ನವದೆಹಲಿ [ಆ.16]:   ಪ್ರಧಾನಿಯಾಗಿ ಪುನರಾಯ್ಕೆಯಾದ ಬಳಿಕ ಮೊದಲ ಬಾರಿಗೆ ಸ್ವಾತಂತ್ರ್ಯೋತ್ಸವದಲ್ಲಿ ಭಾಗವಹಿಸಿ ಧ್ವಜಾರೋಹಣ ಮಾಡಿದ ಪ್ರಧಾನಿ ನರೇಂದ್ರ ಮೋದಿ ಅವರು ದೇಶದಲ್ಲಿ ಹಲವು ದೂರಗಾಮಿ ಪರಿಣಾಮಗಳನ್ನು ಉಂಟು ಮಾಡುವ ಏಳು ಪ್ರಮುಖ ಘೋಷಣೆಗಳನ್ನು ಮೊಳಗಿಸಿದ್ದಾರೆ.

ಅದರಲ್ಲೂ ಮೂರು ಪ್ರಮುಖ ಸೂತ್ರಗಳನ್ನು ಪ್ರಕಟಿಸಿದ್ದಾರೆ. ಮೊದಲನೆಯದಾಗಿ, ಸೇನಾ ಪಡೆಗಳ ನಡುವೆ ಅತ್ಯುತ್ತಮ ಸಮನ್ವಯ ಸಾಧಿಸುವ ಉದ್ದೇಶದಿಂದ ಭೂಸೇನೆ, ನೌಕಾಸೇನೆ ಹಾಗೂ ವಾಯುಸೇನೆ ಮುಖ್ಯಸ್ಥರ ಮೇಲೆ ‘ಸಶಸ್ತ್ರ ಪಡೆಗಳ ಮುಖ್ಯಸ್ಥ’ ಹುದ್ದೆಯೊಂದನ್ನು ಸೃಷ್ಟಿಸುವುದಾಗಿ ಹೇಳಿದ್ದಾರೆ. ಎರಡನೆಯದಾಗಿ, ಜನಸಂಖ್ಯಾ ಸ್ಫೋಟದಿಂದ ಭಾರಿ ಸಮಸ್ಯೆಗಳು ಎದುರಾಗುವ ಕಾರಣ, ಅದರ ನಿಯಂತ್ರಣಕ್ಕೆ ಯೋಜನೆ ರೂಪಿಸುವ ಇಂಗಿತ ವ್ಯಕ್ತಪಡಿಸಿದ್ದಾರೆ. ಮೂರನೆಯದಾಗಿ, ‘ಒಂದು ದೇಶ ಒಂದು ಸಂವಿಧಾನ’, ‘ಒಂದು ದೇಶ ಒಂದು ತೆರಿಗೆ’ ರೀತಿ ‘ಒಂದು ದೇಶ ಒಂದೇ ಚುನಾವಣೆ’ ಬಗ್ಗೆ ಚರ್ಚೆಗಳು ನಡೆಯಬೇಕು ಎಂದು ಕರೆ ಕೊಟ್ಟಿದ್ದಾರೆ. ಇದಲ್ಲದೆ, ಪ್ರವಾಸೋದ್ಯಮ, ಆರ್ಥಿಕತೆ, ಉದ್ಯಮ ವಲಯ, ಕುಡಿಯುವ ನೀರಿನಂತಹ ವಿಚಾರಗಳಿಗೆ ಒತ್ತು ನೀಡಿದ್ದಾರೆ.

73ನೇ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ದೆಹಲಿಯ ಐತಿಹಾಸಿಕ ಕೆಂಪುಕೋಟೆಯ ಮೇಲೆ ತ್ರಿವರ್ಣ ಧ್ವಜಾರೋಹಣ ಮಾಡಿ, ಸತತ ಆರನೇ ಬಾರಿಗೆ ಭಾಷಣ ಮಾಡಿದ ಮೋದಿ ಅವರು, ‘ಒಂದು ದೇಶ, ಒಂದು ಸಂವಿಧಾನ’ದೆಡೆಗೆ 370ನೇ ವಿಧಿ ರದ್ದತಿ ಮೂಲಕ ಹೆಜ್ಜೆ ಇಡಲಾಗಿದೆ. 70 ವರ್ಷಗಳಿಂದ ಜಮ್ಮು-ಕಾಶ್ಮೀರಕ್ಕೆ ಲಭಿಸಿದ್ದ ವಿಶೇಷ ಅಧಿಕಾರದಿಂದ ನಿರೀಕ್ಷಿತ ಫಲಿತಾಂಶ ದೊರಕಿಲ್ಲ. ಆದ ಕಾರಣ ಅದನ್ನು ರದ್ದುಗೊಳಿಸಬೇಕಾಯಿತು ಎಂದು ಸಮರ್ಥನೆ ನೀಡಿದರು.

