ಸಮಾಜವಾದಿ ಪಕ್ಷದಿಂದ ಉಚ್ಚಾಟಿತರಾಗಿರುವ ಉ.ಪ್ರ. ಸಿಎಂ ಅಖಿಲೇಶ್ ಯಾದವ್ ತಮ್ಮ ಚಿಕ್ಕಪ್ಪ ರಾಮಗೋಪಾಲ್ ಯಾದವ್ ಅವರೊಂದಿಗೆ ಸೇರಿ ಹೊಸ ಪಕ್ಷ ಸ್ಥಾಪಿಸುವ ಸಂಭಾವ್ಯತೆ ಇದೆ.

ಲಕ್ನೋ(ಡಿ. 30): ಉತ್ತರಪ್ರದೇಶದಲ್ಲಿ ಆಡಳಿತಾರೂಢ ಸಮಾಜವಾದಿ ಪಕ್ಷದೊಳಗೆ ಇಷ್ಟು ದಿನಗಳವರೆಗೆ ನಡೆಯುತ್ತಾ ಬಂದಿದ್ದ ಸಮರ ಇಂದು ತಾರಕಕ್ಕೇರಿದೆ. ಪಕ್ಷದ ಮುಖ್ಯಸ್ಥ ಮುಲಾಯಂ ಸಿಂಗ್ ಯಾದವ್ ಅವರು ತಮ್ಮ ಪುತ್ರ ಹಾಗೂ ಉ.ಪ್ರ. ಸಿಎಂ ಅಖಿಲೇಶ್ ಯಾದವ್ ಅವರನ್ನು ಪಕ್ಷದಿಂದ 6 ವರ್ಷಗಳ ಕಾಲ ಹೊರಹಾಕಿದ್ದಾರೆ. ಅಖಿಲೇಶ್ ಜೊತೆಗೆ ಮುಲಾಯಂ ಅವರು ತಮ್ಮ ಸೋದರ ರಾಮಗೋಪಾಲ್ ಯಾದವ್ ಅವರನ್ನೂ ಉಚ್ಛಾಟಿಸಿದ್ದಾರೆ. ಪಕ್ಷವನ್ನು ಉಳಿಸಲು ನನಗೆ ಬೇರೆ ಆಯ್ಕೆಗಳಿರಲಿಲ್ಲ ಎಂದು ಮುಲಾಯಂ ಸಿಂಗ್ ಯಾದವ್ ತಮ್ಮ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ.

ಿದನ್ನೂ ಓದಿ:

ಅಖಿಲೇಶ್’ರನ್ನು ಉಚ್ಛಾಟಿಸಿದ ಮುಲಾಯಂ ಹೇಳಿದ 5 ಮುಖ್ಯ ವಿಷಯಗಳು

ಮುಂಬರುವ ಚುನಾವಣೆಗೆ ಮುಲಾಯಂ ಸಿಂಗ್ ಯಾದವ್ ಅವರು ಅಭ್ಯರ್ಥಿಗಳನ್ನು ಪ್ರಕಟಿಸಿದ್ದರೂ ಅಖಿಲೇಶ್ ಯಾದವ್ ಅವರು ತಮ್ಮದೇ ಪಟ್ಟಿಯನ್ನ ಪ್ರಕಟಿಸಿದ್ದರು. ಇದು ಮುಲಾಯಂ ಸಿಂಗ್ ಅವರನ್ನು ಉದ್ರೇಕಿಸಿತ್ತು. ಪಕ್ಷದಿಂದ ಉಚ್ಚಾಟನೆಗೊಂಡ ಬಳಿಕ ಅಖಿಲೇಶ್ ಯಾದವ್ ಅವರ ಸಿಎಂ ಸ್ಥಾನಕ್ಕೆ ಸಂಚಕಾರ ಬಂದಂತಾಗಿದೆ. ಮುಲಾಯಂ ಅವರು ಹೊಸ ಸಿಎಂ ಅಭ್ಯರ್ಥಿಯ ಶೋಧದಲ್ಲಿದ್ದಾರೆ. ಶೀಘ್ರದಲ್ಲೇ ನೂತನ ಮುಖ್ಯಮಂತ್ರಿ ಅಭ್ಯರ್ಥಿಯ ಹೆಸರು ಘೋಷಣೆಯಾಗಲಿದೆ.

ಇದೇ ವೇಳೆ, ಸಮಾಜವಾದಿ ಪಕ್ಷದಿಂದ ಉಚ್ಚಾಟಿತರಾಗಿರುವ ಉ.ಪ್ರ. ಸಿಎಂ ಅಖಿಲೇಶ್ ಯಾದವ್ ತಮ್ಮ ಚಿಕ್ಕಪ್ಪ ರಾಮಗೋಪಾಲ್ ಯಾದವ್ ಅವರೊಂದಿಗೆ ಸೇರಿ ಹೊಸ ಪಕ್ಷ ಸ್ಥಾಪಿಸುವ ಸಂಭಾವ್ಯತೆ ಇದೆ.