ನಿನ್ನೆ ತಾನೇ ಜನಿಸಿದ, ಹೆಣ್ಣು ಹಸುಗೂಸನ್ನು ತಾಯಿಯೊಬ್ಬಳು ಬಾಳೆ ತೋಟದಲ್ಲಿ ಬಿಟ್ಟು ಹೋಗಿದ್ದು, ಅದನ್ನು ತೋಟದಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರು ರಕ್ಷಣೆ ಮಾಡಿದ್ದಾರೆ.
ಬಳ್ಳಾರಿ(ಮಾ.29): ನಿನ್ನೆ ತಾನೇ ಜನಿಸಿದ, ಹೆಣ್ಣು ಹಸುಗೂಸನ್ನು ತಾಯಿಯೊಬ್ಬಳು ಬಾಳೆ ತೋಟದಲ್ಲಿ ಬಿಟ್ಟು ಹೋಗಿದ್ದು, ಅದನ್ನು ತೋಟದಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರು ರಕ್ಷಣೆ ಮಾಡಿದ್ದಾರೆ.
ಬಳ್ಳಾರಿ ಜಿಲ್ಲೆಯ ಕಂಪ್ಲಿಯಲ್ಲಿ ಈ ಘಟನೆ ನಡೆದಿದೆ. ನಿನ್ನೆ ರಾತ್ರಿ ಕಂಪ್ಲಿಯ ಜೋಗಿ ಕಾಲುವೆಯ ಎಲ್ಲಮ್ಮನ ಗುಡಿ ಬಳಿಯ ತಮ್ಮ ಬಾಳೆ ತೋಟಕ್ಕೆ ನೀರು ಹಾಯಿಸಲು ಹೋದಾಗ ಕಾರ್ಮಿಕರಿಗೆ ಆಶ್ಚರ್ಯ ಕಾದಿತ್ತು. ಅಲ್ಲಿ ಸ್ವಲ್ಪ ಹೊತ್ತಿನ ಮುಂದೆ ಜನಿಸಿದ ಹೆಣ್ಣು ಶಿಶುವೊಂದು ಅಳುತ್ತಿತ್ತು. ಇದನ್ನು ನೋಡಿದ ಕಾರ್ಮಿಕರು ಮಗುವಿನ ರಕ್ಷಣೆ ಮಾಡಿದ್ದಾರೆ. ಬಳಿಕ ಅವರು ಮಕ್ಕಳನ್ನು ರಕ್ಷಣೆ ಮಾಡುವ ಡಾನ್ ಬಾಸ್ಕೋ ಸಂಸ್ಥೆಯ ಕಲಾವತಿ ಅವರಿಗೆ ಪೋನ್ ಮಾಡಿ ಮಗುವನ್ನು ರಕ್ಷಣೆ ಮಾಡಿ ಸ್ಥಳೀಯ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಮಗುವನ್ನು ಪರೀಕ್ಷಿಸಿದ ವೈದ್ಯ ಚಂದ್ರಮೋಹನ್ ಚಿಕಿತ್ಸೆ ನೀಡಿದ್ದು, ಮಗು 2.6 ಕಿಲೋ ತೂಕ ಇದ್ದು ಆರೋಗ್ಯವಂತವಾಗಿದೆ ಎಂದು ಹೇಳಿದರು. ನಂತರ ಮಗುವನ್ನು ಜಿಲ್ಲಾ ಮಕ್ಕಳ ರಕ್ಷಣಾ ಘಟಕಕ್ಕೆ ಹಸ್ತಾಂತರಿಸಲು ಆರೋಗ್ಯಾಧಿಕಾರಿಗಳು ಮುಂದಾಗಿದ್ದಾರೆ.