73ನೇ ಸ್ವಾತಂತ್ರ್ಯ ದಿನಾಚರಣೆ; ಬದಲಾಯಿತು ಪ್ರಧಾನಿ ಮೋದಿ ಕಾರು!

ಸುಮಾರು 95 ನಿಮಿಷಗಳ ಕಾಲ ಭಾಷಣ ಮಾಡಿದ ಅವರು, ಐದು ವರ್ಷಗಳ ಕಾಲ ಜನರ ಅಗತ್ಯತೆಗಳನ್ನು ಈಡೇರಿಸಿದ್ದೇವೆ. ಇನ್ನು ಜನರ ಆಶೋತ್ತರ ಹಾಗೂ ಕನಸುಗಳನ್ನು ಈಡೇರಿಸುವ ನಿಟ್ಟಿನಲ್ಲಿ ಎರಡನೇ ಅವಧಿಯಲ್ಲಿ ತಮ್ಮ ಸರ್ಕಾರ ಕಾರ್ಯೋನ್ಮುಖವಾಗಲಿದೆ ಎಂದು ಹೇಳಿದರು.

ಒಂದು ದೇಶ, ಒಂದೇ ಚುನಾವಣೆಗೆ ಸಿದ್ಧ, ದೇಶಾದ್ಯಂತ ಚರ್ಚೆಯಾಗಲಿ: ಮೋದಿ ಮಾತು!

ಭ್ರಷ್ಟಾಚಾರ, ಭಯೋತ್ಪಾದನೆ, ಪರಿಸರ, ತ್ರಿವಳಿ ತಲಾಖ್‌, ಮತ್ತಿತರೆ ವಿಚಾರಗಳ ಬಗ್ಗೆಯೂ ಪ್ರಸ್ತಾಪಿಸಿದ ಅವರು, ಸಂಪತ್ತು ಸೃಷ್ಟಿಸುವ ಉದ್ಯಮಿಗಳಿಗೆ ಗೌರವ ಕೊಡಬೇಕು. ಏಕೆಂದರೆ, ಸಂಪತ್ತು ಸೃಷ್ಟಿಯಾದರಷ್ಟೇ ಅದನ್ನು ಹಂಚಿಕೆ ಮಾಡಬಹುದು ಎಂದು ಹೇಳಿದರು.

ಸಶಸ್ತ್ರ ಪಡೆಗಳ ಮುಖ್ಯಸ್ಥ ಹುದ್ದೆ:

ಸಶಸ್ತ್ರ ಪಡೆಗಳ ನಡುವೆ ಸಮನ್ವಯತೆ ಸಾಧಿಸಿ, ಪರಿಣಾಮಕಾರಿ ನಾಯಕತ್ವವನ್ನು ಒದಗಿಸಲು ಸಶಸ್ತ್ರ ಪಡೆಗಳ ಮುಖ್ಯಸ್ಥ ಹುದ್ದೆಯನ್ನು ಸೃಷ್ಟಿಸಲು ಸರ್ಕಾರ ನಿರ್ಧಾರ ಮಾಡಿದೆ ಎಂದು ಮೋದಿ ಹೇಳಿದರು. 1999ರ ಕಾರ್ಗಿಲ್‌ ಯುದ್ಧದ ಬಳಿಕ ಮೊಳಕೆಯೊಡಿದು, ಧೂಳು ತಿನ್ನುತ್ತಿದ್ದ ಪ್ರಸ್ತಾವಕ್ಕೆ ತನ್ಮೂಲಕ ಮೋದಿ ಮುಕ್ತಿ ನೀಡಿದರು. ಸಶಸ್ತ್ರ ಪಡೆಗಳ ಮುಖ್ಯಸ್ಥರು ಮೂರೂ ಸೇನಾ ಪಡೆಗಳ ಮುಖ್ಯಸ್ಥರ ಬದಲಿಗೆ ಸರ್ಕಾರದ ಜತೆ ನೇರ ಸಂಪರ್ಕದಲ್ಲಿರುತ್ತಾರೆ. ನಿರ್ಧಾರ ಕೈಗೊಳ್ಳುವ ಪ್ರಕ್ರಿಯೆಯಲ್ಲಿ ಆಗುವ ವಿಳಂಬವನ್ನು ತಪ್ಪಿಸಲಿದ್ದಾರೆ ಎಂದು ತಜ್ಞರು ತಿಳಿಸಿದ್ದಾರೆ.

