ಮಂಗಳವಾರ ಶಸ್ತ್ರಾಗಾರ ಘಟಕದ ಮೇಲಿನ ಉಗ್ರರ ದಾಳಿಯಲ್ಲಿ ಇಬ್ಬರು ಸೇನಾಧಿಕಾರಿಗಳು ಸೇರಿದಂತೆ ಒಟ್ಟು ೭ ಸೈನಿಕರು ಹುತಾತ್ಮರಾಗಿದ್ದರು. ಅಲ್ಲದೆ, ಮೂವರು ಉಗ್ರರನ್ನು ಸೇನೆ ಸದೆಬಡಿದಿತ್ತು. ಬುಧವಾರ ನಗರೋಟಾದ ಶಸ್ತ್ರಾಗಾರ ಘಟಕಕ್ಕೆ ಸೇನಾ ಮುಖ್ಯಸ್ಥ ದಲ್ಬೀರ್ ಸಿಂಗ್ ಸುಹಾಗ್ ಭೇಟಿ ನೀಡಿ ಪರಿಸ್ಥಿತಿಯ ಅವಲೋಕನ ಮಾಡಿದ್ದಾರೆ.
ಜಮ್ಮು/ ನವದೆಹಲಿ(ನ.30): ಜಮ್ಮುವಿನ ನಗರೋಟಾ ಶಸ್ತ್ರಾಗಾರ ಘಟಕದ ಮೇಲಿನ ಉಗ್ರರ ದಾಳಿಯು ಭದ್ರತಾ ಮತ್ತು ಗುಪ್ತಚರಗಳ ಅತಿದೊಡ್ಡ ವೈಫಲ್ಯವನ್ನು ತೆರೆದಿಟ್ಟಿದೆ ಎಂದು ರಕ್ಷಣಾ ಇಲಾಖೆಯ ಉನ್ನತ ಮೂಲಗಳು ಒಪ್ಪಿಕೊಂಡಿವೆ. ಈ ಬಗ್ಗೆ ‘ಹಿಂದೂಸ್ತಾನ್ ಟೈಮ್ಸ್’ ವರದಿ ಮಾಡಿದೆ.
ಮಂಗಳವಾರ ಶಸ್ತ್ರಾಗಾರ ಘಟಕದ ಮೇಲಿನ ಉಗ್ರರ ದಾಳಿಯಲ್ಲಿ ಇಬ್ಬರು ಸೇನಾಧಿಕಾರಿಗಳು ಸೇರಿದಂತೆ ಒಟ್ಟು ೭ ಸೈನಿಕರು ಹುತಾತ್ಮರಾಗಿದ್ದರು. ಅಲ್ಲದೆ, ಮೂವರು ಉಗ್ರರನ್ನು ಸೇನೆ ಸದೆಬಡಿದಿತ್ತು. ಬುಧವಾರ ನಗರೋಟಾದ ಶಸ್ತ್ರಾಗಾರ ಘಟಕಕ್ಕೆ ಸೇನಾ ಮುಖ್ಯಸ್ಥ ದಲ್ಬೀರ್ ಸಿಂಗ್ ಸುಹಾಗ್ ಭೇಟಿ ನೀಡಿ ಪರಿಸ್ಥಿತಿಯ ಅವಲೋಕನ ಮಾಡಿದ್ದಾರೆ.
