ಅಪ್ಪ-ಅಮ್ಮರ ಅಂಕೆಯಿಲ್ಲದೆ, ಲಂಗುಲಗಾಮಿಲ್ಲದೆ ಬೆಳೆದ ಪ್ರಿಯದರ್ಶಿನಿ ಪಿಯುಸಿ ಫೇಲ್. ತನ್ನ ತಾತನ ಮನೆಯಲ್ಲೇ ಜೀವನ ನಡೆಸುವ ಈಕೆಗೆ ಪುಂಡ-ಪೋಕರಿಗಳ ಸಹವಾಸ ಹೆಚ್ಚು

ಮೈಸೂರು(ಮಾ. 16): ವೃದ್ಧ ದಂಪತಿಯ ಮೇಲೆ ಅವರ ಸ್ವಂತ ಮೊಮ್ಮಗಳೇ ಹಲ್ಲೆ ನಡೆಸಿದ್ದಲ್ಲದೇ, ಮನೆಗೆ ಬೆಂಕಿ ಹಚ್ಚಿ ಅವರನ್ನು ಸಾಯಿಸುವ ಹುನ್ನಾರ ನಡೆಸಿದ ಘಟನೆ ಬೆಳಕಿಗೆ ಬಂದಿದೆ. ಮೈಸೂರಿನ ಹೆಬ್ಬಾಳದಲ್ಲಿರುವ ಲಕ್ಷ್ಮಿಕಾಂತ ನಗರದ ನಿವಾಸಿ ಸೋಮಸುಂದರ್(85 ವರ್ಷ) ಮತ್ತವರ ಪತ್ನಿ ಲೀಲಾವತಿ ಹಲ್ಲೆಗೆ ಒಳಗಾದವರು. ಇವರ ಮೊಮ್ಮಗಳು ಪ್ರಿಯದರ್ಶಿನಿ (22) ಎಂಬವಳೇ ದುಷ್ಕೃತ್ಯ ನಡೆಸಿದವಳೆನ್ನಲಾಗಿದೆ.

ಪ್ರಿಯದರ್ಶಿನಿ ತನ್ನ ಮನೆಯ ಮುಂದುಗಡೆ ಇದ್ದ ಉಯ್ಯಾಲೆಗೆ ಬೆಂಕಿ ಹಚ್ಚಿ ಅಕ್ಕಪಕ್ಕದವರಿಗೆ ವಿಷಯ ಮುಟ್ಟಿಸಿದ್ದಾಳೆ. ಕೂಡಲೇ ಹುಷಾರಾದ ನೆರೆಮನೆಯವರು ಬೆಂಕಿ ಮನೆಯನ್ನೆಲ್ಲ ಆವರಿಸುವುದಕ್ಕೆ ಮೊದಲೇ ಪೊಲೀಸರಿಗೆ ಹಾಗೂ ಅಗ್ನಿಶಾಮಕದಳದವರಿಗೆ ಮಾಹಿತಿ ರವಾನಿಸಿದ್ದಾರೆ. ತತ್'ಕ್ಷಣ ಸ್ಥಳಕ್ಕಾಗಮಿಸಿದ ಪೊಲೀಸರು ಹಾಗೂ ಹೆಬ್ಬಾಳ ಅಗ್ನಿಶಾಮಕ ಠಾಣೆಯ ಸಿಬ್ಬಂದಿಯವರು ಬೆಂಕಿಯನ್ನು ಆರಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಡ್ರಗ್ಸ್, ಫ್ರೆಂಡ್ಸ್ ಖಯಾಲಿ:
ಅಪ್ಪ-ಅಮ್ಮರ ಅಂಕೆಯಿಲ್ಲದೆ, ಲಂಗುಲಗಾಮಿಲ್ಲದೆ ಬೆಳೆದ ಪ್ರಿಯದರ್ಶಿನಿ ಪಿಯುಸಿ ಫೇಲ್. ತನ್ನ ತಾತನ ಮನೆಯಲ್ಲೇ ಜೀವನ ನಡೆಸುವ ಈಕೆಗೆ ಪುಂಡ-ಪೋಕರಿಗಳ ಸಹವಾಸ ಹೆಚ್ಚು. ಡ್ರಿಂಕ್ಸ್, ಡ್ರಗ್ಸ್'ಗಳ ಚಟವನ್ನೂ ಹತ್ತಿಸಿಕೊಂಡಿದ್ದ ಈಕೆ ತನ್ನ ಮನೆಗೆ ಪೋಕರಿಗಳನ್ನು ಕರೆದುಕೊಂಡು ಮಜಾ ಮಾಡುತ್ತಿದ್ದಳು ಎಂದು ನೆರೆಮನೆಯವರು ದೂರುತ್ತಾರೆ.

ಟಾರ್ಚರ್ ಲೇಡಿ:
ಪ್ರಿಯದರ್ಶಿನಿಯ ತಂದೆಯು ಪತ್ನಿಗೆ ವಿಚ್ಛೇದನ ಕೊಟ್ಟು ದೂರ ಹೋಗಿರುತ್ತಾರೆ. ತಾಯಿ ಎರಡು ವರ್ಷದ ಹಿಂದೆಯೇ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ನಿವೃತ್ತ ಜೀವನ ಸಾಗಿಸುವ ತಾತನ ಮನೆಯಲ್ಲೇ ಪ್ರಿಯದರ್ಶಿನಿ ವಾಸವಿರುತ್ತಾಳೆ. ಡ್ರಗ್ಸ್ ಚಟವಿದ್ದ ಈಕೆ ದಿನವೂ ತನ್ನ ತಾತ ಮತ್ತು ಅಜ್ಜಿಗೆ ಹಿಂಸೆ ಕೊಡುತ್ತಿರುತ್ತಾಳಂತೆ. ಉಯ್ಯಾಲೆಗೆ ಬೆಂಕಿ ಹಚ್ಚುವ ದಿನ ಈಕೆ "ನಿಮ್ಮನ್ನು ಸಾಯಿಸುತ್ತೇನೆ" ಎಂದು ಬೆದರಿಕೆಯನ್ನೂ ಹಾಕಿದ್ದಳೆನ್ನಲಾಗಿದೆ.

ಹೆಬ್ಬಾಳು ಠಾಣೆ ಇನ್ಸಪೆಕ್ಟರ್ ತಿಮ್ಮೇಗೌಡ ಸ್ಥಳಕ್ಕೆ ಭೇಟಿ ನೀಡಿ ತನಿಖೆ ನಡೆಸಿದ್ದಾರೆ.