ಜನಸಂಖ್ಯಾ ಸ್ಫೋಟದ ಬಗ್ಗೆ ಇದೇ ವೇಳೆ ಕಳವಳ ವ್ಯಕ್ತಪಡಿಸಿದ ಅವರು, ಜನಸಂಖ್ಯೆ ಹೆಚ್ಚಳದಿಂದ ಸಾಕಷ್ಟುತೊಂದರೆಗಳು ಎದುರಾಗುತ್ತವೆ. ಹೀಗಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಜನಸಂಖ್ಯೆ ನಿಯಂತ್ರಿಸಲು ಯೋಜನೆಗಳನ್ನು ಆರಂಭಿಸಬೇಕಾದ ಅಗತ್ಯವಿದೆ. ಜನರೂ ಈ ಬಗ್ಗೆ ಜಾಗೃತರಾಗಬೇಕಾಗುತ್ತದೆ ಎಂದು ತಿಳಿಸಿದರು.

ಏಕಕಾಲಕಕ್ಕೆ ಲೋಕಸಭೆ ಹಾಗೂ ವಿಧಾನಸಭೆ ಚುನಾವಣೆ ನಡೆಸುವ ವಿಚಾರವನ್ನು ಮತ್ತೆ ಪ್ರಸ್ತಾಪಿಸಿದ ಅವರು, ‘ಒಂದು ದೇಶ ಒಂದೇ ಚುನಾವಣೆ’ ಬಗ್ಗೆ ಈಗ ಚರ್ಚೆ ನಡೆಯಬೇಕಿದೆ ಎಂದು ಹೇಳಿದರು.


1. ದೇಶದ ಮೂರೂ ಸೇನಾ ಪಡೆಗಳಿಗೆ ಸೇರಿ ಒಬ್ಬ ಮುಖ್ಯಸ್ಥರ ನೇಮಕ. ಇದರಿಂದ ಸಮನ್ವಯ, ನಾಯಕತ್ವಕ್ಕೆ ಅನುಕೂಲ

2. ಜನಸಂಖ್ಯಾ ಸ್ಫೋಟದಿಂದ ಮುಂದಿನ ಪೀಳಿಗೆಗೆ ಹೊಸ ಸವಾಲು. ಇದರ ನಿರ್ವಹಣೆಗೆ ಕೇಂದ್ರ, ರಾಜ್ಯ ಕ್ರಮ ಆಗಬೇಕು

3. ಒಂದು ದೇಶ, ಒಂದು ಚುನಾವಣೆ ದೇಶದ ಉನ್ನತಿಗೆ ಪೂರಕ. ಈ ಕುರಿತು ಗಂಭೀರ ಚರ್ಚೆ ಮಾಡಲು ಸಮಯ ಸನ್ನಿಹಿತ

4. 2 ಕೋಟಿ ಭಾರತೀಯರು ವಿದೇಶ ಪ್ರವಾಸ ಮಾಡುತ್ತಾರೆ. ಅಷ್ಟುಜನ 2020ರೊಳಗೆ ದೇಶದ 15 ತಾಣಕ್ಕೆ ಭೇಟಿ ನೀಡಲಿ

5. 5 ವರ್ಷದಲ್ಲಿ ಭಾರತವನ್ನು 5 ಲಕ್ಷ ಕೋಟಿ ಡಾಲರ್‌ ಆರ್ಥಿಕತೆ ಆಗಿಸಲು ವಿವಿಧ ಕ್ಷೇತ್ರಗಳಲ್ಲಿ 100 ಲಕ್ಷ ಕೋಟಿ ಹೂಡಿಕೆ

6. ದೇಶದ ಸಂಪತ್ತು ಸೃಷ್ಟಿಗೆ ಉದ್ಯಮಿಗಳ ಕೊಡುಗೆ ಅಪಾರ. ಅವರು ದೇಶದ ಸಂಪತ್ತು. ಅವರನ್ನು ಗೌರವಿಸುವಂತಾಗಬೇಕು

7. 2024ರೊಳಗೆ ಪ್ರತಿ ಮನೆಗೆ ಕುಡಿವ ನೀರು ಒದಗಿಸುವ ಗುರಿ. ಇದಕ್ಕಾಗಿ ಜಲಜೀವನ್‌ ಅಡಿ .3.5 ಲಕ್ಷ ಕೋಟಿ ವಿನಿಯೋಗ