‘‘ಗೆರಿಲ್ಲಾ ಯುದ್ಧ ತರಬೇತಿ ಪಡೆದಿದ್ದ ಉಗ್ರರ ದಾಳಿಯಿಂದಾಗಿ ಗಡಿ ನಿಯಂತ್ರಣ ರೇಖೆಯಲ್ಲಿನ ಉಗ್ರರ ಚಟುವಟಿಕೆ ಮೇಲೆ ನಿಗಾ ಇಡುವ ನಗರೋಟಾದ ಶಸ್ತ್ರಾಗಾರದ ಮುಖ್ಯ ಘಟಕಗಳು ಹಾನಿಗೊಂಡಿವೆ. ದಾಳಿಗೆ ಕಾರಣವಾದ ಭದ್ರತಾ ಲೋಪದ ಕುರಿತು ಪರಾಮರ್ಶೆ ಮಾಡಿಕೊಳ್ಳಬೇಕಿದ್ದು, ಸಮನ್ವಯಕಾರಿ ಕ್ರಮ ಕೈಗೊಳ್ಳುವ ಅಗತ್ಯವಿದೆ,’’ ಎಂದು ರಕ್ಷಣಾ ಇಲಾಖೆಯ ಮೂಲಗಳು ತಿಳಿಸಿವೆ. ಪಂಜಾಬ್‌ನ ಪಠಾಣ್ ಕೋಟ್, ಜಮ್ಮು-ಕಾಶ್ಮೀರದ ಉರಿ ಬಳಿಕ ನಗರೋಟಾದ ಮೇಲಿನ ದಾಳಿಯು ಅತಿದೊಡ್ಡ ದಾಳಿಯಾಗಿದೆ.
ಉಗ್ರರು ಕೊರೆದ ಸುರಂಗ ಪತ್ತೆ:
ನಗರೋಟಾ ಶಸ್ತ್ರಾಗಾರದ ಉಗ್ರರ ದಾಳಿ ಬಳಿಕ ಶೋಧ ಕಾರ್ಯಾಚರಣೆ ಬುಧವಾರವೂ ಮುಂದುವರಿದಿದ್ದು, ‘‘ಭಾರತದ ಗಡಿಯನ್ನು ಪ್ರವೇಶಿಸಲು ದಾಳಿಕೋರರು ಕೊರೆದ ಸುರಂಗ ಮಾರ್ಗವು ಸಾಂಬಾ ಪ್ರದೇಶದ ಚಾಂಬ್ಲಿಯಾಲ್‌ನಲ್ಲಿ ಪತ್ತೆಯಾಗಿದೆ,’’ ಎಂದು ಗಡಿ ಭದ್ರತಾ ಪಡೆಯ ಡಿಜಿ ಕೆ ಕೆ ಶರ್ಮಾ ಹೇಳಿದ್ದಾರೆ. ಅಲ್ಲದೆ, ಬಾಂಗ್ಲಾದೇಶ ಗಡಿ ಪ್ರದೇಶದಲ್ಲಿ ನೀರಿನ ಮೂಲಗಳಿರುವುದರಿಂದ ಬೇಲಿ ಹಾಕಲು ಸಾಧ್ಯವಾಗಿಲ್ಲ, ಅಂಥ ಕಡೆ ಮಾನವ ಶಕ್ತಿಯನ್ನು ನಿಯೋಜನೆಯೂ ಅಸಾಧ್ಯ ಎಂಬುದನ್ನು ಅವರು ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ಎರಡು ಪೈಲಟ್ ಕಾರ್ಯಕ್ರಮವನ್ನು ಕೇಂದ್ರ ಜಾರಿಗೆ ತಂದಿದ್ದು, ಗಡಿ ಬೇಲಿ ತಂತ್ರಜ್ಞಾನಕ್ಕೆ ಮತ್ತು ಗಡಿ ಪ್ರದೇಶಗಳ ಕಾಪಾಡಿಕೊಳ್ಳಬಹುದಾಗಿದೆ.
