ನವದೆಹಲಿ: ರೈತರ ಉದ್ಧಾರಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಮಹತ್ವಾಕಾಂಕ್ಷೆಯೊಂದಿಗೆ 2016ರಲ್ಲಿ ಜಾರಿಗೆ ತಂದಿದ್ದ ‘ಪ್ರಧಾನಮಂತ್ರಿ ಫಸಲ್‌ ಬಿಮಾ ಯೋಜನೆ’ಯಿಂದ ವಿಮಾ ಕಂಪನಿಗಳು ಉದ್ಧಾರವಾಗುತ್ತಿರುವ ವರದಿಗಳು ಬಂದ ಹಿನ್ನೆಲೆಯಲ್ಲಿ ಯೋಜನೆಗೆ ಹೊಸ ರೂಪ ನೀಡಲು ಕೇಂದ್ರ ಸರ್ಕಾರ ಸಿದ್ಧತೆಯಲ್ಲಿ ತೊಡಗಿದೆ.

ಸ್ಪೇನ್‌ ಹಾಗೂ ಟರ್ಕಿ ದೇಶಗಳಲ್ಲಿರುವ ಕೃಷಿ ವಿಮೆ ಯೋಜನೆಯ ಮಾದರಿಯಲ್ಲೇ ಹೊಸ ಯೋಜನೆ ಇರಲಿದೆ. ಆ ಎರಡೂ ಯೋಜನೆಗಳ ಬಗ್ಗೆ ಕೇಂದ್ರ ಕೃಷಿ ಸಚಿವಾಲಯದ ಅಧಿಕಾರಿಗಳು ವಿಶ್ವ ಬ್ಯಾಂಕ್‌ ನೆರವಿನೊಂದಿಗೆ ಅಧ್ಯಯನ ಮಾಡಿ ಬಂದಿದ್ದು, ಅದನ್ನು ಭಾರತದಲ್ಲೂ ಅಳವಡಿಸುವ ಪ್ರಯತ್ನ ನಡೆಯುತ್ತಿದೆ. ಲೋಕಸಭೆ ಚುನಾವಣೆಗೂ ಮುನ್ನ ಹೊಸ ರೂಪದ ಕೃಷಿ ಬಿಮಾ ಯೋಜನೆ ಅನುಷ್ಠಾನಕ್ಕೆ ಬರಲಿದೆ ಎಂದು ಹೇಳಲಾಗುತ್ತಿದೆ.

ಹೊಸ ರೂಪದ ಕೃಷಿ ವಿಮಾ ಯೋಜನೆಯಲ್ಲಿ ವಿಮಾ ಕಂಪನಿಗಳ ಆಟಕ್ಕೆ ಬ್ರೇಕ್‌ ಬೀಳಲಿದೆ. ವಿಮಾ ಶುಲ್ಕ ನಿಗದಿಯಿಂದ ಹಿಡಿದು, ವಿಮಾ ಮೊತ್ತ ಪಾವತಿವರೆಗೆ ಎಲ್ಲ ಹೊಣೆಗಳನ್ನೂ ಸರ್ಕಾರವೇ ಹೊತ್ತುಕೊಳ್ಳುತ್ತದೆ. ಈ ಯೋಜನೆಯಲ್ಲಿ ವಿಮಾ ಕಂಪನಿಗಳೂ ಇರಲಿದ್ದು, ತಮ್ಮ ಅನುಭವ ಬಳಸಿ ಯೋಜನೆಯನ್ನು ಜಾರಿಗೆ ತರುತ್ತವೆ. ಅದಕ್ಕಾಗಿ ಸರ್ಕಾರ ವಿಮಾ ಕಂಪನಿಗಳಿಗೆ ನಿರ್ದಿಷ್ಟಶುಲ್ಕ ಪಾವತಿ ಮಾಡಲಿದೆ.

ಸದ್ಯ ಇರುವ ಯೋಜನೆಯಡಿ, ವಿಮಾ ಕಂಪನಿಗಳೇ ಎಲ್ಲ ಅಧಿಕಾರಗಳನ್ನೂ ನಿರ್ವಹಿಸುತ್ತಿದ್ದು, ತಮಗೆ ಲಾಭವಾಗುವ ರೀತಿ ಯೋಜನೆಯನ್ನು ಜಾರಿಗೆ ತರುತ್ತಿವೆ ಎಂಬ ಆರೋಪವಿದೆ. ಇತ್ತೀಚೆಗೆ ನಡೆದ ಪಂಚರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಗೆ ಹಿನ್ನಡೆ ಆಗಿದ್ದಕ್ಕೆ ಕೃಷಿ ಸಮಸ್ಯೆಯೂ ಕಾರಣ ಎಬ ವಿಶ್ಲೇಷಣೆಗಳಿವೆ. ಲೋಕಸಭೆ ಚುನಾವಣೆ ಸಂದರ್ಭದಲ್ಲೂ ಆ ವಿಷಯ ಸದ್ದು ಮಾಡಬಹುದು ಎಂಬ ಕಾರಣಕ್ಕೆ ವಿಮಾ ಯೋಜನೆಗೆ ಹೊಸ ರೂಪ ನೀಡಲು ಸರ್ಕಾರ ಮುಂದಾಗಿದೆ ಎಂದು ವರದಿಗಳು ತಿಳಿಸಿವೆ.

ಯಾಕೆ ಈ ಚಿಂತನೆ?

ಹಾಲಿ ಫಸಲ್‌ ಬಿಮಾ ಯೋಜನೆಯನ್ನು ವಿಮಾ ಕಂಪನಿಗಳು ತಮ್ಮ ಅನುಕೂಲಕ್ಕೆ ತಕ್ಕಂತೆ ಜಾರಿಗೊಳಿಸುತ್ತಿವೆ. ಇದರಿಂದ ರೈತರಿಗೆ ಸೂಕ್ತ ಬೆಳೆ ನಷ್ಟಪರಿಹಾರ ಸಿಗುತ್ತಿಲ್ಲ ಎಂಬ ಆರೋಪವಿದೆ. ಈ ಹಿನ್ನೆಲೆಯಲ್ಲಿ ಸರ್ಕಾರವೇ ನೇರವಾಗಿ ವಿಮಾ ಶುಲ್ಕ ನಿಗದಿ, ಪರಿಹಾರ ಪಾವತಿ ನಿರ್ವಹಿಸಲು ಚಿಂತನೆ ನಡೆಸಿದೆ.