾನಮಾನವೇ ಕಾರಣವಾಗಿದೆ ಎನ್ನಬಹುದು.
ಟಾಪ್ ಪ್ರಧಾನಿಗಳು
ಪ್ರಧಾನಿಗಳು ಜನಬೆಂಬಲ
ನರೇಂದ್ರ ಮೋದಿ ಶೇ.37
ಇಂದಿರಾಗಾಂಧಿ ಶೇ.14
ಅಟಲ್ ಬಿಹಾರಿ ವಾಜಪೇಯಿ ಶೇ.11
ಜವಾಹರಲಾಲ್ ನೆಹರೂ ಶೇ.9
ಲಾಲ್ ಬಹದ್ದೂರ್ ಶಾಸ್ತ್ರಿ ಶೇ.6
ರಾಜೀವ್ ಗಾಂಧಿ ಶೇ.6
ಮನಮೋಹನ್ ಸಿಂಗ್ ಶೇ.5
ಗುಲ್ಜಾರಿ ಲಾಲ್ ನಂದಾ ಶೇ.3