ರೈಲು ಸ್ಫೋಟಕ್ಕೆ ಯತ್ನಿಸಿದ್ದ ಉಗ್ರರು:
ಮಂಗಳವಾರ ಜಮ್ಮು-ಕಾಶ್ಮೀರದಲ್ಲಿ ಬಿಎಸ್‌ಎಫ್‌ನಿಂದ ಹತ್ಯೆಗೀಡಾದ ಮೂವರು ನುಸುಳುಕೋರ ಉಗ್ರರು ದ್ರವರೂಪದ ಸ್ಫೋಟಕ ಬಳಸಿ ರೈಲು ಸ್ಫೋಟಕ್ಕೆ ಸಂಚು ರೂಪಿಸಿದ್ದರು ಎಂಬ ಅಂಶ ಬೆಳಕಿಗೆ ಬಂದಿದೆ. ಕಾರ್ಯಾಚರಣೆಯ ಬಳಿಕ ಉಗ್ರರ ಬಳಿಯಿದ್ದ ದ್ರವರೂಪದ ಮತ್ತು ಸುಧಾರಿತ ಸ್ಫೋಟಕ ಸಾಧನಗಳನ್ನು ವಶಪಡಿಸಿಕೊಳ್ಳಲಾಗಿದೆ. ಅದನ್ನು ಬಳಸಿಕೊಂಡು ರೈಲು ಮತ್ತು ರೈಲು ಹಳಿಗಳನ್ನು ಸ್ಫೋಟಿಸಲು ಉಗ್ರರು ಸಂಚು ರೂಪಿಸಿದ್ದರು,’’ ಎಂದು ಗಡಿ ಭದ್ರತಾ ಪಡೆಯ ಹೆಚ್ಚುವರಿ ಮಹಾ ನಿರ್ದೇಶಕ ಅರುಣ್ ಕುಮಾರ್ ಬುಧವಾರ ತಿಳಿಸಿದ್ದಾರೆ. ರೈಲು ಮತ್ತು ಹಳಿಗಳನ್ನು ಸ್ಫೋಟಿಸಿ ದೊಡ್ಡ ವಿಧ್ವಂಸಕ ಕೃತ್ಯಕ್ಕೆ ಉಗ್ರರು ಯೋಜಿಸಿದ್ದರು. ಆದರೆ, ಬಿಎಸ್‌ಎಫ್ ಕಾರ್ಯಾಚರಣೆಯಿಂದ ದುರಂತ ತಪ್ಪಿದಂತಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಹೆಲಿಕಾಪ್ಟರ್ ಪತನ: ಮೂವರು ಸೇನಾಧಿಕಾರಿಗಳ ಸಾವು:
ಪಶ್ಚಿಮ ಬಂಗಾಳದ ಡಾರ್ಜಲಿಂಗ್ ಜಿಲ್ಲೆಯ ಸುಕ್ನಾ ಮಿಲಿಟರಿ ಕಾರ್ಯಪಡೆಯ ಘಟಕದಲ್ಲಿ ಸೇನೆಯ ‘ಚೀತಾ’ ಹೆಲಿಕಾಪ್ಟರ್ ಪತನಗೊಂಡ ಪರಿಣಾಮ ಸೇನಾಪಡೆಯ ಮೂವರು ಅಧಿಕಾರಿಗಳು ಮೃತಪಟ್ಟಿದ್ದಾರೆ. ಮಿಲಿಟರಿ ಕಾರ್ಯಪಡೆಯ ಘಟಕದಲ್ಲಿ ಬುಧವಾರ ಬೆಳಗ್ಗೆ 10.30ಕ್ಕೆ ಹೆಲಿಕಾಪ್ಟರ್ ಪತನಗೊಂಡಿದ್ದು, ಈ ಸಂದರ್ಭದಲ್ಲಿ ಕಿರಿಯ ಅಧಿಕಾರಿಯೊಬ್ಬರು ಗಂಭೀರವಾಗಿ ಗಾಯಗೊಂಡಿದ್ದಾನೆ. ಪ್ರತಿನಿತ್ಯದಂತೆ ಕಾರ್ಯಾಚರಣೆಗಿಳಿದ ಹೆಲಿಕಾಪ್ಟರ್ ಭೂ ಸ್ಪರ್ಶ ಮಾಡಬೇಕಾದ ಸಂದರ್ಭದಲ್ಲಿ ಈ ದುರಂತ ಸಂಭವಿಸಿದೆ. ಈ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ ಎಂದು ರಕ್ಷಣಾ ಸಚಿವಾಲಯದ ವಕ್ತಾರ ತಿಳಿಸಿದ್ದಾರೆ.
